ಹಾಸನ: ಚರಂಡಿ, ಕಾಲುವೆಗಳಲ್ಲಿ ಹೂಳು; ತಪ್ಪದ ಗೋಳು

ಹಾಸನ: ಜೋರು ಮಳೆ ಬಂದರೆ ಸಾಕು ನಗರ, ಪಟ್ಟಣ ಮತ್ತು ಹಳ್ಳಿಗಳ ತಗ್ಗು ಪ್ರದೇಶದಲ್ಲಿ ನೀರು ನುಗ್ಗುವುದು ತಪ್ಪಿಲ್ಲ. ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥಿತವಾದ ಚರಂಡಿ ಮತ್ತು ಕಾಲುವೆಗಳಿಲ್ಲ. ಮನೆಗಳಿಗೆ ಯಾವಾಗ ನೀರು ನುಗ್ಗುತ್ತದೆಯೋ ಎಂಬ ಆತಂಕದಲ್ಲಿ ಜನರು ಜೀವನ ದೂಡುತ್ತಿದ್ದಾರೆ.
ಜಿಲ್ಲೆಯಾದ್ಯಂತ ಹೂಳು ತುಂಬಿದ ಚರಂಡಿಗಳು, ಗಿಡ,ಗಂಟಿ ಬೆಳೆದ ಕಾಲುವೆಗಳು ಸಾಕಷ್ಟಿವೆ. ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದರೂ ಸಂಬಂಧಪಟ್ಟವರು ಕ್ರಮ ಕೈಗೊಂಡಿಲ್ಲ. ಪ್ರತಿ ಮಳೆಗಾಲದಲ್ಲೂ ಅವಘಡ ಉಂಟಾಗುತ್ತಿದ್ದರೂ ನಗರ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯಿತಿ ಅಧಿಕಾರಿಗಳು ಎಚ್ಚೇತ್ತುಕೊಂಡಿಲ್ಲ. ಮಳೆ ನೀರು ಸರಾಗವಾಗಿ ಹರಿದು ಕೆರೆ, ಕಟ್ಟೆ, ನದಿಗಳನ್ನು ಸೇರಲು ವ್ಯವಸ್ಥಿತವಾದ ಚರಂಡಿ, ಕಾಲುವೆ, ನಾಲೆಗಳ ವ್ಯವಸ್ಥೆ ಇಲ್ಲದಿರುವುದೇ ಈ ಅವಾಂತರಕ್ಕೆ ಕಾರಣ.
ಹಾಸನ ನಗರದಲ್ಲಿ ರಾಜಕಾಲುವೆ ಒತ್ತುವರಿಯಿಂದ ಹೊಸ ಬಸ್ ನಿಲ್ದಾಣ ರಸ್ತೆ, ಪ್ರವಾಸಿ ಮಂದಿರ ಸುತ್ತಮುತ್ತ ನೀರು ನಿಲ್ಲುತ್ತದೆ. ಬಿ.ಎಂ. ರಸ್ತೆ, ಮಹಾವೀರ ವೃತ್ತ, ಕಟ್ಟಿನಕೆರೆ ಮಾರುಕಟ್ಟೆ, ಸರ್ಕಲ್ ಜಲಾವೃತವಾಗಿ ವಾಹನ ಸಂಚಾರಕ್ಕೆ ತೊಡಕಾಗುತ್ತದೆ. ನಗರದಲ್ಲಿ ಚರಂಡಿಗಳ ಅವ್ಯವಸ್ಥೆಯಿಂದ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.
ನಗರದ ಬಹುತೇಕ ವಾರ್ಡ್‌ಗಳಲ್ಲಿ ಚರಂಡಿಗಳಲ್ಲಿ ಹೂಳು ತುಂಬಿ ಕೊಳಚೆ ನೀರು ಸರಾಗವಾಗಿ ಹರಿಯದೇ ದುರ್ನಾತ ಬೀರುತ್ತಿದೆ. ಮಳೆ ಬಂದರೆ ತಗ್ಗು ಪ್ರದೇಶಗಳಿಗೆ ಈಗಲೂ ನೀರು ನುಗ್ಗುವ ಸ್ಥಿತಿ ಇದೆ. ಕೆಲ ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ನಗರದ ಹೊಯ್ಸಳ ನಗರದಲ್ಲಿ ಅನೇಕ ಮನೆಗೆ ಮಳೆ ನೀರು ನುಗ್ಗಿತು. ಆಹಾರ ಪದಾರ್ಥಗಳು ಹಾಳಾದವು.
ನಗರದ ಮಲ್ಲಿಗೆ ಹೋಟೆಲ್ ಮುಂಭಾಗದ ಚರಂಡಿ ಹೂಳು ತುಂಬಿರುವುದರಿಂದ ಜೋರು ಮಳೆ ಬಂದರೆ ರಸ್ತೆ ಮೇಲೆಯೇ ನೀರು ಹರಿಯುತ್ತದೆ. ಮಳೆ ನಿಂತ ಬಳಿಕ ಜನ ಮೂಗು ಮುಚ್ಚಿ ಓಡಾಡಬೇಕಿದೆ.
ರೈಲ್ವೆ ಮೇಲ್ಸೇತುವ ಕಾಮಗಾರಿ ನಡೆಯುವ ಸ್ಥಳ ಮಳೆಯಿಂದ ಕೆಸರುಮಯವಾಗಿದೆ. ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲದಿದ್ದರೂ ಕೆಸರುಮಯ ರಸ್ತೆಯಲ್ಲಿಯೇ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ.
ಅರಸೀಕೆರೆ ತಾಲ್ಲೂಕಿನಲ್ಲಿ ರಾಜಕಾಲುವೆ ಹಾಗೂ ರಸ್ತೆ ಒತ್ತುವರಿ ಆಗಿದೆ. ಉದ್ಯಾನ ಸೇರಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮೀಸಲಿದ್ದ ಸ್ಥಳಗಳನ್ನು ಕೆಲವರು ಅತಿಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹೊಸಹಳ್ಳಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಎಚ್.ಜಿ.ವೀರಭದ್ರಪ್ಪ ಇತ್ತೀಚೆಗೆ ತಾಲ್ಲೂಕು ಕಚೇರಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಮುಖ್ಯ ರಸ್ತೆಯ ಉಭಯ ಬದಿಗಳಲ್ಲಿ ಅಲ್ಲಲ್ಲಿ ಚರಂಡಿಗಳು ಕಸದಿಂದ ತುಂಬಿರುವುದರಿಂದ ಭಾರಿ ಮಳೆ ಬಂದಾಗ ಮಳೆ ನೀರು ರಸ್ತೆ ಮೇಲೆ ಹರಿಯುತ್ತದೆ. ಕಾಲ್ವೀಹಳ್ಳಿ ಕೆರೆ ತುಂಬಿ ಹರಿಯುವ ನೀರು ಸುಣ್ಣದ ಕಾಲುವೆ ಮೂಲಕ ದುರ್ಗಾದೇವಿ ಕೆರೆ ಸೇರುತ್ತದೆ. ಪಟ್ಟಣದ ಮಳೆಯ ನೀರು ಸಹ ಸುಣ್ಣದ ಕಾಲುವೆ ಸೇರುತ್ತದೆ. ಇತ್ತೀಚೆಗೆ ಈ ಕಾಲುವೆಯನ್ನು ಸಣ್ಣ ನೀರಾವರಿ ಇಲಾಖೆಯಿಂದ ದುರಸ್ತಿ ಮಾಡಲಾಗಿದೆ. ಆದರೆ ಕಾಲುವೆಯಲ್ಲಿ ಸಾಕಷ್ಟು ಗಿಡಗಂಟಿ ಬೆಳೆದಿದ್ದು, ನೀರು ಹರಿಯಲು ಅಡೆತಡೆ ಉಂಟು ಮಾಡುತ್ತಿದೆ.
ಪ್ರವಾಸಿ ಕೇಂದ್ರ ಬೇಲೂರು ಪಟ್ಟಣದಲ್ಲಿ ಕಿರಿದಾದ ರಸ್ತೆಗಳ ಜತೆಗೆ ಹೂಳು ತುಂಬಿರುವ ಚರಂಡಿಯಿಂದಾಗಿ ಪ್ರವಾಸಿಗರು ಹಾಗೂ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ. ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಿ ಅದರ ಮೇಲೆ ಸ್ಲ್ಯಾಬ್ ಅಳವಡಿಸಿದ್ದರೂ ಮಳೆ ಬಂದಾಗ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದೆ ರಸ್ತೆ ಮೇಲೆಯೇ ಹರಿಯುತ್ತದೆ. ಬಸ್ ನಿಲ್ದಾಣಕ್ಕೆ ಸಮೀಪ ಇರುವ ಹರ್ಡೀಕರ್ ವೃತ್ತದ ಇಂದಿರಾ ಕ್ಯಾಂಟೀನ್ ಸಮೀಪ ಮಳೆ ಬಂದ ವೇಳೆ ರಸ್ತೆಯ ಮೇಲೆ ನೀರು ನಿಂತು ಕರೆಯಂತಾಗುತ್ತದೆ.
ಚನ್ನಕೇಶವಸ್ವಾಮಿ ದೇವಾಲಯದ ಹಿಂಭಾಗದಿಂದಲೂ ಹರಿಯುವ ನೀರು ತಗ್ಗುಪ್ರದೇಶ ಹೊಳೆಬೀದಿಯ ಮೂಲಕ ಯಗಚಿ ನದಿಗೆ ಸೇರುತ್ತಾದರೂ ದೇಗುಲದಿಂದ ಹರ್ಡೀಕರ್ ಪ್ರತಿಮೆ ಇರುವ ಸ್ಥಳದವರೆಗೂ ನೀರು ಬಹುತೇಕ ರಸ್ತೆಯಲ್ಲೇ ಹರಿಯುತ್ತದೆ. ಫುಟ್‌ಪಾತ್ ತ್ಯಾಜ್ಯ ಚರಂಡಿ ಸೇರಿ ಸಮಸ್ಯೆ ಸೃಷ್ಟಿಯಾಗಿದೆ.
‘ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಚರಂಡಿ ಹೂಳು ತೆಗೆಯಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ವ್ಯಾಪಾರಿಗಳು ಕಸವನ್ನು ಚರಂಡಿಗೆ ಹಾಕದಂತೆ ಕಸದ ಟಿಪ್ಪರ್ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ಬೇಲೂರು ಪುರಸಭಾ ಮುಖ್ಯಾಧಿಕಾರಿ ಸುಜಯ್ ಕುಮಾರ್ ತಿಳಿಸಿದರು.
ಆಲೂರು ಪಟ್ಟಣದ ಮಸೀದಿ ಬಳಿ ಬಿಕ್ಕೋಡು ಕೂಡಿಗೆ ರಸ್ತೆಗೆ ನಿರ್ಮಾಣ ಮಾಡಿರುವ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹಗೊಂಡು ಕೊಳಚೆ ನೀರು ಸಂಗ್ರಹವಾಗುತ್ತಿದೆ. ಪಟ್ಟಣದ ಹೌಸಿಂಗ್ ಬೋರ್ಡ್ ಮತ್ತು ಬಿಕ್ಕೋಡು ರಸ್ತೆ ಇಕ್ಕೆಲಗಳಲ್ಲಿ ಇರುವ ಮನೆಗಳಿಂದ ಹೊರ ಬರುವ ತ್ಯಾಜ್ಯ ನೀರು ಚರಂಡಿಯಲ್ಲಿ ಹರಿದು ಬರುತ್ತದೆ. ಮೋರಿಯಲ್ಲಿ ನೀರು ರೋಗ ರುಜಿನಗಳ ತಾಣವಾಗಿದೆ.
ಅರಸೀಕೆರೆ ನಗರಸಭೆ ನಿರ್ಲಕ್ಷ್ಯದಿಂದ ಪಟ್ಟಣದ 1, 2 ಹಾಗೂ 5 ನೇ ವಾರ್ಡ್ ಗಳಲ್ಲಿ ಹಾದು ಹೋಗಿರುವ ರಾಜ ಕಾಲುವೆಯಲ್ಲಿ ತ್ಯಾಜ್ಯ ತುಂಬಿದ್ದು, ನಿವಾಸಿಗಳು ಅನಾರೋಗ್ಯದಿಂದ ಬಳಲುವಂತಾಗಿದೆ. 5ನೇ ವಾರ್ಡಿನಲ್ಲಿ ಸ್ವಚ್ಛತಾ ಕಾರ್ಯ ನಡೆಯದೇ ರಾಜಕಾಲುವೆ ತುಂಬಾ ತ್ಯಾಜ್ಯ ಸಂಗ್ರಹವಾಗಿದೆ. ಮಳೆಗಾಲದಲ್ಲಿ ಮಳೆಯ ನೀರು ಪಕ್ಕದ ವಸತಿ ಮನೆಗಳಿಗೆ ನುಗ್ಗುತ್ತಿದೆ. ಅದೇ ರೀತಿ 2 ನೇ ವಾರ್ಡ್‌ನಲ್ಲಿ ರಾಜಕಾಲುವೆ ಒತ್ತುವರಿಯಾಗಿ ಸಿದ್ದಯ್ಯ ನಗರದಿಂದ ಕೊಳಚೆ ನೀರು 2ನೇ ವಾರ್ಡ್ ಗೆ ಹರಿದು ಬರುತ್ತಿದ್ದು, ವಸತಿ ಮನೆಗಳ ಸುತ್ತ ನಿಲ್ಲುತ್ತಿರುವುದರಿಂದ ನಿವಾಸಿಗಳು ಆತಂಕದಲ್ಲಿದ್ದಾರೆ. ನಗರಸಭೆಗೆ ಎಷ್ಟು ಮನವಿ ಸಲ್ಲಿಸಿದರು ಪ್ರಯೋಜನ ಆಗಿಲ್ಲ.
‘ರಾಜಕಾಲುವೆ ತುಂಬ ಗಿಡಗಂಟಿಗಳು ಬೆಳೆದು ನಿಂತಿರುವುದರ ಜತೆಗೆ ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ರಾಜಕಾಲುವೆಗೆ ಯಾವುದೇ ತಡೆಗೋಡೆ ಇಲ್ಲದೇ ಇರುವುದರಿಂದ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ’ ಎಂದು ನಿವಾಸಿಗಳು ಅಳಲು ತೋಡಿಕೊಂಡರು.
ಚನ್ನರಾಯಪಟ್ಟಣ ಮುಖ್ಯರಸ್ತೆ ಚರಂಡಿಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ಜೋರಾಗಿ ಮಳೆ ಬಂದರೆ ಚರಂಡಿಯ ನೀರು,ಕಸ,ಕಡ್ಡಿ ರಸ್ತೆ ಮೇಲೆ ಹರಿದು ಕಿರಿಕಿರಿ ಉಂಟು ಮಾಡುತ್ತದೆ. ಮತ್ತೆ ಕೆಲ ಕಡೆ ರಸ್ತೆಯಲ್ಲಿನ ನೀರು ಚರಂಡಿಗೆ ಹರಿಯಲು ಸಂಪರ್ಕ ಕಲ್ಪಿಸಿಲ್ಲ. ಇಳಿಜಾರು ಪ್ರದೇಶದಲ್ಲಿ ಮಳೆಯ ನೀರು ನಿಲ್ಲದೇ ಸರಾಗವಾಗಿ ಹರಿಯುವಂತೆ ಮಾಡಬೇಕು. ಮಳೆ ಬಂದಾಗ ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ನೀರು ನಿಂತು ಕೆಸರು ಗದ್ದೆಯಂತಾಗಿ ವಿದ್ಯಾರ್ಥಿಗಳು, ಶಿಕ್ಷಕರು ತೊಂದರೆ ಅನುಭವಿಸುವಂತಾಗಿದೆ.
ಪ್ರಜಾವಾಣಿ ತಂಡ: ಕೆ.ಎಸ್.ಸುನಿಲ್, ಜೆ.ಎಸ್.ಮಹೇಶ್, ಜೆ.ಎನ್.ರಂಗನಾಥ್, ಸಿದ್ದರಾಜು, ಚಂದ್ರಶೇಖರ್, ಹರೀಶ್, ಮಲ್ಲೇಶ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.