ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

267 ಪಂಚಾಯಿತಿಗಳಲ್ಲೂ ಘನ ತ್ಯಾಜ್ಯ ನಿರ್ವಹಣಾ ಘಟಕ

₹ 8.22 ಕೋಟಿ ಅನುದಾನ ಪಂಚಾಯಿತಿಗಳಿಗೆ ಬಿಡುಗಡೆ: ಜಿಲ್ಲಾಧಿಕಾರಿ ಆರ್.ಗಿರೀಶ್
Last Updated 26 ಜನವರಿ 2022, 15:57 IST
ಅಕ್ಷರ ಗಾತ್ರ

ಹಾಸನ: ‘ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 267 ಗ್ರಾಮ ಪಂಚಾಯಿತಿಗಳಲ್ಲೂ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಒಟ್ಟು ₹ 8.22 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿದ ಅವರು, ‘ಈಗಾಗಲೇ ಕೆಲವು ಪಂಚಾಯ್ತಿಗಳಲ್ಲಿ ಘಟಕ ಸ್ಥಾಪಿಸಲಾಗಿದೆ. ಉಳಿದೆಡೆ ಸ್ಥಾಪಿಸಲು ಅನುಮೋದನೆ ದೊರಕಿದೆ’ ಎಂದರು.

‘ಕೋವಿಡ್‍ನಿಂದ ಮೃತಪಟ್ಟ ಹಾಗೂ ಬಡತನ ರೇಖೆಗಿಂತ ಕೆಳಗಿರುವ 696 ಕುಟುಂಬದವರಿಗೆತಲಾ ₹ 1 ಲಕ್ಷದಂತೆ ₹ 6.96 ಕೋಟಿ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದಪ್ರತಿ ಕುಟುಂಬಕ್ಕೆ ತಲಾ ₹ 50 ಸಾವಿರದಂತೆ ಪರಿಹಾರ ಬಿಡುಗಡೆ ಮಾಡಿದ್ದು, 696 ಬಿಪಿಎಲ್,352 ಎಪಿಎಲ್ ಕುಟುಂಬ ಸೇರಿ ಒಟ್ಟು 1048 ಸಂತ್ರಸ್ತರಿಗೆ ₹ 5.24 ಕೋಟಿ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ’ ಎಂದು ಹೇಳಿದರು.

‘ಅತಿವೃಷ್ಟಿಯಿಂದ ಹಾನಿಯಾಗಿದ್ದ ಜಿಲ್ಲೆಯ 81 ಸಾವಿರ ಹೆಕ್ಟೇರ್ ಪ್ರದೇಶದ ಒಟ್ಟು 1.51 ಲಕ್ಷಫಲಾನುಭವಿಗಳ ಖಾತೆಗೆ ₹ 73.17 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ’ ಎಂದುಹೇಳಿದರು.

‘ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಅಮೃತ ವಸತಿಯೋಜನೆಯಡಿ ಜಿಲ್ಲೆಯಲ್ಲಿ 27 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದ್ದು, ಸುಮಾರು6884 ಮನೆಗಳನ್ನು ನೀಡಲಾಗುತ್ತಿದೆ. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದರು.

‘2021–22ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಾರ್ಷಿಕ 52 ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಿದ್ದು, ಈವರೆಗೆ 50.21 ಲಕ್ಷ ಮಾನವ ದಿನಗಳ ಸೃಜನೆ ಮಾಡಿ ಶೇ 96 ಪ್ರಗತಿ ಸಾಧಿಸಲಾಗಿದೆ. ₹ 252.63 ಕೋಟಿ ಆರ್ಥಿಕ ಗುರಿಗೆ ಅನುಗುಣವಾಗಿ ₹ 184.71 ಕೋಟಿ ವೆಚ್ಚ ಭರಿಸಿದ್ದು, ಜಿಲ್ಲೆ ಪ್ರಗತಿಯಲ್ಲಿ ರಾಜ್ಯಕ್ಕೆ 2ನೇ ಸ್ಥಾನದಲ್ಲಿದೆ’ ಎಂದರು.

‘ಕೃಷಿ ಇಲಾಖೆ ಮೂಲಕ ರೈತ ವಿದ್ಯಾನಿಧಿ ಯೋಜನೆಯಡಿ ಮೆಟ್ರಿಕ್ ನಂತರದ ಕೋರ್ಸ್‌ಗಳಿಗೆ ಸೇರುವ ರೈತರ ಮಕ್ಕಳಿಗೆ ₹ 2,500 ರಿಂದ ₹ 11 ಸಾವಿರ ವರೆಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ರೈತ ಕುಟುಂಬದ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಕ್ಕಾಗಿ ವಾರ್ಷಿಕ ₹ 2 ಸಾವಿರ ನೀಡುವ ನೂತನ ಯೋಜನೆ ಜಾರಿಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಶಾಸಕ ಪ್ರೀತಂ ಜೆ.ಗೌಡ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಆರ್.ಮೋಹನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜು, ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್.ಬಸವರಾಜು, ಹೆಚ್ಚುವರಿಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ, ಸರ್ಕಾರಿನೌಕರರ ಸಂಘದ ಅಧ್ಯಕ್ಷ ಈ.ಕೃಷ್ಣೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT