ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣಬೆಳಗೊಳ: ಕಣ್ಮನ ಸೆಳೆಯುವ ಸಿದ್ಧರ ಗುಂಡು

ವಿಂಧ್ಯಗಿರಿಯ ಬಂಡೆಯಲ್ಲಿ ಕೊರೆದಿರುವ ಗಜಲಕ್ಷ್ಮಿಯ ಅಖಂಡ ಬಾಗಿಲು
Last Updated 28 ಮಾರ್ಚ್ 2021, 3:57 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಜೈನಕಾಶಿಯ ವಿಂಧ್ಯಗಿರಿಯ ಬಾಹುಬಲಿ ಬೆಟ್ಟದಲ್ಲಿ ಅಖಂಡ ಶಿಲೆಯ ಸಿದ್ಧರ ಗುಂಡು ಪ್ರಮುಖ ಆಕರ್ಷಣೆಯಾಗಿದೆ.

ವಿಶ್ವಕ್ಕೆ ಶಾಂತಿ ಸಂದೇಶ ಸಾರುತ್ತಿರುವ ತ್ಯಾಗಮೂರ್ತಿಯ 525 ಅಡಿ ಎತ್ತರದ ಬೆಟ್ಟ ಏರಿದಾಗ ಕೋಟೆ ಸಿಗುತ್ತದೆ. ಮುಂದೆ ಒದೆಗಲ್‌ ಬಸದಿಯಿಂದ ಸಾಗಿದರೆ ತ್ಯಾಗದ ಕಂಬ ಸಿಗುತ್ತದೆ. ಅಲ್ಲಿಂದ 48 ಮೆಟ್ಟಿಲೇರಿದರೆ ಅಖಂಡ ಬಾಗಿಲಿನಲ್ಲಿ ಗಜಲಕ್ಷ್ಮಿಯ ದರ್ಶನವಾಗುತ್ತದೆ. ಇವುಗಳ ಸಮೀಪದಲ್ಲಿ ಸಿದ್ಧರ ಗುಂಡು ಇದೆ.

ಗಜಲಕ್ಷ್ಮಿಗೆ ಹೊಂದಿ ಕೊಂಡಂತಿರುವ ಎಡ ಭಾಗದಲ್ಲಿ ಬಾಹುಬಲಿ, ಬಲ ಭಾಗದಲ್ಲಿ ಭರತೇಶರ ಉಬ್ಬು ಶಿಲ್ಪಗಳಿದ್ದು, ಬಾಹುಬಲಿಯ ಸಹೋದರಿಯರಾದ ಬ್ರಾಹ್ಮಿ ಮತ್ತು ಸುಂದರಿಯರು ಆವರಿಸಿರುವ ಸುಂದರ ಮಾಧವೀಲತೆ ಬಿಡಿಸುವ ದೃಶ್ಯ ಅದ್ಭುತ ವಾಗಿದೆ. ಅಲ್ಲಿಯೇ ಬೃಹತ್‌ ಏಕಶಿಲಾ ಬಂಡೆ ಇದ್ದು, ಅದನ್ನು ಅದೇ ಸಿದ್ಧರ ಗುಂಡು ಎಂದು ಕರೆಯುತ್ತಾರೆ.

ಆ ಪರ್ವತದ ಮೇಲಿರುವ ಸಿದ್ಧರ ಗುಂಡಿನಲ್ಲಿ ತಪಸ್ಸು ಮಾಡುತ್ತಿರುವ ನೂರಾರು ಜಿನ ಬಿಂಬ ಕಾಣಬಹುದು. ಭರತ ಚಕ್ರವರ್ತಿಯ ಆಯುಧಾಗಾರದಲ್ಲಿ ಚಕ್ರರತ್ನ ಉದ್ಭವಿಸಿದಾಗ ಭರತನು 6 ಖಂಡಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆ ಯೊಂದಿಗೆ ಸಾಗಿದಾಗ ಅಯೋಧ್ಯೆಗೆ ಬಂದು ಚಕ್ರರತ್ನ ನಿಂತಿತು. ಭರತನ 100 ಜನ ಸಹೋದರರಲ್ಲಿ ಬಾಹುಬಲಿ ಹೊರತು ಪಡಿಸಿ ಇನ್ನುಳಿದ 99 ಜನ ಸಹೋದರರು ಅಣ್ಣನಿಗೆ ಎದುರಾಡದೇ ತನ್ನ ತಂದೆ ಆದಿನಾಥ ತೀರ್ಥಂಕರರಿಗೆ ಶರಣಾಗಿ ಸಮವಸರಣಕ್ಕೆ ತೆರಳಿ
ವೈರಾಗ್ಯ ಹೊಂದಿ ದೀಕ್ಷೆ ಪಡೆದು 99 ಜನ ಸಹೋದರರೂ ತಪ್ಪಸ್ಸಿಗೆ ತೆರಳಿದರು.

ಬಾಹುಬಲಿ ಮಾತ್ರ ಭರತನನ್ನು ಸಹೋದರನೆಂದು ಆದರಿಸುತ್ತೇನೆ. ಆದರೆ, ಚಕ್ರವರ್ತಿಯೆಂದು ತಲೆಬಾಗು ವುದಿಲ್ಲ. ಯುದ್ಧಕ್ಕೆ ನಾನೂ ಸಿದ್ಧ ಎಂದು ಹೇಳಿ ಕಳುಹಿಸುತ್ತಾನೆ. ನಂತರ ಇಬ್ಬರಲ್ಲಿ ಜಲಯುದ್ಧ, ದೃಷ್ಟಿಯುದ್ಧ ಹಾಗೂ ಮಲ್ಲಯುದ್ಧ ನಡೆದು ಬಾಹುಬಲಿ ಗೆಲ್ಲುತ್ತಾನೆ. ಮಲ್ಲಯುದ್ಧದಲ್ಲಿ ಗೆದ್ದ ಬಾಹುಬಲಿ, ಭರತನನ್ನು ಮೇಲಕ್ಕೆತ್ತಿ ಕೆಳಗೆ ಹಾಕಬೇಕೆನ್ನುವ ಸಮಯದಲ್ಲಿ ವೈರಾಗ್ಯ ಬಂದು ತಪಸ್ಸಿಗೆ ತೆರಳಿ ಮೋಕ್ಷ ಪಡೆಯುತ್ತಾನೆ.

ಸಿದ್ಧರ ಗುಂಡಿನಲ್ಲಿ 99 ಜನರ ಪದ್ಮಾಸನದ ಜಿನ ವಿಗ್ರಹಗಳ ಜೊತೆಗೆ ಖಡ್ಗಾಸನದಲ್ಲಿರುವ ಆದಿನಾಥ ಸ್ವಾಮಿ ಮತ್ತು ಬಾಹುಬಲಿ ಭರತರ ಉಬ್ಬು ಶಿಲ್ಪಗಳೂ ಇದ್ದು, ಆಕರ್ಷಕವಾಗಿ ಕಂಗೊಳಿಸುತ್ತಿವೆ.

ಕ್ರಿ.ಪೂ. 3ನೇ ಶತಮಾನದಲ್ಲಿ ಅಂತಿಮ ಶ್ರುತಕೇವಲಿ ಭದ್ರಬಾಹು ಮುನಿ ಉತ್ತರದ ಮಗಧದಿಂದ ಸಾಮ್ರಾಟ್‌ ಚಂದ್ರಗುಪ್ತ ಮೌರ್ಯ ಹಾಗೂ 12,000 ಮುನಿಗಳೊಂದಿಗೆ ಬಂದಾಗಿನಿಂದ ಜೈನಕಾಶಿಯ ಇತಿಹಾಸ ಪ್ರಾರಂಭವಾಗುತ್ತದೆ ಎಂಬುದು ಶಾಸನಗಳಲ್ಲಿ ಉಲ್ಲೇಖವಾಗಿದೆ.

‘ಸಿದ್ಧರ ಗುಂಡುವಿನ ಪಕ್ಕದಲ್ಲಿಯೇ ಎಲ್ಲೂ ನೋಡಿರದ ಪದ್ಮಾಸನ ಭಂಗಿಯ ಬಾಹುಬಲಿ ಕಾಣಬಹುದು. ಇಲ್ಲಿ ಕುಳಿತಿರುವ ಬಾಹುಬಲಿಯ ಸನ್ನಿಧಿಯಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರೆ ಕಳೆದು ಹೋಗಿರುವ ಜಾನುವಾರುಗಳು ಸಿಗುತ್ತವೆ. ಅವುಗಳಿಂದ ಹಾಲು ಕರೆದು ಅಭಿಷೇಕ ಮಾಡುತ್ತೇವೆ’ ಎಂದು ಪಾತ್ರೆ ರಾಮಣ್ಣ, ದೇವರಾಜ್‌, ಜ್ವಾಲ್‌ಕುಮಾರ್‌ ಹೇಳುತ್ತಾರೆ.

‘ರತ್ನಾತ್ರಯ ಮಾರ್ಗ ಅನುಸರಿಸುತ್ತಾ ಸಪ್ತತತ್ವಗಳಲ್ಲಿ ಶ್ರದ್ಧೆ ಹೊಂದಿದವನು ಜಿನನಾಗುತ್ತಾನೆ. ಈ ಶಿಲೆಯಲ್ಲಿ ಸಿಂಧೂಲಿಪಿಯ ಕುರುಹುಗಳನ್ನು ಸಹ ಕಾಣಬಹುದು. ಕೆಳ ಭಾಗದಲ್ಲಿ ಸಲ್ಲೇಖನ ವಿಧಿಯಿಂದ ದೇಹ ತ್ಯಾಗ ಮಾಡಿದ ನಿಶಿಧಿ ಶಾಸನಗಳು ಇವೆ. ಈ ಶಿಲೆಯ ಮೇಲ್ಭಾಗದಲ್ಲಿ 20ನೇ ತೀರ್ಥಂಕರ ಮುನಿಸುವ್ರತ ತೀರ್ಥಂಕರರ ಕಾಲದ ದೇಶಭೂಷಣ ಮತ್ತು ಕುಲಭೂಷಣ ಮುನಿಗಳ ಚಿತ್ರವೂ ಸಹ ಗಮನ ಸೆಳೆಯುತ್ತದೆ’ ಎಂದು ಪ್ರೊ.ಜೀವಂಧರ್‌ ಕುಮಾರ್‌ ಹೊತಪೇಟೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT