ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ರಕ್ಷಣೆಗೆ ಕಟಿಬದ್ಧರಾಗಲು ಪಣ

ಎತ್ತ ಸಾಗುತ್ತಿಗೆ ಭಾರತ? ವಿಚಾರ ಸಂಕಿರಣದಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ
Last Updated 10 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಲ್ಲಿ ನೆರೆದಿದ್ದ ಜನಸಮೂಹಕ್ಕೆ ಭವಿಷ್ಯದ ಭಾರತದ ಬಗ್ಗೆ ಆತಂಕವಿತ್ತು. ನೂರಾರು ವರ್ಷಗಳಿಂದ ತುಳಿತಕ್ಕೆ ಒಳಗಾದವರಿಗೆ ಆಶಾಕಿರಣದಂತಿರುವ ಸಂವಿಧಾನವನ್ನು ಬದಲಾಯಿಸುವ, ಏಕಸಂಸ್ಕೃತಿ ಹಾಗೂ ವರ್ಣಾಶ್ರಮ ವ್ಯವಸ್ಥೆಯನ್ನು ಹೇರುವ ಹುನ್ನಾರವನ್ನು ತಡೆಯಬೇಕು ಎಂಬ ತುಡಿತವಿತ್ತು.

‘ಸಂವಿಧಾನದ ರಕ್ಷಣೆಯಲ್ಲೇ ನಮ್ಮ ಅಸ್ತಿತ್ವ ಅಡಗಿದೆ. ಅದರ ಪ್ರಸ್ತಾವನೆಯಂತೆ ಎಲ್ಲರೂ ನಡೆದುಕೊಳ್ಳಬೇಕು’ ಎಂಬ ಪ್ರತಿಜ್ಞೆಯನ್ನೂ ಮಾಡಲಾಯಿತು.

ದಲಿತ ಸಂಘರ್ಷ ಸಮಿತಿ, ಕರ್ನಾಟಕ ಸ್ಟೇಟ್‌ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ), ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ಎತ್ತ ಸಾಗುತ್ತಿದೆ ಭಾರತ? ಅಂಬೇಡ್ಕರ್‌ ಚಿಂತನೆಯ ಬೆಳಕಿನಲ್ಲಿ ವಿಶ್ಲೇಷಣೆ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕಂಡು ಬಂದ ದೃಶ್ಯಗಳಿವು.

‘ಈವರೆಗೆ ಅಂಬೇಡ್ಕರ್‌, ಗಾಂಧೀಜಿ ಪ್ರತಿಮೆ ಉರುಳಿಸಲಾಗುತ್ತಿತ್ತು. ಈಗ ಪೆರಿಯಾರ್‌, ಲೆನಿನ್‌, ಹನುಮ ಪ್ರತಿಮೆಗಳನ್ನು ಉರುಳಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಗಮನವನ್ನು ಬೇರೆಡೆ ಸೆಳೆದು ದೇಶವನ್ನು ಕೊಳ್ಳೆ ಹೊಡೆದು ಪರಾರಿಯಾಗುವ ಕುಬೇರರ ಮೇಲೆ ನಾವು ಕಣ್ಣಿಡಬೇಕು. ಕೇಂದ್ರ ಸರ್ಕಾರವು ಬ್ಯಾಂಕ್‌ಗಳ ವಸೂಲಾಗದ ಸಾಲವನ್ನು ವಜಾ ಮಾಡುತ್ತದೆಯೇ ಎಂಬುದನ್ನು ಗಮನಿಸಬೇಕು’ ಎಂದು ಸಾಹಿತಿ ದೇವನೂರ ಮಹಾದೇವ ಸಲಹೆ ನೀಡಿದರು.

‘ಇಂದು ಅರೆಬರೆ, ಹಂಗಾಮಿ, ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಗುತ್ತಿದೆ. ಉದ್ಯೋಗಿಗಳಲ್ಲಿ ಅನಿಶ್ಚಿತತೆ ಮನೆ ಮಾಡಬೇಕು. ಇದರಿಂದ ಆಳ್ವಿಕೆ ಮಾಡುವುದು, ಮತ ಹಾಕಿಸಿಕೊಳ್ಳುವುದು ಸುಲಭ ಎಂದು ಆಡಳಿತ ನಡೆಸುವವರು ತಿಳಿದಿದ್ದಾರೆ. ಆದರೆ, ಸುಭದ್ರ ಉದ್ಯೋಗ, ಸ್ವಾವಲಂಬನೆ ಎಂಬುದು ಅಭಿವೃದ್ಧಿಯ ಅಳತೆಗೋಲು ಆಗಬೇಕು’ ಎಂದರು.

ಭಾರತ ದಿಕ್ಕಾಪಾಲಾಗಿ, ದಿಕ್ಕು ಕೆಟ್ಟು ವೇಗವಾಗಿ ಓಡುತ್ತಿದೆ. ಇಂತಹ ಸಂದರ್ಭದಲ್ಲಿ ಧರ್ಮವೇನಾದರೂ ಸಾಂತ್ವನ ನೀಡಬಹುದೇ? ಆದರೆ, ಹಿಂದು, ಮುಸ್ಲಿಂ, ಕ್ರೈಸ್ತ ಧರ್ಮಗಳ ಒಳಗೆ ಕೊಮೇನಿ ಕೂತಿದ್ದಾನೆ. ಕತ್ತು, ಕೈ ಕತ್ತರಿಸುತ್ತೇನೆ ಬಾ ಎನ್ನುತ್ತಿದ್ದಾನೆ. ಕೆಲವರು ಧರ್ಮದ ರಕ್ಷಣೆ ಮಾಡುವ ಹೆಸರಿನಲ್ಲಿ ಧರ್ಮವನ್ನು ಧ್ವಂಸ ಮಾಡುತ್ತಿದ್ದಾರೆ ಎಂದು ದೂರಿದರು.

ಪತ್ರಕರ್ತೆ ತೀಸ್ತಾ ಸೆಟಲ್ವಾಡ್, ‘ಗುಜರಾತ್, ಹರಿಯಾಣವು ಆರ್‌ಎಸ್‌ಎಸ್‌ ಮಯವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಸವಣ್ಣ, ಸೂಪಿ ಸಂತರು ನಿರ್ನಾಮವಾಗಲಿದ್ದು, ಎಲ್ಲವೂ ಆರ್‌ಎಸ್‌ಎಸ್‌ ಮಯವಾಗಲಿದೆ. ಅದಕ್ಕೆ ಅವಕಾಶ ನೀಡಬಾರದು’ ಎಂದು ಅವರು ಹೇಳಿದರು.

‘ದಸಂಸಗಳಲ್ಲಿ ಬಂಡವಾಳವಿಲ್ಲ’
‘ದಲಿತ ಸಂಘರ್ಷ ಸಮಿತಿ ಹುಟ್ಟಿದಾಗ ಯುವಶಕ್ತಿಯೇ ಬಂಡವಾಳವಾಗಿತ್ತು. ಆಗ ಯುವಕರಾಗಿದ್ದವರು ಇಂದು ವಿವಿಧ ಸಂಘಟನೆಗಳಲ್ಲಿ ಹಿರಿಯರ ಸ್ಥಾನದಲ್ಲಿ ಕೂತಿದ್ದಾರೆ. ಆದರೆ, ಅವರ ಜತೆ ವಿದ್ಯಾರ್ಥಿಗಳೆಂಬ ಬಂಡವಾಳ ಇಲ್ಲ. ಈ ಕಾರ್ಯಕ್ರಮದಲ್ಲಿ ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದಿರುವುದು ಭಾರತ ಎತ್ತ ಸಾಗುತ್ತಿದೆ ಎಂಬುದರ ಸೂಚನೆ’ ಎಂದು ದೇವನೂರ ಮಹಾದೇವ ಬೇಸರ ವ್ಯಕ್ತಪಡಿಸಿದರು.

‘ಭಾಷಣಕೋರ ಮೋದಿ, ಶಾ’
‘ನರೇಂದ್ರ ಮೋದಿ, ಅಮಿತ್‌ ಶಾ ಭಾಷಣಕೋರರು. ಅವರಿಗೆ ವಿಕ್ರಮ–ಬೇತಾಳನ ಶಾಪವಿದೆ. ಹೀಗಾಗಿ, ಬೆಳಿಗ್ಗೆಯಿಂದ ಸಂಜೆಯವರೆಗೆ 100 ಸುಳ್ಳುಗಳನ್ನು ಹೇಳದಿದ್ದರೆ ಅವರ ತಲೆ ಒಡೆದು ಹೋಗುತ್ತದೆ. ನೀರು ಕುಡಿದು ಕಾಫಿ ಚೆನ್ನಾಗಿದೆ ಎನ್ನುತ್ತಾರೆ. ಗಾಂಧೀಜಿಗೆ ನಮಸ್ಕರಿಸುತ್ತಲೇ ಗೋಡ್ಸೆ ಬಗ್ಗೆ ಯೋಚಿಸುತ್ತಾರೆ' ಎಂದು ನಟ ಪ್ರಕಾಶ್‌ ರೈ ವ್ಯಂಗ್ಯವಾಡಿದರು.

‘ನಾವು ಆರ್‌ಎಸ್‌ಎಸ್‌, ಬಿಜೆಪಿಯವರ ವರ್ತನೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಈಗ ಪ್ರತಿಮೆಗಳನ್ನು ಉರುಳಿಸಲಾಗುತ್ತಿದೆ. ಬದುಕಿದ್ದ ಗಾಂಧೀಜಿಯನ್ನೇ ಕೊಂದರು. ಇನ್ನು ಪ್ರತಿಮೆ ಒಡೆಯುವುದು ಅವರಿಗೆ ದೊಡ್ಡ ವಿಷಯವಲ್ಲ. ಅಲ್ಲದೆ, ಕೇಂದ್ರ ಸರ್ಕಾರದ ಯೋಚನಾ ಲಹರಿಯಲ್ಲೇ ಗಾಂಧೀಜಿ ಇಲ್ಲ’ ಎಂದರು.

*
ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವ ಮೂಲಕ ಬಿಜೆಪಿಯನ್ನು ಸೋಲಿಸಬೇಕು. ಆ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕು.
–ಲಕ್ಷ್ಮಿನಾರಾಯಣ ನಾಗವಾರ,ಕರ್ನಾಟಕ ರಾಜ್ಯ ದಸಂಸ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT