ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದಲ್ಲಿ ಅರಳಿದ ಕ್ರೀಡಾ ಪ್ರತಿಭೆ

ಭಾರತ ಹಾಕಿ ತಂಡಕ್ಕೆ ಶೇಷೇಗೌಡ ಆಯ್ಕೆ; ಬೆಂಗಳೂರಿನಲ್ಲಿ 6 ತಿಂಗಳಿನಿಂದ ಅಭ್ಯಾಸ
Last Updated 14 ಮೇ 2022, 16:20 IST
ಅಕ್ಷರ ಗಾತ್ರ

ಹಾಸನ: ನಗರದ ಬೀರನಹಳ್ಳಿ ಅಂಗಳದ ರಾಘವೇಂದ್ರ ಕಾಲೊನಿ ಪ್ರತಿಭೆ ಶೇಷೇಗೌಡ ಮೇ 23ರಿಂದ ಜೂನ್ 1ರವರೆಗೆ ಜಕರ್ತಾದಲ್ಲಿ ನಡೆಯುವ ಏಷ್ಯನ್ ಹಾಕಿ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಹಾಕಿ ಕ್ರೀಡೆಯಲ್ಲಿ ಭಾರತ ತಂಡ ವನ್ನು ಪ್ರತಿನಿಧಿಸುತ್ತಿರುವ ಜಿಲ್ಲೆಯ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೇಷೇಗೌಡ ಅವರೊಂದಿಗೆ ಕೊಡಗಿನ ಎಸ್.ಸುನಿಲ್, ಆಭರಣ ಸುದೇವ್‌ ಈ ತಂಡಕ್ಕೆ ಆಯ್ಕೆಯಾದ ಕನ್ನಡಿಗರು.

‌ಗಾರೆ ಕೆಲಸಗಾರ ಮಹೇಶ್ ಹಾಗೂ ಅಡುಗೆ ಕೆಲಸ ಮಾಡುವ ಕಮಲಾ ದಂಪತಿ ಮಗ ಶೇಷೇಗೌಡ. ಅವರು ಬಾಲ್ಯದಿಂದಲೇ ಹಾಕಿಯನ್ನು ಉಸಿರಾಗಿಸಿಕೊಂಡು ಬೆಳೆದವರು. ತಂಗಿ ಕೋಮಲಾ ಕೂಡ ಹಾಕಿ ಆಟಗಾರ ರಾಗಿದ್ದು, ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಸಾಯಿ ಕ್ರೀಡಾ ಹಾಸ್ಟೆಲ್‌ನಲ್ಲಿ ಹಾಕಿ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸೀನಿಯರ್ ಕ್ರೀಡಾಕೂಟ 2017 ಮತ್ತು 2019ರಲ್ಲಿ ಚಿನ್ನ, 2021ರಲ್ಲಿ ಬೆಳ್ಳಿ, 2018ರಲ್ಲಿ ಕಂಚಿನ ಪದಕ ಗೆದ್ದಿರುವ ಶೇಷೇಗೌಡ 2014ರಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಚಿನ್ನ 2011ರಲ್ಲಿ ನಡೆದ 17 ವರ್ಷದೊಳಗಿನ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

ನಾಲ್ಕನೇ ತರಗತಿಯಲ್ಲೇ ಕ್ರೀಡಾಂಗಣಕ್ಕೆ ಬರುತ್ತಿದ್ದ ಶೇಷೇಗೌಡರ ಪ್ರತಿಭೆ ಗುರುತಿಸಿದ್ದ ತರಬೇತುದಾರ ರವೀಶ್ ಅವರು ತರಬೇತಿ ನೀಡಿ ಕೊಡಗು ಜಿಲ್ಲೆಯ ಕ್ರೀಡಾ ವಸತಿ ಶಾಲೆಗೆ ಸೇರಿಸಿದರು.

ಪದವಿ ಶಿಕ್ಷಣ ಮುಗಿಸುವವರೆಗೆ ಬೆಂಗಳೂರಿನ ಕ್ರೀಡಾ ಶಾಲಾ ವಸತಿ ನಿಲಯದಲ್ಲಿದ್ದು, ತರಬೇತಿ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸಾಧನೆ ಮಾಡಿದ ಅವರಿಗೆ ರೈಲ್ವೆ ಇಲಾಖೆಯಲ್ಲಿ ಚೆಕಿಂಗ್ ಇನ್‌ಸ್ಪೆಕ್ಟರ್ ಹುದ್ದೆ ನೀಡಿದೆ.

ರೈಲ್ವೆ ತಂಡಕ್ಕೆ ಆಟವಾಡಿಕೊಂಡೇ ನಿರಂತರ ಅಭ್ಯಾಸದಲ್ಲಿ ತೊಡಗಿದರು. ಭಾರತ ತಂಡಕ್ಕೆ ಆಡುವ ಕನಸು ನನಸಾಗಿಸಲು ಬೆವರು ಹರಿಸಿದರು. ಆರು ತಿಂಗಳಿನಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಆಯ್ಕೆ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT