ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಬಾಹಿರ ನಿವೇಶನ ನಿರ್ಮಾಣ: ಆರೋಪ

ಸರ್ಕಾರಿ ಅಧಿಕಾರಿಗಳು ಭಾಗಿ; ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಚ್‌.ಡಿ. ರೇವಣ್ಣ ಕಿಡಿ
Last Updated 30 ಮಾರ್ಚ್ 2021, 3:27 IST
ಅಕ್ಷರ ಗಾತ್ರ

ಹಾಸನ: ‘ನಗರದ ಸುತ್ತಮುತ್ತ ನಿಯಮ ಬಾಹಿರವಾಗಿ ಅನೇಕ ಖಾಸಗಿ ನಿವೇಶನಗಳು ನಿರ್ಮಾಣವಾಗುತ್ತಿದ್ದು, ಇದರ ಹಿಂದೆ ವಿವಿಧ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಎಚ್‌.ಡಿ. ರೇವಣ್ಣ ಆಗ್ರಹಿಸಿದರು.

‘ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗೃಹಮಂಡಳಿ, ಕೆಇಬಿ, ಅರಣ್ಯ ಇಲಾಖೆ, ತೋಟಗಾರಿಕೆ ಹಾಗೂ ಪರಿಸರ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ. ನಿಯಮ ಬಾಹಿರ ನಿವೇಶನಗಳಿಗೆ ಕಡಿವಾಣ ಹಾಕದಿದ್ದರೆ ಹುಡಾ ಹಾಗೂ ಹೌಸಿಂಗ್‌ ಬೋರ್ಡ್‌‌ ಬಾಗಿಲು ಮುಚ್ಚುವುದು ಒಳ್ಳೆಯದು. ಜಿಲ್ಲೆಯಲ್ಲಿ ಇದರ ದಂಧೆ ನಡೆಯುತ್ತಿದೆ, ಈ ಬಗ್ಗೆ ಮುಖ್ಯಮಂತ್ರಿ, ನಗರಾಭಿವೃದ್ಧಿ ಇಲಾಖೆ, ವಸತಿ ಸಚಿವ ಹಾಗೂ ಸಂಬಂಧ ಪಟ್ಟ ಇಲಾಖೆ ಮುಖ್ಯಕಾರ್ಯದರ್ಶಿ ಗಮನಕ್ಕೆ ತರಲಾಗುವುದು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜತೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನಗಳನ್ನು ಬೇರೆಯವರಿಗೆ ಮಾರಾಟ ಮಾಡಲಾಗುತ್ತಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇದಕ್ಕೆಲ್ಲ ಕಡಿವಾಣ ಹಾಕಲಾಗಿತ್ತು. ಖಾಸಗಿ ನಿವೇಶನಗಳಲ್ಲಿ ರಸ್ತೆ, ನೀರು, ವಿದ್ಯುತ್‌ ಸಂಪರ್ಕ ಸರಿಯಾಗಿ ಕಲ್ಪಿಸದೆ ನಿಯಮ ಉಲ್ಲಂಘಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಒಂದು ನಿವೇಶನ ನಿರ್ಮಾಣ ಮಾಡಬೇಕಾದರೆ ಶೇಕಡಾ 100 ರಷ್ಟು ಜಮೀನಿನಲ್ಲಿ ಶೇಕಡಾ 60 ರಷ್ಟು ನಿವೇಶನಕ್ಕೆ ಬಳಸಿಕೊಂಡು ಉಳಿದ ಶೇಕಡಾ 40 ರಷ್ಟನ್ನು ರಸ್ತೆ, ಉದ್ಯಾನ, ಶಾಲೆ... ಹೀಗೆ ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಬೇಕು ಎಂಬ ನಿಯಮ ಇದೆ. ಆದರೆ ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ’ ಎಂದು ದೂರಿದರು.

‘ನಗರದ ಸುತ್ತಮುತ್ತ ಖಾಸಗಿ ನಿವೇಶನಗಳಿಗೆ ಅನುಮತಿ ನೀಡುವ ಬದಲು ಹಾಸನ ನಗರಾಭಿವೃದ್ಧಿ ಪ್ರಾಧಿಕಾರವೇ ನಿವೇಶನಗಳನ್ನು ಮಾಡಿ ಬಡವರಿಗೆ ನೀಡಬಹುದು. ಆದರೆ, ನಗರದಲ್ಲಿ ಪೊಲೀಸ್‌ ಇಲಾಖೆ, ಕೆಎಸ್‌ಆರ್‌ಟಿಸಿ ಸಿಬ್ಬಂದಿ ನಿವೇಶನ ಎಂದು ಹೇಳಿಕೊಂಡು ತಮಗೆ ಬೇಕಾದವರಿಗೆ ಮಾರಾಟ ಮಾಡಲಾಗುತ್ತಿದೆ’ ಎಂದರು.

‘ರಾಜಕಾಲುವೆ ಮೇಲೆ, ಕೆರೆ ಅಚ್ಚುಕಟ್ಟು ಪ್ರದೇಶ, ರೈತರ ಕೃಷಿ ಜಮೀನಿನಲ್ಲಿ ನಿವೇಶನಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜಮೀನು ನೀಡದ ರೈತರಿಗೆ ಗೂಂಡಾಗಳನ್ನು ಬಿಟ್ಟು ಹೆದರಿಸಲಾಗುತ್ತಿದೆ. ಜಿಲ್ಲಾಧಿಕಾರಿ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕಂದಾಯ ಇಲಾಖೆ ಅಧಿಕಾರಿಗಳಿಗೂ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರ ವಿಂಗಡಣೆ ಸರಿಪಡಿಸುವಂತೆ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಚುನಾವಣಾ ಆಯೋಗಕ್ಕೆ ಮನವಿ ಕೊಟ್ಟಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಮಾಡಲಿ’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT