ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ದೇವತೆ ದರ್ಶನ ಪಡೆದ 5 ಲಕ್ಷ ಭಕ್ತರು

ದೇವಿ ಸನ್ನಿಧಿಯಲ್ಲಿ ಹೂ, ನೈವೇದ್ಯ, ಹಣತೆ ಇಟ್ಟ ಅರ್ಚಕರು
Last Updated 29 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಹಾಸನ: ಭಕ್ತರ ಜೈಕಾರ ಹಾಗೂ ಮಂಗಳ ವಾದ್ಯದ ನಡುವೆ ಹಾಸನದ ಅಧಿದೇವತೆ ಹಾಸನಾಂಬೆಯ ಗರ್ಭಗುಡಿ ಬಾಗಿಲನ್ನು ಮಂಗಳವಾರ ಮಧ್ಯಾಹ್ನ ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು.

ಬಲಿಪಾಡ್ಯಮಿ ಮರುದಿನ ಬಾಗಿಲು ಮುಚ್ಚುವುದು ಸಂಪ್ರದಾಯ. ಈ ಬಾರಿ ಬಲಿಪಾಡ್ಯಮಿಯಂದೇ ಮಧ್ಯಾಹ್ನ 1.15ಕ್ಕೆ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಬಾಗಿಲು ಬಂದ್‌ ಮಾಡಲಾಯಿತು. ಈ ವೇಳೆ ಪಂಜಿನ ಪೂಜೆ, ಮಂಗಳವಾದ್ಯ, ಹಾಸನಾಂಬೆಯ ಪರ ಜಯಘೋಷ ಮೊಳಗಿತು. ದೇವಿಯ ಸನ್ನಿಧಿಯಲ್ಲಿ ಹೂ, ನೈವೇದ್ಯ ಇಟ್ಟು, ದೀಪ ಹಚ್ಚಲಾಯಿತು.

ಬಾಗಿಲು ಹಾಕಿದ ಬಳಿಕ ದೇವಿಗೆ ಅಲಂಕರಿಸಿದ್ದ ಆಭರಣಗಳ ಉತ್ಸವ ನಡೆಯಿತು. ದಾರಿಯುದ್ದಕ್ಕೂ ಬಿದ್ದ ಕರಿಮೆಣಸು ಕಾಳನ್ನು ಸಂಗ್ರಹಿಸಲು ಜನರು ಮುಗಿಬಿದ್ದರು.

ಅ. 17 ರಿಂದ ದರ್ಶನ ಭಾಗ್ಯ ಕರುಣಿಸಿದ ಹಾಸನಾಂಬೆ ಮತ್ತೆ ಒಂದು ವರ್ಷ ಮರೆಗೆ ಸರಿದಳು. 13 ದಿನಗಳ ಮಹೋತ್ಸವಕ್ಕೆ ಅದ್ಧೂರಿ ತೆರೆ ಬಿತ್ತು. ಮುಂದಿನ ವರ್ಷ ನ. 5 ರಿಂದ 17 ರ ವರೆಗೆ ಹಾಸನಾಂಬೆ ದರ್ಶನೋತ್ಸವ ನಿಗದಿಯಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಪ್ರೀತಂ ಗೌಡ, ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ತಿಪಟೂರು ಶಾಸಕ ಪಿ.ನಾಗೇಶ್‌, ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಉಪವಿಭಾಗಾಧಿಕಾರಿ ನವೀನ್‌ ಭಟ್‌, ಪೊಲೀಸ್‌ ವರಿಷ್ಠಾಧಿಕಾರಿ ರಾಮ್‌ ನಿವಾಸ್ ಸೆಪಟ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ನಂದಿನಿ, ದೇವಾಲಯ ಆಡಳಿತಾಧಿಕಾರಿ ಎಚ್‌.ಎಲ್‌.ನಾಗರಾಜ್‌, ತಹಶೀಲ್ದಾರ್‌ ಮೇಘನಾ ಹಾಜರಿದ್ದರು.

ಕಳೆದ ವರ್ಷಕ್ಕ ಹೋಲಿಸಿದರೆ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕಳೆದ ವರ್ಷ 3 ಲಕ್ಷ ಭಕ್ತರು ಭೇಟಿ ನೀಡಿದ್ದರು. ಜಿಲ್ಲಾಡಳಿತದ ಪ್ರಕಾರ ಈ ಬಾರಿ ಅಂದಾಜು 5 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ.

ಹಾಸನಾಂಬೆ ದರ್ಶನೋತ್ಸವದಲ್ಲಿ ಜೆಡಿಸ್‌ ವರಿಷ್ಠ ಎಚ್.ಡಿ.ದೇವೇಗೌಡ, ರಾಜ್ಯ ಸರ್ಕಾರದ ಸಚಿವರು, ಶಾಸಕರು, ನಾನಾ ಕ್ಷೇತ್ರದ ಗಣ್ಯರು ಸೇರಿದಂತೆ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.

ಸಾರ್ವಜನಿಕ ದರ್ಶನಕ್ಕೆ ಅವಕಾಶ ಇಲ್ಲದಿದ್ದರೂ ಕೊನೆ ದಿನವೂ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಎಲ್ಲರಿಗೂ ದೇವಿ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಹದಿಮೂರು ದಿನಗಳಿಂದ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಹಾಸನಾಂಬೆ ದೇಗುಲ ಆವರಣ ಈಗ ಭಣಗುಡುತ್ತಿದೆ.


‘ಹಾಸನಾಂಬೆ ಉತ್ಸವದಲ್ಲಿ ಯಾವುದೇ ಗೊಂದಲ, ಗದ್ದಲ, ದೂರು-ದುಮ್ಮಾನ ಇಲ್ಲದಂತೆ ಅಚ್ಚುಕಟ್ಟು ಮತ್ತು ಯಶಸ್ವಿಯಾಗಿ ನಡೆದಿದೆ. ಮುಂದೆಯೂ ಇದೇ ರೀತಿ ನಿರಾತಂಕ ಉತ್ಸವ ನಡೆಯಬೇಕು. ದೇಗುಲಕ್ಕೆ ಮೂಲ ಸೌಕರ್ಯ ಕಲ್ಪಿಸುವ ಕುರಿತು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಸರ್ಕಾರ ಮತ್ತು ನಾಡಿನ ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT