ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಿಂದ ಬಂದವರಿಗೆ ಸೀಲ್‌, ಹೋಂ ಕ್ವಾರಂಟೈನ್‌: ಅಧಿಕಾರಿಗಳಿಗೆ ಡಿ.ಸಿ ಸೂಚನೆ

Last Updated 8 ಮೇ 2021, 12:22 IST
ಅಕ್ಷರ ಗಾತ್ರ

ಹಾಸನ: ಕೋವಿಡ್ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಮೇ 10ರಿಂದ 24 ರ ವರೆಗೆ ಸರ್ಕಾರ ಘೋಷಿಸಿರುವ ಸಂಪೂರ್ಣ ಲಾಕ್‍ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿ, ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಲ್ಲಾ ತಾಲ್ಲೂಕಿನ ತಹಶೀಲ್ದಾರ್ ಹಾಗೂ ಅಧಿಕಾರಿಗಳ ಜೊತೆ ಶನಿವಾರ ವಿಡಿಯೊ ಸಂವಾದ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಿಂದ ಬಂದಂತಹ ವ್ಯಕ್ತಿಗಳಿಗೆ ಸೀಲ್ ಹಾಕಿ, ಹೋಂ ಕ್ವಾರಂಟೈನ್‌ ಮಾಡಬೇಕು. ಮಾಸ್ಕ್ ಧರಿಸದೆ, ಅಂತರ ಕಾಪಾಡದೆ ಅನಗತ್ಯವಾಗಿ ಓಡಾಡುವವರಿಗೆ ದಂಡ ವಿಧಿಸಬೇಕು. ಸ್ಥಳೀಯವಾಗಿ ಜನರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಮನೆಯಲ್ಲಿಯೇ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯತ್ತಿರುವವರ ಮೇಲೆ ಹೆಚ್ಚಿನ ನಿಗಾವಹಿಸಲು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗೆಸೂಚಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಲಾಕ್‍ಡೌನ್ ಸಂದರ್ಭದಲ್ಲಿ ಅವಶ್ಯಕ ಸಾಮಗ್ರಿಗಳಿಗೆ ಬೆಳಿಗ್ಗೆ 6 ರಿಂದ 10ಗಂಟೆವರೆಗೆ ಅವಕಾಶವಿದೆ. ಹೋಟೆಲ್‍ಗಳಲ್ಲಿ ಪಾರ್ಸಲ್‍ಗಳಿಗೆ ಮಾತ್ರಅವಕಾಶವಿದ್ದು, ಯಾವುದೇ ವಾಹನದಲ್ಲಿ ಬರುವಂತಿಲ್ಲ. ನಡೆದುಕೊಂಡು ಬಂದುತೆಗೆದುಕೊಂಡು ಹೋಗಬಹುದು ಎಂದರು.

ಅನಗತ್ಯವಾಗಿ ಆರ್‌ಟಿ–ಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳದೆ ಕೊರೊನಾ ಸೋಂಕು ಲಕ್ಷಣ ಇರುವವರು ಮಾತ್ರ ಪರೀಕ್ಷೆ ಮಾಡಿಸಿಕೊಂಡು, ವರದಿ ಬರುವ ತನಕ ಪ್ರತ್ಯೇಕವಾಗಿಇರಬೇಕು. ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯಲು ವಸತಿ ನಿಲಯಗಳನ್ನು ಬಳಸಿಕೊಳ್ಳಬೇಕು.ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇಂದ್ರಗಳನ್ನು ತೆರೆದು, ಅಗತ್ಯ ಚಿಕಿತ್ಸೆ ನೀಡುವುದರ ಜೊತೆಗೆ ಪೌಷ್ಟಿಕ ಆಹಾರ ನೀಡಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.

ಆಸ್ಪತ್ರೆಗಳಿಗೆ ಅಗತ್ಯ ಸಿಬ್ಬಂದಿಯನ್ನು ಗೌರವಧನದ ಆಧಾರದಲ್ಲಿ ತಾತ್ಕಾಲಿಕವಾಗಿನೇಮಕ ಮಾಡಿಕೊಳ್ಳಬೇಕು. ಅಗತ್ಯ ಔಷಧಿಗಳ ಖರೀದಿಗೆಎಸ್.ಡಿ.ಆರ್.ಎಫ್ ನಿಂದ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಕಾಳಸಂತೆಯಲ್ಲಿ ರೆಮ್‍ಡಿಸಿವಿರ್‌ ಚುಚ್ಚುಮದ್ದು ಮಾರಾಟ ಮಾಡುತ್ತಿರುವುದು ಕೇಳಿಬರುತ್ತಿದ್ದು, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೋವಿಡ್ ಚಿಕಿತ್ಸೆಗಾಗಿ ಹಾಸಿಗೆಗಳ ನಿರ್ವಹಣೆ ಹಾಗೂ ಜಿಲ್ಲಾ ಕೋವಿಡ್ ವಾರ್ ರೂಂ ನಿರ್ವಹಣೆ ಮೇಲುಸ್ತುವಾರಿಗೆ ನೋಡಲ್ ಅಧಿಕಾರಿಯಾಗಿ ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹೊಳೆನರಸೀಪುರದಿಂದ ವಿಡಿಯೊ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಎಚ್.ಡಿ ರೇವಣ್ಣ, ಕಾಳಸಂತೆಯಲ್ಲಿ ರೆಮ್‍ಡಿಸಿವಿರ್‌ ಮಾರಾಟವಾಗುತ್ತಿರುವುದು ಕೇಳಿ ಬರುತ್ತಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ಮಾತನಾಡಿ, ಕೊರೊನಾ ಸೋಂಕು ತಡೆಗೆ 70 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಖಾಸಗಿಯವರಿಂದ 60 ಜಂಬೂ ಖಾಲಿ ಸಿಲಿಂಡರ್‌ಗಳನ್ನು ಸಂಗ್ರಹಿಸಲಾಗಿದೆ. ಜಿಲ್ಲಾಡಳಿತ ಆಮ್ಲಜನಕ ಭರ್ತಿ ಮಾಡಿಸಿಕೊಡಬೇಕು. ಕೊಣನೂರಿನಲ್ಲಿ ಕೋವಿಡ್ ಕೇರ್ ಸೆಂಟರ್‌ ತೆರೆದು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಮಾತನಾಡಿ, ಪ್ರಾಥಮಿಕ ಸಂಪರ್ಕಿತರ ಪತ್ತೆ ಕಾರ್ಯ ಚುರುಕುಗೊಳಿಸಿ ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ. ಸತೀಶ್, ಉಪವಿಭಾಗಾಧಿಕಾರಿಗಳಾದ ಬಿ.ಎ. ಜಗದೀಶ್, ಗಿರೀಶ್ ನಂದನ್, ಆರ್.ಸಿ.ಎಚ್ ಅಧಿಕಾರಿ ಕಾಂತರಾಜ್, ನಗರಸಭೆ ಆಯುಕ್ತ ಕೃಷ್ಣಮೂರ್ತಿ, ಎಲ್ಲಾ ತಾಲ್ಲೂಕಿನ ತಹಶೀಲ್ದಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT