ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹರಿಗೆ ಆಶ್ರಯ ಮನೆ: ವಿ. ಸೋಮಣ್ಣ ಎಚ್ಚರಿಕೆ

ಏಪ್ರಿಲ್ 2ನೇ ವಾರ ಸಭೆ: ವಸತಿ ಸಚಿವ
Last Updated 15 ಮಾರ್ಚ್ 2021, 3:33 IST
ಅಕ್ಷರ ಗಾತ್ರ

ಅರಸೀಕೆರೆ: ‘ರಾಜ್ಯದಲ್ಲಿ ಈಗಾಗಲೇ ‘ಹೌಸ್ ಫಾರ್ ಆಲ್’ ಯೋಜನೆಯಡಿ ಅರ್ಹ ಬಡ ಫಲಾನುಭವಿಗಳಿಗೆ ಮನೆ ಮಂಜೂರಾಗಿದ್ದು, ಈ ಯೋಜನೆ ದುರುಪಯೋಗಪಡಿಸಿಕೊಂಡು ಅನರ್ಹರಿಗೆ ಮನೆ ಮಂಜೂರಾಗಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗು ವುದು’ ಎಂದು ವಸತಿ ಸಚಿವ ವಿ. ಸೋಮಣ್ಣ ಎಚ್ಚರಿಕೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಹೌಸ್ ಫಾರ್ ಆಲ್’ ಯೋಜನೆಯಡಿ ಅರಸೀಕೆರೆ ಸೇರಿದಂತೆ ರಾಜ್ಯದ ವಿವಿಧೆಡೆ ನಿರ್ಮಾಣ ಹಂತದಲ್ಲಿ ಕಾಮಗಾರಿ ಕೆಲವೆಡೆ ಸ್ಥಗಿತವಾಗಿದ್ದರೆ ಇನ್ನು ಕೆಲವೆಡೆ ಪ್ರಗತಿ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಮುಖ್ಯಮಂತ್ರಿಯವರು ಸಭೆ ಕರೆದಿದ್ದಾರೆ. ಅಷ್ಟೇ ಅಲ್ಲದೆ ಕಾಮಗಾರಿ ವಿಳಂಬಕ್ಕೆ ಪರಿಹಾರ ಕಂಡುಕೊಳ್ಳಲು ಗೃಹ ಸಚಿವರು, ಕಂದಾಯ ಸಚಿವರನ್ನೊಳಗೊಂಡ ಉಪ ಸಮಿತಿ ರಚಿಸಲಾಗಿದೆ’ ಎಂದರು.

ಕಂದಾಯ ಇಲಾಖೆಯ ಸಹಕಾರದೊಂದಿಗೆ ಗ್ರಾಮೀಣ ಭಾಗದ ಬಡವರಿಗೆ ಸೂಕ್ತ ಸೂರಿನ ವ್ಯವಸ್ಥೆ ಕಲ್ಪಿಸಲಾಗುವುದು. ಯೋಜನೆಯಡಿ ಅರಸೀಕೆರೆ ನಗರದಲ್ಲಿ ಸುಮಾರು 1,200 ಮನೆಗಳನ್ನೊಳಗೊಂಡ ಸಮುಚ್ಛಯ ನಿರ್ಮಾಣ ಕಾಮಗಾರಿ ಕುಂಠಿತವಾಗಿರುವುದರ ಬಗ್ಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ನನ್ನ ಬಳಿ ಎರಡ್ಮೂರು ಬಾರಿ ಚರ್ಚಿಸಿದ್ದಾರೆ. ಈ ನಿಟ್ಟಿನಲ್ಲಿ ಈ ವಸತಿ ಮನೆಗಳ ಸಮುಚ್ಚಯಕ್ಕೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ನಮ್ಮ ಇಲಾಖೆಯ ಇತಿಮಿತಿ ಹಾಗೂ ಅನುದಾನದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲಾಗುವುದು’ ಎಂದು ಭರವಸೆ ನೀಡಿದರು.

‘ಫಲಾನುಭವಿಗಳು ತಮ್ಮ ಪಾಲಿನ ವಂತಿಗೆಯನ್ನು ಸಮರ್ಪಕವಾಗಿ ಪಾವತಿಸದೇ ಇರುವ ಕಾರಣ ಗುತ್ತಿಗೆದಾ ರರು ಸಮುಚ್ಛಯಗಳ ನಿರ್ಮಾಣ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಏಪ್ರಿಲ್ 2ನೇ ವಾರದೊಳಗೆ ಈ ಸಮಸ್ಯೆಗೆ ಪರಿಹಾರ ವಾಗುವುದು’ ಎಂದು ಹೇಳಿದರು.

‘ಪ್ರಧಾನ ಮಂತ್ರಿ ಆವಾಸ್ ರೋಜಗಾರ್ ಯೋಜನೆಯಡಿ ಗ್ರಾಮೀಣ ಭಾಗದ ಬಡವರಿಗೆ ಕೇಂದ್ರ ಸರ್ಕಾರದಿಂದ ₹ 75 ಸಾವಿರ, ರಾಜ್ಯ ಸರ್ಕಾರದಿಂದ ₹ 42 ಸಾವಿರ ಅನುದಾನ ಬಿಡುಗಡೆ ಮಾಡಲಾಗುತ್ತದೆ. ನಾನು ವಸತಿ ಸಚಿವನಾಗುವುದಕ್ಕೂ ಮೊದಲೇ ಅವ್ಯವಸ್ಥೆಯ ಪರಿಣಾಮ 18 ಲಕ್ಷ ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಗಿತ್ತು,. ಬಳಿಕ ಜಿಪಿಎಸ್ ಬ್ಯಾಂಕ್ ಖಾತೆ ಪರಿಶೀಲನೆ ಬಳಿಕ, 6 ಲಕ್ಷ ಮನೆಗಳು ಅಂತಿಮಗೊಂಡು ಅದರಲ್ಲಿ 5.93 ಲಕ್ಷ ಮನೆಗಳ ನಿರ್ಮಾಣವಾಗಿದೆ. ಇದರಲ್ಲಿ 2.97 ಲಕ್ಷ ಮನೆಗಳ ನಿರ್ಮಾಣ ಗುಣಮಟ್ಟದಿಂದ ಕೂಡಿವೆ, ರಾಜ್ಯದಲ್ಲಿ ಇನ್ನೂ 5 ಲಕ್ಷ ಮನೆಗಳು ನಿರ್ಮಾಣವಾಗಬೇಕಿದೆ’ ಎಂದರು.

‘ಬಡವರಿಗೆ ಸೂಕ್ತ ಸೂರು ಸಿಗಬೇಕು. ಇದಕ್ಕಾಗಿ ಏಪ್ರಿಲ್ 2ನೇ ವಾರದಲ್ಲಿ ಶಾಸಕ ಶಿವಲಿಂಗೇಗೌಡ ಹಾಗೂ ವಸತಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೆಲ್ಲರೂ ನಗರದಲ್ಲಿ ನಿರ್ಮಾಣವಾಗುತ್ತಿರುವ ಸಮುಚ್ಛಯದ ಸ್ಥಳದಲ್ಲೇ ಅನರ್ಹರನ್ನು ಗುರುತಿಸಿ ಅರ್ಹರಿಗೆ ಸೂರು ಒದಗಿಸಲು ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಸೋಮಣ್ಣ ಭರವಸೆ ನೀಡಿದರು.

ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿ.ವಿ. ಟಿ. ಬಸವರಾಜ್, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಎಂ.ಜಿ. ಲೋಕೇಶ್, ನಗರ ಘಟಕದ ಅಧ್ಯಕ್ಷ ಪುರುಷೋತ್ತಮ್, ಬಿಜೆಪಿ ಮುಖಂಡ ಜಯದೇವ್, ಶಿವನ್ ರಾಜ್, ನಗರಸಭೆ ಸದಸ್ಯ ಗಿರೀಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್. ಡಿ. ಪ್ರಸಾದ್, ರಮೇಶ್ ನಾಯ್ಡು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT