ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ಗೆ ಬಿಜೆಪಿ ಬಗ್ಗೆ ಪ್ರೀತಿ‌ಯಿದ್ದರೆ ನೇರವಾಗಿ ಬೆಂಬಲಿಸಲಿ: ಸಿದ್ದರಾಮಯ್ಯ

Last Updated 17 ಏಪ್ರಿಲ್ 2022, 15:28 IST
ಅಕ್ಷರ ಗಾತ್ರ

ಹಾಸನ: ‘ಬಿಜೆಪಿಯ ಬಿ ಟೀಂ ಜೆಡಿಎಸ್‌ಗೆ ಯಾವುದೇ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆಬರಬಾರದು. ಯಾವಾಗಲೂ ಹೊಂದಾಣಿಕೆಗೆ ಕಾಯುತ್ತಿರುತ್ತಾರೆ’ ಎಂದುವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್‌ನವರು 30 ಸ್ಥಾನ ಗೆದ್ದರೆ ಸಾಕು ಅಂತಾರೆ. ಹಿಂದೆ ಉತ್ತಮ ಆಡಳಿತ ನೀಡಲಿ ಎಂಬ ಕಾರಣಕ್ಕೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ಕೊಟ್ಟ ಕುದುರೆ ಏರದವನು ಶೂರನೂ ಅಲ್ಲ; ಧೀರನೂ ಅಲ್ಲ ಎಂಬಂತೆ ನನ್ನಿಂದ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು ಎಂದು ಆರೋಪ ಮಾಡಿದ್ದಾರೆ. ಸರ್ಕಾರ ಬೀಳಲು ಅವರೇ ಕಾರಣ. ಶಾಸಕರ ಕಷ್ಟ, ಸುಖ ಕೇಳಿದ್ದರೆ ಸರ್ಕಾರ ಬೀಳುತ್ತಿರಲಿಲ್ಲ’ ಎಂದು ಕುಟುಕಿದರು.

‘ರಾಜಕಾರಣದಲ್ಲಿ ಯಾರು ಸತ್ಯವಂತರು ಇದ್ದಾರೆ ಎಂದು ದೇವೇಗೌಡರುಪ್ರಶ್ನಿಸುತ್ತಾರೆ. ನೀರಾವರಿ, ಲೋಕೋಪಯೋಗಿ ಸಚಿವ, ಮುಖ್ಯಮಂತ್ರಿ ಆಗಿದ್ದವರು. ರಾಜಕಾರಣದಲ್ಲಿ ಸಾಕಷ್ಟು ಅನುಭವ ಉಳ್ಳವರು. ರಾಜ್ಯದ ಇತಿಹಾಸದಲ್ಲಿ ಗುತ್ತಿಗೆದಾರರ ಸಂಘದವರು ಶೇ 40 ಪರ್ಸೆಂಟೇಜ್‌ ಬಗ್ಗೆ ಪತ್ರ ಬರೆದಿದ್ದರಾ? ಬಿಜೆಪಿ ಬಗ್ಗೆ ಪ್ರೀತಿ‌ ಇದ್ದರೇ ನೇರವಾಗಿ ಬೆಂಬಲಿಸಲಿ. ಯಾರ ಅಭ್ಯಂತರವೂ ಇಲ್ಲ. ಜನರ ದಾರಿ ತಪ್ಪಿಸಬೇಡಿ’ ಎಂದು ತಿಳಿಸಿದರು.

‘ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಏಕೆ ಬಂಧಿಸಬೇಕು? ಹಿಂದೆಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿಯೂ ಹೀಗೆ ಮಾಡಿದ್ದೀರಾ ಎಂದುಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳುತ್ತಾರೆ.ಇದಕ್ಕೆ ಜೆಡಿಎಸ್‌ ಬಿಜೆಪಿಯ ಬಿ ಟೀಂ ಎನ್ನುವುದು’ ಎಂದು ವ್ಯಂಗ್ಯವಾಡಿದರು.

‘ಪರ್ಸೆಂಟೇಜ್‌ ಬಗ್ಗೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಎಂಟು ತಿಂಗಳಾದರೂ ಕ್ರಮ ಕೈಗೊಂಡಿಲ್ಲ. ಮೋದಿ ಅವರನ್ನು ಚೌಕಿದಾರ್‌ ಅಂತ ಕರೆಯಬೇಕಾ? ಹಿಂದೆ ಪ್ರಧಾನಿ ಮೋದಿ ಯಾವುದೇ ದಾಖಲೆಗಳಿಲ್ಲದೇ ಶೇ 10 ಪರ್ಸೆಂಟ್‌ ಸರ್ಕಾರ ಎಂದು ಕಾಂಗ್ರೆಸ್‌ ಅನ್ನು ಟೀಕಿಸಿದ್ದರು. ಆದರೆ, ಈಗ ದಾಖಲೆ ಇದೆ. ಇದಕ್ಕೆ ಏನು ಹೇಳುತ್ತೀರಾ’ ಎಂದು ಪ್ರಶ್ನಿಸಿದರು.

‘ಬಿಜೆಪಿ ದುರಾಡಳಿತಮುಚ್ಚಿ ಹಾಕಲು ಕೋಮುವಾದ ಸೃಷ್ಟಿ ಮಾಡಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಕೈ ಮುಗಿದು ಪ್ರಾರ್ಥಿಸುವೆ. ಮೊದಲು ಬಿಜೆಪಿಯನ್ನು ಅಧಿಕಾರದಿಂದ ಕಿತ್ತು ಹಾಕಿ’ ಎಂದು ನೆರೆದಿದ್ದ ಜನಸ್ತೋಮಕ್ಕೆ ಮನವಿ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಮಾತನಾಡಿ ‘ಕಾಂಗ್ರೆಸ್‌ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಉತ್ತಮ ಆಡಳಿತ ಕೊಟ್ಟಿತ್ತು. ಆದರೆ, ಬಿಜೆಪಿ ಆಡಳಿತ ರಾಜ್ಯಕ್ಕೆ ಕಪ್ಪು ಚುಕ್ಕೆ ತಂದು ಕೊಟ್ಟಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಮುಖಂಡ ಚಂದ್ರಪ್ಪ, ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್‌, ಮುಖಂಡರಾದ ಎಂ.ಎ.ಗೋಪಾಲಸ್ವಾಮಿ, ಜವರೇಗೌಡ, ಎಚ್‌.ಕೆ.ಮಹೇಶ್‌, ಸಿ.ಎಸ್‌.ಪುಟ್ಟೇಗೌಡ, ಬಿ.ಶಿವರಾಂ, ಯುವ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ರಂಜಿತ್ ಗೊರೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT