ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಹೂಡಿಕೆದಾರರ ಸಮಾವೇಶ

ವಿಶ್ವದರ್ಜೆ ಪ್ರವಾಸೋದ್ಯಮ ಅಭಿವೃದ್ಧಿಗೆ ಬಂಡವಾಳ ಕ್ರೋಢೀಕರಣ: ಸಚಿವ ರವಿ
Last Updated 3 ಸೆಪ್ಟೆಂಬರ್ 2019, 13:52 IST
ಅಕ್ಷರ ಗಾತ್ರ

ಹಾಸನ: ರಾಜ್ಯದಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಬಂಡವಾಳ ಕ್ರೋಢೀಕರಣಕ್ಕಾಗಿ ಖಾಸಗಿ ಹೂಡಿಕೆದಾರರ ಸಮಾವೇಶ ನಡೆಸಲು ಚಿಂತಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಬೇಲೂರು, ಹಳೇಬೀಡು, ಶ್ರವಣಬೆಳಗೊಳದಂತಹ ವಿಶ್ವಪ್ರಸಿದ್ಧ ಪ್ರವಾಸಿ ತಾಣಗಳ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಅತಿಥಿ ದೇವೋಭವ ಎಂಬ ಆಶಯಯೊಂದಿಗೆ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಗುರಿ ಹೊಂದಲಾಗಿದೆ. ಸಂಚಾರ ಸೌಲಭ್ಯ, ಸ್ವಚ್ಛತೆ, ಆತಿಥ್ಯ, ಸತ್ಕಾರ ಮತ್ತು ಸಹಭಾಗಿತ್ವಕ್ಕೆ ವಸತಿ ವ್ಯವಸ್ಥೆಗಳ ಅಭಿವೃದ್ಧಿ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲಾಗುವುದು ಎಂದುನುಡಿದರು.

ಹಾಸನದಲ್ಲಿ ಈಗಾಗಲೇ 70 ಪ್ರವಾಸಿ ಸ್ಥಳಗಳನ್ನು ಗುರುತಿಸಲಾಗಿದ್ದು, ಇನ್ನೂ ಹತ್ತಾರು ಪ್ರವಾಸಿ ಪ್ರಾಮುಖ್ಯತೆಯನ್ನು ಪಡೆದಂತಹುಗಳನ್ನು ಪತ್ತೆ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ವರದಿ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸುವಂತೆ ಕೋರಲಾಗಿದೆ ಎಂದರು.

ಜಿಲ್ಲೆಯಲ್ಲಿ ಈ ಹಿಂದೆ ವಿವಿಧ ಇಲಾಖೆ, ಏಜೆನ್ಸಿಗಳ ಮೂಲಕ 53 ಪ್ರವಾಸಿ ತಾಣಗಳ ಅಭಿವೃದ್ಧಿಗೆ ₹ 56.4 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಕೇಂದ್ರ ಪುರಾತತ್ವ ಇಲಾಖೆ ವತಿಯಿಂದ ಶ್ರವಣಬೆಳಗೊಳ ಹಾಗೂ ಬೇಲೂರಿನಲ್ಲಿ ₹ 9 ಕೋಟಿ ಅಭಿವೃದ್ಧಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಯಗಚಿ ಡ್ಯಾಂ ಬಳಿ ₹ 20 ಕೋಟಿ ವೆಚ್ಚದಲ್ಲಿ 3 ಸ್ಟಾರ್ ಹೋಟೆಲ್‍ಗಳ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಎಂದು ರವಿ ವಿವರಿಸಿದರು.

ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು. ಭೂದೃಶ್ಯ ವೀಕ್ಷಣೆಗೆ, ಯಾವುದೇ ರೀತಿಯ ಅಡ್ಡಿಯಾಗದಂತೆ ಕಟ್ಟಡಗಳ ನಿರ್ಮಾಣ ಆಗಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಪ್ರತಿ ಊರಿಗೂ ತನ್ನದೇ ಆದ ಇತಿಹಾಸ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಇರುತ್ತದೆ. ಅವುಗಳ ದಾಖಲೀಕರಣವಾಗಬೇಕು. ಕಾಲೇಜು, ಸಂಘ, ಸಂಸ್ಥೆಗಳ ಸಹಾಯದೊಂದಿಗೆ ಅವುಗಳನ್ನು ಪಟ್ಟಿ ಮಾಡಿ ಸಂಗ್ರಹಿಸಿ ಎಲ್ಲವೂ ಬೆರಳ ತುದಿಯಲ್ಲೇ ಮಾಹಿತಿ ಸಿಗುವಂತೆ ಗಣಕೀಕರಣ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅವರು ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳ ಸಹಕಾರ ಪಡೆಯುವಂತೆ ಸೂಚನೆ ನೀಡಿದರು.

ಹಾಸನ ನಗರದ ಕಲಾಭವನದ ಅಭಿವೃದ್ಧಿಗೆ ವಿಸ್ತೃತ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವ ಸಲ್ಲಿಸಬೇಕು. ತುರ್ತಾಗಿ ಆಗಬೇಕಾಗಿರುವ ದುರಸ್ತಿ ಕಾರ್ಯಗಳನ್ನು ನಿರ್ಮಿತಿ ಕೇಂದ್ರಗಳ ವತಿಯಿಂದ ಕೈಗೊಳ್ಳುವಂತೆ ನಿರ್ದೇಶನ ನೀಡಿದ ಸಚಿವರು,ಜಿಲ್ಲೆಯಲ್ಲಿ ಬಳಸದೆ ಇರುವ ಯಾತ್ರಿನಿವಾಸ, ಹಾಸನದ ಹಳೇ ಬಸ್ ನಿಲ್ದಾಣದ ಚನ್ನಪಟ್ಟಣ ಕೆರೆಯಲ್ಲಿ ನಿರ್ಮಿಸಿರುವ ಪ್ರವಾಸಿ ಹೋಟೆಲ್‍ಗಳನ್ನು ಕೆ.ಎಸ್.ಟಿ.ಡಿ.ಸಿ ಗೆ ವಹಿಸಿ ನಿರ್ವಹಣೆ ಮಾಡುವಂತೆ ಸೂಚಿಸಿದರು.

ಶಾಸಕ ಕೆ.ಎಸ್.ಲಿಂಗೇಶ್ ಅವರು ಯಗಚಿ, ಬೇಲೂರು, ಹಳೇಬೀಡು, ಪುಷ್ಪಗಿರಿ, ವಿಷ್ಣುಸಮುದ್ರ ಕೆರೆಗಳ ಅಭಿವೃದ್ಧಿ, ಬೇಲೂರು ಸಾಂಸ್ಕೃತಿಕ ಸಮುದಾಯ ನಿರ್ಮಾಣ ಕುರಿತು ಗಮನ ಸೆಳೆದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಸಹ ಜಿಲ್ಲೆಯ ಪ್ರವಾಸಿ ಯೋಜನಾ ವರದಿ ತಯಾರಿ, ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತು ಮಾಹಿತಿ ಹಾಗೂ ಸಲಹೆ ನೀಡಿದರು.

ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜ್, ಸಕಲೇಶಪುರ ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಎಸ್.ಕುಂಬಾರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT