ಚುನಾವಣೆ: ನಮ್ಮದು ಸಣ್ಣ ಪಕ್ಷ. ಎಷ್ಟು ಸೀಟು ಕೊಡುತ್ತಾರೋ ಗೊತ್ತಿಲ - ದೇವೇಗೌಡ

7
‘ವೇಣು, ಸಿದ್ದರಾಮಯ್ಯ ಜತೆ ಚರ್ಚಿಸಿ ನಿರ್ಧಾರ’

ಚುನಾವಣೆ: ನಮ್ಮದು ಸಣ್ಣ ಪಕ್ಷ. ಎಷ್ಟು ಸೀಟು ಕೊಡುತ್ತಾರೋ ಗೊತ್ತಿಲ - ದೇವೇಗೌಡ

Published:
Updated:
Prajavani

ಹಾಸನ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯಲಿದ್ದು, ಸೀಟು ಹಂಚಿಕೆ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

‘ನಮ್ಮದು ಸಣ್ಣ ಪಕ್ಷ. ಎಷ್ಟು ಸೀಟು ಕೊಡುತ್ತಾರೋ ಗೊತ್ತಿಲ್ಲ. ಈ ಕುರಿತು ಇನ್ನೂ ಚರ್ಚೆ ನಡೆದಿಲ್ಲ. ಕಾಂಗ್ರೆಸ್ ನ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಅಂತಿಮ ತೀರ್ಮಾನ ಹೊರ ಬೀಳಲಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಜೆಡಿಎಸ್ ಗೆ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ವೀರಪ್ಪಮೊಯ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರೇ ಜೆಡಿಎಸ್ ಗೆ 10 ಸ್ಥಾನ ಬಿಟ್ಟು ಕೊಡಬೇಕು ಎಂದಿದ್ದಾರೆ’ ಎಂದರು.

‘ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೀರಿ’ ಎಂಬ ಪ್ರಶ್ನೆಗೆ ‘ಆ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ’ ಎಂದು ಹೇಳುವ ಮೂಲಕ ಸ್ಪರ್ಧೆ ಕುತೂಹಲವನ್ನು ಮತ್ತೆ ಕಾಯ್ದಿರಿಸಿದರು.

ಆರ್ಥಿಕವಾಗಿ ಹಿಂದುಳಿದಿರುವ ಮೇಲ್ಜಾತಿಯವರಿಗೆ ಕೇಂದ್ರ ಸರ್ಕಾರ ನೀಡಿರುವ ಶೇ 10 ರಷ್ಟು ಮೀಸಲು ಕುರಿತು ಪ್ರತಿಕ್ರಿಯಿಸಿದ ಗೌಡರು, ‘ಕೇಂದ್ರ ಸರ್ಕಾರದ ಜನಪ್ರಿಯತೆ ಕುಗ್ಗಿದೆ ಎಂಬುದಕ್ಕೆ ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಸಾಕ್ಷಿ. ಮುಂದಿನ ಚುನಾವಣೆಯಲ್ಲಿ ಮೇಲ್ವರ್ಗದ ಜನರನ್ನು ಓಲೈಸಿ, ಶತಾಯಗತಾಯ ಚುನಾವಣೆಯಲ್ಲಿ ಗೆಲ್ಲಲು ಮೀಸಲು ಅಸ್ರ್ತ ಬಳಸಿದ್ದಾರೆ. ಪ್ರತಿಪಕ್ಷಗಳೂ ಮರು ಮಾತನಾಡದೇ ಮಸೂದೆ ಪಾಸ್ ಆಗಲು ಸಹಕರಿಸಿದವು. ಇದರ ಅರ್ಥ ಎಲ್ಲರಿಗೂ ಚುನಾವಣೆಯಲ್ಲಿ ಅನುಕೂಲವಾಗಬೇಕು ಎಂಬುದೇ ಆಗಿದೆ’ ಎಂದು ನುಡಿದರು.

‘ನಮಗೆ ಈ ಬಗ್ಗೆ ಭಯವಿಲ್ಲ. ಏಕೆಂದರೆ ಕುಮಾರಸ್ವಾಮಿ ಮತ್ತು ನಾನು ಬ್ರಾಹ್ಮಣ ಸಮುದಾಯಕ್ಕೆ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ನಾನು ನಿತ್ಯ ಬ್ರಾಹ್ಮಣರ ಮಾರ್ಗದರ್ಶನದಲ್ಲೇ ಪೂಜೆ ಮಾಡುವುದು’ ಎಂದು ನಸು ನಕ್ಕರು.
‘ಶೇ 10 ರಷ್ಟು ಮೀಸಲು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್ ಗೆ ಹೋಗಿದ್ದಾರೆ ಅಲ್ಲಿ ಏನಾಗುತ್ತದೆ ಕಾದು ನೋಡೋಣ’ ಎಂದರು.

ಸುಪ್ರೀಂ ಮಧ್ಯೆ ಪ್ರವೇಶ ನಂತರವೂ ಸಿಬಿಐ ನಿರ್ದೇಶಕರನ್ನು ವಜಾ ಮಾಡಿರುವ ಕುರಿತು ಮಾತನಾಡಿದ ಗೌಡರು, ‘ಸಿಬಿಐ ಸೇರಿ ಅನೇಕ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದು ಹೆಚ್ಚಾಗಿದೆ. ಅದರಲ್ಲೂ ಚುನಾವಣೆ ಸಂದರ್ಭದಲ್ಲಿ ಯಾರನ್ನು ಹಣಿಯಬೇಕೋ ಅದಕ್ಕಾಗಿ ತನಿಖಾ ಸಂಸ್ಥೆಗಳನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !