ಶಾಲೆ ಮುಚ್ಚುವ ಕಾರಣ ಚರ್ಚೆ ಅಗತ್ಯ

7
ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಮತ

ಶಾಲೆ ಮುಚ್ಚುವ ಕಾರಣ ಚರ್ಚೆ ಅಗತ್ಯ

Published:
Updated:
Deccan Herald

ಹಾಸನ : ‘ರಾಜ್ಯದಲ್ಲಿ 28 ಸಾವಿರ ಶಾಲೆಗಳು ಮುಚ್ಚುವ ಬಗ್ಗೆ ಪರ, ವಿರೋಧ ಚರ್ಚೆ ಮಾಡುವ ಬದಲು ಅದಕ್ಕೆ ಮೂಲ ಕಾರಣ ಏನು ಎಂಬುದರ ಕುರಿತು ಚರ್ಚೆ ಅಗತ್ಯವಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ವೇದಿಕೆ ವತಿಯಿಂದ ಆಯೋಜಿಸಿದ್ದ ಪಠ್ಯಾಧಾರಿತ ಸಾಹಿತ್ಯ ಚಿಂತನೆ ಹಳಗನ್ನಡ ಮತ್ತು ನಡುಗನ್ನಡ ಕಾವ್ಯಾನುಸಂಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ಶಾಲೆ ಮುಚ್ಚುವುದು ಮತ್ತು ವಿರೋಧಿಸುವವರ ನಡುವೆ ಪರ, ವಿರೋಧ ಚರ್ಚೆಗಳು ಮಾತ್ರವೇ ನಡೆಯುತ್ತಿದೆ. ಶಿಕ್ಷಣ ಕೇತ್ರ ಇಂದು ಪರದೇಶಿ ಕ್ಷೇತ್ರವಾಗಿದೆ. ದೀರ್ಘ ಕಾಲಿನ ಪರಿಣಾಮಕಾರಿ ಚರ್ಚೆಗಳು ಇಲ್ಲಿ ನಡೆಯುತ್ತಿಲ್ಲ. ಒಂದು ರೀತಿಯ ಮಾರ್ಪಾಡುಗಳನ್ನು ಇಲ್ಲಿ ಮಾಡುತ್ತಿದ್ದಾರೆ ಎಂದರು.

ಶೇಕಡಾ 50 ರಷ್ಟು ಪಠ್ಯದ ಹೊರೆ ಇಳಿಸುವ ಬಗ್ಗೆ ಚಿಂತನೆ ನಡೆದಿದೆ. ಉಳಿದ ಶೇಕಡಾ 50 ರಷ್ಟು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ನೀಡಬೇಕು. ಕ್ರೀಡೆಯನ್ನು ಪಠ್ಯದಲ್ಲಿ ಅಳವಡಿಸಬೇಕೆಂಬ ಮಾತು ಕೇಳಿ ಬರುತ್ತಿದೆ. ಈ ಕುರಿತು ಶಿಕ್ಷಣ ತಜ್ಞರು ಮತ್ತು ಶಿಕ್ಷಕರ ಜೊತೆ ಚರ್ಚಿಸುವುದು ಅಗತ್ಯ ಎಂದು ಹೇಳಿದರು.

ಯೋಗವನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಸಚಿವರೊಬ್ಬರು ಹೇಳಿಕೆ ನೀಡಿದ್ದರು. ಈ ರೀತಿ ಎಲ್ಲವನ್ನು ಅಳವಡಿಸುತ್ತಾ ಹೋದರೆ ಪ್ರತ್ಯೇಕ ಪಠ್ಯವೇ ಸಿದ್ದವಾಗುತ್ತದೆ. ಹಾಗಾದರೆ ಮಕ್ಕಳಿಗೆ ನಿಜವಾಗಿಯೂ ನೀಡಬೇಕಾದ ಶಿಕ್ಷಣ ಯಾವುದು ಎಂದು ಪ್ರಶ್ನಿಸಿದ ಅವರು, ಶಿಕ್ಷಣದಲ್ಲಿ ಯಾವುದು ಪೂರಕ ಮತ್ತು ಯಾವುದು ಪ್ರಧಾನ ಎಂಬ ಕುರಿತು ಚಿಂತನೆ ಆಗಬೇಕಿದೆ. ಯಾವ ವಿಷಯ ಕಡ್ಡಾಯ ಎಂಬ ಚರ್ಚೆ ಆಗಬೇಕಿದೆ. ಎಲ್ಲವನ್ನು ಪಠ್ಯದಲ್ಲಿ ಅಳವಡಿಸುವುದು ಸಾಧ್ಯವಿಲ್ಲ ಎಂದು ನುಡಿದರು.

ಭಾರತ ವಿಶ್ವ ಮಟ್ಟದಲ್ಲಿ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯುತ್ತಿದೆ. ಒಂದು ಕಡೆ ಪರಧರ್ಮ, ಪರ ವಿಚಾರಗಳನ್ನು ಸಹಿಸಿಕೊಳ್ಳುತ್ತಿಲ್ಲ. ಹಾಗಾಗಿ ಅಸಹಿಷ್ಣುತೆ ಎದ್ದು ಕಾಣುತ್ತಿದೆ. ದೇಶದಲ್ಲಿ ಸ್ವಚ್ಛ ಭಾರತ್‌ ಅಭಿಯಾನ ಜಾರಿಯಲ್ಲಿದೆ. ಆದರೆ, ಲಕ್ಷಾಂತಕ ಪೌರಕಾರ್ಮಿಕರು ಇಂದಿಗೂ ಕೈಯಲ್ಲಿ ಮಲ ಸ್ವಚ್ಛ ಮಾಡುತ್ತಿದ್ದಾರೆ. ಮಹಲುಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ಸಾವಿರಾರು ಕುಟುಂಬಗಳು ಇಂದಿಗೂ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ವೇದಿಕೆ ಅಧ್ಯಕ್ಷ ಎಂ. ಶೇಖರಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್‌ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ವಿಶ್ರಾಂತ ಪ್ರಾಂಶುಪಾಲ ಶಿವಣ್ಣಗೌಡ, ವೇದಿಕೆ ಗೌರವಾಧ್ಯಕ್ಷ ಎಚ್‌.ಆರ್‌. ಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !