ಮಂಗಳವಾರ, ಅಕ್ಟೋಬರ್ 15, 2019
22 °C
ವಿಧಾನಮಂಡಲ ಅಧಿವೇಶನದಲ್ಲಿ ಪ್ರಶ್ನಿಸುವೆ: ಸಿಎಂ ವಿರುದ್ಧ ರೇವಣ್ಣ ಗರಂ

ಏಳು ಸಾವಿರ ಕೋಟಿ ಕಾಮಗಾರಿಗೆ ತಡೆ

Published:
Updated:
Prajavani

ಹಾಸನ: ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯಲ್ಲಿ 2017ರಿಂದ 2010ರ ವರೆಗೆ ₹ 7,0150 ಕೋಟಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಡೆ ನೀಡಿರುವುದನ್ನು ವಿಧಾನಮಂಡಲ ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು ಎಂದು ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು.

ಮೈಸೂರು ದಕ್ಷಿಣ ವಲಯ ಮುಖ್ಯ ಎಂಜಿನಿಯರ್‌ ವ್ಯಾಪ್ತಿಯ (ಮಂಡ್ಯ, ಮೈಸೂರು, ಕೊಡಗು ಜಿಲ್ಲೆ) ಕೆಆರ್‌ಎಸ್‌, ಕಬಿನಿ, ಹಾರಂಗಿ ಯೋಜನೆಗಳ ₹ 5 ಸಾವಿರ ಕೋಟಿ, ಹೇಮಾವತಿ ವಲಯ ಎಂಜಿನಿಯರ್ ಕಚೇರಿ ವ್ಯಾಪ್ತಿಯ (ಹಾಸನ, ಮಂಡ್ಯ ಜಿಲ್ಲೆ) ಯಲ್ಲಿ ₹ 1,150 ಕೋಟಿ ಹಾಗೂ ತುಮಕೂರು ನಾಲಾ ವಲಯ ಮುಖ್ಯ ಎಂಜಿನಿಯರ್‌ ವ್ಯಾಪ್ತಿಯಲ್ಲಿ ₹ 500 ಕೋಟಿ ಕಾಮಗಾರಿಗೆ ತಡೆ ನೀಡಿದ್ದಾರೆ. ಇದಕ್ಕೆ ಹೆದರಿ ಓಡಿ ಹೋಗುವುದಿಲ್ಲ. ಸನ್ನಿವೇಶ ಬಂದರೆ ವಿಧಾನಸಭೆಯಲ್ಲಿ ಮಲಗುತ್ತೇನೆ. ಕೀಳು ಮಟ್ಟದ ರಾಜಕಾರಣ ಮಾಡುತ್ತಿರುವ ಬಿಎಸ್‌ವೈಗೆ ತಿರುಗು ಬಾಣವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳ ವ್ಯಾಪ್ತಿಗೆ ಒಳಪಡುವ ಈ ಕಾಮಗಾರಿಗಳನ್ನು ಅನರ್ಹ ಶಾಸಕರು ಹಾಗೂ ಬಿಜೆಪಿ ಶಾಸಕರ ಕ್ಷೇತ್ರಕ್ಕೆ ವರ್ಗಾಯಿಸಿ, ಅನುಮತಿ ಕೊಡಲು ನಿರ್ಧರಿಸಿದ್ದಾರೆ. ₹ 5 ಲಕ್ಷ ವೆಚ್ಚದ ಕಾಮಗಾರಿಗೆ ಸಿಎಂ ಕಚೇರಿಯಿಂದಲೇ ಅನುಮತಿ ಪಡೆಯಬೇಕೆಂಬ ಸೂಚನೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಐದು ಬಾರಿ ಶಾಸಕನಾಗಿರುವ ನನಗೆ ರಾಜಕೀಯ ಮಾಡುವುದು ಗೊತ್ತು. ಹಿಂದಿನ ಸರ್ಕಾರ ಅನುಮತಿ ನೀಡಿದ್ದ ಕಾಮಗಾರಿಗಳಿಗೆ ತಡೆ ನೀಡಿದ ಮೊದಲ ಸಿ.ಎಂ ಎಂಬ ಕೀರ್ತಿ ಬಿಎಸ್‌ವೈಗೆ ಸಲ್ಲಬೇಕು’ ಎಂದು ವ್ಯಂಗ್ಯವಾಡಿದ ಅವರು, ‘ದ್ವೇಷದ ರಾಜಕಾರಣ ಬಹಳ ದಿನ ಉಳಿಯುವುದಿಲ್ಲ. ಇದೇ ರೀತಿ ನಡೆದುಕೊಂಡರೆ ಆ ಕ್ಷೇತ್ರದ ಜನರು ದಂಗೆ ಏಳುವ ಕಾಲ ದೂರವಿಲ್ಲ. ಜನಪರ ಯೋಜನೆಗಳಿಗೆ ನೀಡಿದ ಅನುದಾನ ತಡೆ ಹಿಡಿಯುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ವಿರೋಧ ಪಕ್ಷದವರನ್ನು ಎದುರಿಸಲು ಆಗದೇ ಕೇವಲ ಅಧಿವೇಶನವನ್ನು ಮೂರು ದಿನಕ್ಕೆ ಸೀಮಿತಗೊಳಿಸಿದ್ದಾರೆ. ಉತ್ತರ ಕರ್ನಾಟದಲ್ಲಿ ಪ್ರವಾಹದಿಂದ ಜನರು ಬದುಕು ಬೀದಿಗೆ ಬಿದ್ದಿದೆ. ಬಿಡಿಗಾಸು ಪರಿಹಾರ ನೀಡಿಲ್ಲ. ಕೇಂದ್ರದ ಮೇಲೆ ಬೊಟ್ಟು ಮಾಡಿ ಬಿಜೆಪಿ ಕಾಲಹರಣ ಮಾಡುತ್ತಿದೆ. ವಿರೋಧ ಪಕ್ಷಗಳನ್ನು ದಮನ ಮಾಡಲು ಹೊರಟರೆ ಶಿಕ್ಷೆ ಖಚಿತ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಹಣ ಲೂಟಿ ಮಾಡಿರುವ ಬಗ್ಗೆ ದಾಖಲೆ ಇದ್ದರೆ ಬಿಜೆಪಿ ಬಿಡುಗಡೆ ಮಾಡಲಿ. ಅದನ್ನು ಬಿಟ್ಟು ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದರು.

Post Comments (+)