ಶನಿವಾರ, ಆಗಸ್ಟ್ 24, 2019
27 °C
ಸಿಐಟಿಯು ರಾಷ್ಟ್ರೀಯ ಸಾಮಾನ್ಯ ಸಮಿತಿ ಸಭೆಯಲ್ಲಿ ಅಧ್ಯಕ್ಷೆ ಹೇಮಲತಾ ಆತಂಕ

ಸಾರ್ವಜನಿಕ ವಲಯ ಭಗ್ನಗೊಳಿಸುತ್ತಿರುವ ಮೋದಿ

Published:
Updated:
Prajavani

ಹಾಸನ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಸಾರ್ವಜನಿಕ ವಲಯವನ್ನು ಭಗ್ನಗೊಳಿಸುತ್ತಿದೆ ಎಂದು ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಕೆ. ಹೇಮಲತಾ ಆರೋಪಿಸಿದರು.

ಅಂಬೇಡ್ಕರ್ ಭವನದಲ್ಲಿ ಆರಂಭವಾದ ಸಿಐಟಿಯು ರಾಷ್ಟ್ರೀಯ ಸಾಮಾನ್ಯ ಸಮಿತಿ ಸಭೆಯಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ದೇಶದ ಇಡೀ ಆರ್ಥಿಕತೆ ಮತ್ತು ಜನರನ್ನು ಮಾರುಕಟ್ಟೆಯ ಹಿಡಿತಕ್ಕೆ ನೀಡಲಾಗುತ್ತಿದೆ. ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ಮಾಡಲಾಗಿದೆ. ಎಲ್ಲಾ ರೀತಿಯ ಕಲ್ಯಾಣ ಕಾರ್ಯಕ್ರಮ ನಾಶಪಡಿಸಲಾಗುತ್ತಿದೆ ಎಂದು ದೂರಿದರು.

ವಿದೇಶಿ ನೇರ ಬಂಡವಾಳ ಹೂಡಿಕೆಗೆ ಸಂಪೂರ್ಣವಾಗಿ ಬಾಗಿಲು ತೆರೆಯುವ ಮೂಲಕ ಸಾಮ್ರಾಜ್ಯಶಾಹಿ, ಅಂತರರಾಷ್ಟ್ರೀಯ ಹಣಕಾಸು ಮತ್ತು ಕಾರ್ಪೊರೇಟ್ ಶಕ್ತಿಗಳಿಗೆ ಗುಲಾಮನಂತೆ ಸಂಪೂರ್ಣ ಶರಣಾಗಲಾಗಿದೆ. ಬಂಡವಾಳಶಾಹಿ ವ್ಯವಸ್ಥೆ ಗಟ್ಟಿಗೊಳಿಸಲು ಜನರನ್ನು ಜಾತಿ, ಮತ ಮತ್ತು ಧರ್ಮದ ಆಧಾರದಲ್ಲಿ ವಿಭಜಿಸಲಾಗುತ್ತಿದೆ. ವಿಚಾರವಾದಿಗಳ ಮೇಲೆ ದಾಳಿ ನಡೆಸುವ ಮೂಲಕ ಸಣ್ಣ ಪ್ರತಿರೋಧವನ್ನೂ ಸಹಿಸದ ನಿರಂಕುಶ ಆಡಳಿತದತ್ತ ದೇಶ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಪಂಚದಾದ್ಯಂತ ನವ ಉದಾರವಾದಿ ಆರ್ಥಿಕ ವ್ಯವಸ್ಥೆಯು ವಿಫಲವಾಗುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಯು ತಳಪಾಯ ಅಲುಗಾಡುತ್ತಿದೆ. ಜನರು ಹೊಸ ಪರ್ಯಾಯಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ, ಬಂಡವಾಳಶಾಹಿ ವ್ಯವಸ್ಥೆಯು ಅಷ್ಟು ಸುಲಭವಾಗಿ ಸೋಲು ಒಪ್ಪಿಕೊಳ್ಳುವುದಿಲ್ಲ, ತನ್ನ ಅಸ್ತಿತ್ವಕ್ಕಾಗಿ ಜನರ ಒಗ್ಗಟ್ಟನ್ನು ಒಡೆಯಲು ಎಲ್ಲಾ ರೀತಿಯ ಅಡ್ಡದಾರಿಗಳನ್ನು ಹಿಡಿಯುವ ಅಪಾಯ ಇದ್ದೇ ಇದೆ ಎಂದು ಅಭಿಪ್ರಾಯಪಟ್ಟರು.

ನಾಲ್ಕು ದಿನಗಳ ಸಾಮಾನ್ಯ ಸಮಿತಿ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳಿಂದ ಒಟ್ಟು 400 ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಕೇರಳ ಎಡರಂಗ ಸರ್ಕಾರದ ಸಚಿವರಾದ ಕಡಕಂಪಲ್ಲಿ ಸುರೇಂದ್ರನ್, ಟಿ.ಪಿ. ರಾಮಕೃಷ್ಣ ಮತ್ತು ಜೆ. ಮರ್ಸಿಕುಟ್ಟಿ ಅಮ್ಮ, ರಾಜ್ಯಸಭೆ ಸದಸ್ಯ ಎಲಮರಮ್ ಕರೀಮ್ ಹಾಗೂ ತ್ರಿಪುರ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಪತ್ನಿ ಪಾಂಚಲಿ ಭಟ್ಟಾಚಾರ್ಯ ಪ್ರತಿನಿಧಿಗಳಾಗಿ ಭಾಗವಹಿಸಿದ್ದಾರೆ.

ಉಪಾಧ್ಯಕ್ಷ ಎ.ಕೆ. ಪದ್ಮನಾಭನ್, ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಹಾಜರಿದ್ದರು.

ಸಂಸತ್ ಸಭೆಯ ಮಾದರಿಯಲ್ಲಿ ಮೊದಲ ಬಾರಿಗೆ ಸಭೆಯಲ್ಲಿ ಮಂಡನೆಯಾಗುವ ವಿಷಯಗಳು ತಕ್ಷಣ ಪ್ರತಿನಿಧಿಗಳ ಮಾತೃಭಾಷೆಗೆ ತರ್ಜುಮೆಯಾಗಿ ಕೇಳಿಸಿಕೊಳ್ಳುವಂತೆ ಧ್ವನಿವರ್ಧಕದ ವ್ಯವಸ್ಥೆ ಮಾಡಲಾಗಿದೆ.

ಸಭೆಯಲ್ಲಿ ರಾಷ್ಟ್ರ ಮತ್ತು ಕಾರ್ಮಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು.

Post Comments (+)