ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಫಾ’ ಸೋಂಕಿಗೆ ಕಾರಣ ಬಾವಲಿಗಳಲ್ಲ

Last Updated 26 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ : ‘ಕೇರಳದ ಕೋಯಿಕ್ಕೋಡ್ ಮತ್ತು ಮಲಪ್ಪುರ ಜಿಲ್ಲೆಗಳಲ್ಲಿ 12 ಜನರ ಸಾವಿಗೆ ಕಾರಣವಾದ ನಿಫಾ ಸೋಂಕು ಬಾವಲಿಗಳ ಮೂಲಕ ಹರಡಿಲ್ಲ’ ಎಂದು ನಿಫಾ ಪ್ರಕರಣಗಳ ಪರಿಶೀಲನೆ ನಡೆಸುತ್ತಿರುವ ವೈದ್ಯಕೀಯ ತಂಡವು ಆರೋಗ್ಯ ಸಚಿವಾಲಯಕ್ಕೆ ವರದಿ ನೀಡಿದೆ.

‘ಸೋಂಕು ಹರಡಿರುವ ಪ್ರದೇಶಗಳಿಂದ ಸಂಗ್ರಹಿಸಲಾಗಿದ್ದ ಬಾವಲಿಗಳು ಮತ್ತು ಮೃತ ಬಾವಲಿಗಳ ರಕ್ತದ ಮಾದರಿಗಳಲ್ಲಿ ನಿಫಾ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ಬಾವಲಿಗಳು ಮತ್ತು ಹಂದಿಗಳಿಂದ ಸೋಂಕು ಹರಡಿಲ್ಲ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಏಳು ಪ್ರಭೇದದ ಬಾವಲಿಗಳು, ಎರಡು ಪ್ರಭೇದದ ಹಂದಿಗಳು, ಒಂದು ಪ್ರಭೇದದ ಹಸು ಮತ್ತು ಒಂದು ಪ್ರಭೇದದ ಮೇಕೆಯ ಮಾದರಿಗಳನ್ನು ಭೋಪಾಲ್‌ನಲ್ಲಿರುವ ರಾಷ್ಟ್ರೀಯ ಪ್ರಾಣಿ ರೋಗ ಸಂಸ್ಥೆ ಹಾಗೂ ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಅಧ್ಯಯನ ಸಂಸ್ಥೆಗಳಿಗೆ ಕಳುಹಿಸಲಾಗಿತ್ತು. ಆ ಮಾದರಿಗಳಲ್ಲಿ ಯಾವುದರಲ್ಲೂ ನಿಫಾ ವೈರಾಣು ಪತ್ತೆಯಾಗಿಲ್ಲ’ ಎಂದು ವರದಿಯಲ್ಲಿ ಖಚಿತಪಡಿಸಲಾಗಿದೆ.

‘ನಿಫಾ ಸೋಂಕಿನಿಂದ ಸಾವು ಸಂಭವಿಸಿದ ಮೊದಲ ಪ್ರಕರಣ ಪತ್ತೆಯಾದ ಕೇರಳದ ಪೇರಾಂಬ್ರ ಗ್ರಾಮದ ಬಾವಿಯಲ್ಲಿದ್ದ ಬಾವಲಿಗಳು ಮತ್ತು ಅಲ್ಲಿ ಸತ್ತಿದ್ದ ಬಾವಲಿಗಳ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಆ ಮಾದರಿಗಳಲ್ಲೂ ನಿಫಾ ವೈರಾಣು ಪತ್ತೆಯಾಗಿಲ್ಲ’ ಎಂದು ಅದರಲ್ಲಿ ವಿವರಿಸಲಾಗಿದೆ.

‘ಹಿಮಾಚಲ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸತ್ತು ಬಿದ್ದಿದ್ದ ಬಾವಲಿಗಳ ಎರಡು ಮಾದರಿಗಳು ಮತ್ತು ಹೈದರಾಬಾದ್‌ನಲ್ಲಿ ಅದೇ ರೀತಿ ಪತ್ತೆಯಾಗಿದ್ದ ಬಾವಲಿಗಳ ಎರಡು ಮಾದರಿಗಳನ್ನೂ ಎರಡೂ ಸಂಸ್ಥೆಗಳು ಪರಿಶೀಲಿಸಿವೆ. ಆ ನಾಲ್ಕು ಮಾದರಿಗಳಲ್ಲೂ ನಿಫಾ ವೈರಾಣು ಪತ್ತೆ
ಯಾಗಿಲ್ಲ. ನಿಫಾ ಸೋಂಕಿನಿಂದ ಆ ಬಾವಲಿಗಳು ಮೃತಪಟ್ಟಿಲ್ಲ’ ಎಂದು ವರದಿ ಹೇಳಿದೆ.

‘ನಿಫಾ ಸೋಂಕಿನಿಂದ ಈವರೆಗೆ ಮೃತಪಟ್ಟಿರುವವರು ಮತ್ತು ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವವರು ಪರಸ್ಪರ ಸಂಪರ್ಕದಲ್ಲಿದ್ದರು ಎಂಬುದು ದೃಢಪಟ್ಟಿದೆ. ಈ ಎಲ್ಲರಿಗೂ ಮನುಷ್ಯರಿಂದಲೇ ಸೋಂಕು ಹರಡಿದೆ. ಆದರೆ ಸೋಂಕಿಗೆ ತುತ್ತಾದ ಮೊದಲ ವ್ಯಕ್ತಿಗೆ ಅದು ಹರಡಿದ್ದು ಹೇಗೆ ಎಂಬುದು ಇನ್ನಷ್ಟೇ ಪತ್ತೆಯಾಗಬೇಕಿದೆ’ ಎಂದು ವೈದ್ಯಕೀಯ ತಂಡ ಹೇಳಿದೆ.

‘ಪೇರಾಂಬ್ರದ  ಮೃತ ಮೂಸಾ ಅವರ ಮನೆಯ ಕೋಣೆಯೊಂದರಲ್ಲಿ ಮಾವಿನ ಹಣ್ಣುಗಳು ಸಿಕ್ಕಿದ್ದವು. ಅವನ್ನೂ ಸಂಗ್ರಹಿಸಿ ಇಡಲಾಗಿದೆ. ಅವುಗಳಲ್ಲಿ ಕೆಲವು ಹಣ್ಣುಗಳ ಮೇಲೆ ಬಾವಲಿಗಳು ಕಚ್ಚಿದ ಗುರುತುಗಳಿವೆ. ಆ ಹಣ್ಣುಗಳನ್ನೂ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆ ಹಣ್ಣುಗಳಲ್ಲಿ ನಿಫಾ ವೈರಾಣು ಇದೆಯೇ ಅಥವಾ ಇಲ್ಲವೇ ಎಂಬುದು ಪತ್ತೆಯಾದರೆ ಸೋಂಕು ಹರಡುವಿಕೆಯ ಮೂಲ ಪತ್ತೆಯಾಗಬಹುದು’ ಎಂದು ಈ ತಂಡ ಹೇಳಿದೆ.

ನಿಫಾ ಸೋಂಕಿಗೆ ಈವರೆಗೆ 12 ಮಂದಿ ಬಲಿಯಾಗಿದ್ದು, ಸೋಂಕಿಗೆ ತುತ್ತಾಗಿರುವ ಇನ್ನೂ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನಸಾಮಾನ್ಯರು ಗಾಬರಿ ಯಾಗುವ ಅವಶ್ಯಕತೆ ಇಲ್ಲ. ವೈರಾಣು ಮತ್ತು ಸೋಂಕು ಹರಡದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ
-ಕೇಂದ್ರ ಆರೋಗ್ಯ ಸಚಿವಾಲಯ

‘ಸೋಂಕು ಕೇರಳಕ್ಕಷ್ಟೇ ಸೀಮಿತ’

‘ಕೇರಳದಲ್ಲಿ ಈಗ ಪತ್ತೆಯಾಗಿರುವ ನಿಫಾ ಸೋಂಕು, ಆ ಪ್ರದೇಶಕ್ಕಷ್ಟೇ ಸೀಮಿತವಾಗಿದೆ. ದೇಶದ ಬೇರೆಡೆಗೆ ಅದು ಹರಡಿಲ್ಲ’ ಎಂದು ವೈದ್ಯಕೀಯ ತಂಡ ಹೇಳಿದೆ.

‘ಆದರೆ, ಕೋಯಿಕ್ಕೋಡ್ ಮತ್ತು ಮಲಪ್ಪುರಗಳಲ್ಲಿ ನಿಫಾ ವೈರಾಣು ಮತ್ತು ಸೋಂಕು ಹರಡಿದ್ದು ಹೇಗೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಅದನ್ನು ಪತ್ತೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಸೋಂಕು ಹರಡುವಿಕೆಯ ವಾಹಕ ಯಾವುದು ಎಂಬುದು ಪತ್ತೆಯಾದಾಗ ಮಾತ್ರ, ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯ’ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT