ಗುರುವಾರ , ಏಪ್ರಿಲ್ 22, 2021
30 °C
ಶಾದಿ ಮಹಲ್‌ ಪ್ರಗತಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅಧಿಕಾರಿಗಳಿಗೆ ಸೂಚನೆ

ಸಾಮಾಜಿಕ ಕಾರ್ಯಕ್ಕೆ ಸಮುದಾಯ ಭವನದ ಆದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಅಲ್ಪಸಂಖ್ಯಾತರ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ನೀಡಿರುವ ಅನುದಾನವನ್ನು ಸಮರ್ಪಕವಾಗಿ, ಬಳಸಿಕೊಂಡು ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಮುದಾಯ ಭವನ, ಶಾದಿಮಹಲ್‍ಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅನೇಕ ವರ್ಷಗಳಿಂದ ಪೂರ್ಣಗೊಂಡಿಲ್ಲದ ಸಮುದಾಯ ಭವನಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗೆ ಸೂಚಿಸಿದ ಅವರು, ಸರ್ಕಾರದ ಅನುದಾನ ದುರ್ಬಳಕೆ ಕಂಡು ಬಂದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಸಮುದಾಯ ಭವನವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಭವನದಲ್ಲಿ ಕಾರ್ಯಕ್ರಮಗಳು ನಡೆಸುವಾಗ ಸಾಮಾನ್ಯರಿಗೆ ಕೈಗೆಟಕುವಂತೆ ಬಾಡಿಗೆ ನಿಗದಿ ಮಾಡಬೇಕು. ಶಾದಿ ಮಹಲ್‍ಗಳನ್ನು ಒಂದು ಸಮುದಾಯದ ಬಳಕೆಗೆ ಮೀಸಲಿರಿಸದೆ ಎಲ್ಲಾ ಬಡ ವರ್ಗದವರ ಬಳಕೆಗೆ ಬರುವಂತೆ ನೋಡಿಕೊಳ್ಳಬೇಕು. ಕಟ್ಟಡಗಳಿಗೆ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.

ಸಮುದಾಯ ಭವನದಿಂದ ಬರುವ ಆದಾಯವನ್ನು ಸರ್ಕಾರಿ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಅಥವಾ ಸ್ಮಾರ್ಟ್‍ಕ್ಲಾಸ್‍ಗಳನ್ನು ಒದಗಿಸಲು, ಆಸ್ಪತ್ರೆಗಳಿಗೆ ಸಹಾಯ ಮಾಡುವುದು ಹಾಗೂ ಸರ್ಕಾರಿ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸುವಂತಹ ಸಮಾಜ ಒಳ್ಳೆಯ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಮಾತನಾಡಿ, ಜಿಲ್ಲೆಯಲ್ಲಿ 22 ಸಮುದಾಯ ಭವನಗಳಿಗೆ ಅನುಮೋದನೆ ನೀಡಲಾಗಿದೆ. ಅದರಲ್ಲಿ ಜೈನ್ 3, ಕ್ರಿಶ್ಚಿಯನ್ 2, ಮುಸ್ಲಿಂ 3 ಸೇರಿದಂತೆ ಒಟ್ಟು 8 ಭವನಗಳ ಕಾಮಗಾರಿ ಪೂರ್ಣಗೊಂಡಿದ್ದು, ಕಾರ್ಯ ರೂಪದಲ್ಲಿದೆ. 6 ಭವನಗಳ ಕಾಮಗಾರಿ ಮುಗಿಯುವ ಹಂತದಲ್ಲಿದೆ ಉಳಿದ 14 ಕಾಮಗಾರಿಗಳ ಕೆಲಸ ಚುರುಕುಗೊಳಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ವಿವಿಧ ಸಮುದಾಯ ಭವನದ ಕಾರ್ಯದರ್ಶಿಗಳು, ಸದಸ್ಯರು, ಅಲ್ಪ ಸಂಖ್ಯಾತ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು