ಸ್ಕೌಟ್ಸ್, ಗೈಡ್ಸ್ ಮಕ್ಕಳಿಂದ ಭತ್ತದ ಸಸಿ ನಾಟಿ

7
ಮುಟ್ಟನಹಳ್ಳಿಯಲ್ಲಿ ‘ನೇಗಿಲ ಯೋಗಿಗೆ ನಮನ ’

ಸ್ಕೌಟ್ಸ್, ಗೈಡ್ಸ್ ಮಕ್ಕಳಿಂದ ಭತ್ತದ ಸಸಿ ನಾಟಿ

Published:
Updated:
Prajavani

ಹಾಸನ : ಸ್ವಾತಂತ್ರ್ಯ ಬಂದು ಆರು ದಶಕ ಕಳೆದರೂ ರೈತರನ್ನು ಕೈ ಹಿಡಿಯುವಂತಹ ಕೆಲಸವನ್ನು ಯಾವುದೇ ಸರ್ಕಾರ ಮಾಡದಿರುವುದು ನೋವಿನ ಸಂಗತಿ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯ ಆಯುಕ್ತ ವೈ.ಎಸ್.ವೀರಭದ್ರಪ್ಪ ವಿಷಾದ ವ್ಯಕ್ತಪಡಿಸಿದರು.

ತಾಲೂಕಿನ ಗೊರೂರು ಸಮೀಪದ ಮುಟ್ಟನಹಳ್ಳಿ ಗ್ರಾಮದ ರೈತ ರುದ್ರೇಶ್ ಗೌಡರ ಜಮೀನಿನಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಏಕಲವ್ಯ ಓಪನ್ ಗ್ರೂಪ್ ಹಾಗೂ ಬೆಸ್ಟ್ ಗ್ರಾಮೀಣಾಭಿವೃದ್ಧಿ ಹಾಗೂ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ನೇಗಿಲ ಯೋಗಿಗೆ ನಮನ’ ಭತ್ತ ನಾಟಿ ಮಾಡುವ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಶಕ್ಕೆ ಅನ್ನ ಕೊಡುವ ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಕೇವಲ ಚುನಾವಣೆ ಬಂದಾಗ ಮಾತ್ರ ನೆನಪಿಸಿಕೊಳ್ಳುವುದು ಬಿಟ್ಟರೇ ಇದುವರೆಗೂ ಅನ್ನದಾತರ ಸಮಸ್ಯೆ ಕೇಳುತ್ತಿಲ್ಲ. ದೇಶದಲ್ಲಿ ಸುಮಾರು ಶೇಕಡಾ 67 ರಷ್ಟು ರೈತರು ಗ್ರಾಮೀಣ ಭಾಗದಲ್ಲಿ ಜೀವನ ನಡೆಸುತ್ತಿದ್ದಾರೆ. ನಗರ ಪ್ರದೇಶದ ಜೀವನಕ್ಕೆ ಹೊಂದಿಕೊಳ್ಳಲಾಗದೆ ಬಡವರಾಗಿಯೇ ಉಳಿಯುತ್ತಿರುವುದು ನಿಜಕ್ಕೂ ಶೋಚನೀಯ. ಗ್ರಾಮೀಣ ಭಾಗಕ್ಕೆ ನೀಡಬೇಕಾದ ಮೂಲ ಸೌಕರ್ಯ ನೀಡುವಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ರಾಜಕೀಯಕ್ಕೆ ಮಾತ್ರ ಇವರನ್ನು ಬಳಸಿಕೊಳ್ಳುತ್ತಿರುವುದು ದೊಡ್ಡ ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಏಕಲವ್ಯ ಓಪನ್ ಗ್ರೂಪ್ಸ್ ನ ಮುಖ್ಯಸ್ಥ ಆರ್.ಜಿ.ಗಿರೀಶ್ ಮಾತನಾಡಿ, ‘ಗ್ರಾಮಗಳು ಸ್ವಾವಲಂಬಿಯಾದಾಗ ಮಾತ್ರ ಆರ್ಥಿಕ ಮಟ್ಟ ಸುಧಾರಿಸುವುದಕ್ಕೆ ಸಹಕಾರಿಯಾಗುತ್ತದೆ. ಜಿಲ್ಲೆಯ ಸಾಕಷ್ಟು ಹಳ್ಳಿಗಳ ಕೆರೆ, ಕಟ್ಟೆಗಳಲ್ಲಿ ನೀರಿಲ್ಲದೇ ಈಗಾಗಲೇ ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ಹಸಿರಾಗಿ ಇರಬೇಕಾಗಿದ್ದ ಕೃಷಿಭೂಮಿಯೂ ಒಣಗಿ ಬರಡಾಗಿದೆ. ತಿಂಗಳಿಗೊಮ್ಮೆ ಗ್ರಾಮೀಣ ಜನರ ಬದುಕನ್ನು ತಿಳಿಯಲು ಹಳ್ಳಿಗಳಿಗೆ ಭೇಟಿ ನೀಡಿ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

‘ತಾಲ್ಲೂಕಿನ ವಿವಿಧಡೆ ರೈತರಿಗೆ ಶಕ್ತಿ ತುಂಬುವ ಸಲುವಾಗಿ ಬಡತನ ರೇಖೆಗಿಂತ ಕೆಳಗೆ ಇರುವ ರೈತರನ್ನು ಆಯ್ಕೆ ಮಾಡಿ, ಭತ್ತ ಕೊಯ್ಲು ಮಾಡುವುದು, ಬಣವೆ ಹಾಕುವುದು, ರಾಗಿ ಕಟಾವು, ಜೋಳ ಮುರಿಯುವ ಕೆಲಸವನ್ನು ಮಾಡಲಾಗುತ್ತಿದೆ’ ಎಂದರು.
ವೈ.ಎಸ್.ಆರ್. ಫೌಂಡೇಶನ್ ಅಧ್ಯಕ್ಷ ಯಲಗುಂದ ರಮೇಶ್, ರೈತ ರುದ್ರೇಶ್ ಮತ್ತು ಸಂತೋಷ್, ರೋವರ್ ಕುಮಾರಸ್ವಾಮಿ, ಬಿ.ಆರ್.ವರ್ಷಿಣಿ, ರೋವರ್ ಮನುಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !