ಆಲೂಗಡ್ಡೆ ಬೆಳೆ ನಷ್ಟಕ್ಕೆ ಪರಿಹಾರ

7
ಮುಖ್ಯಮಂತ್ರಿ ಜತೆ ಚರ್ಚಿಸಿ ನಿರ್ಧಾರ: ರೇವಣ್ಣ

ಆಲೂಗಡ್ಡೆ ಬೆಳೆ ನಷ್ಟಕ್ಕೆ ಪರಿಹಾರ

Published:
Updated:
Deccan Herald

ಹಾಸನ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆ ನಾಶಕ್ಕೆ ಪರಿಹಾರ ನೀಡುವ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

ಅಂಗಮಾರಿ ರೋಗ, ಕಳಪೆ ಬಿತ್ತನೆ ಬೀಜ ಹಾಗೂ ಅಧಿಕ ಮಳೆಯಿಂದಾಗಿ ಪ್ರಸಕ್ತ ವರ್ಷ 12 ಸಾವಿರ ಹೆಕ್ಟೇರ್‌ ಬಿತ್ತನೆ ಪ್ರದೇಶ ಪೈಕಿ 6,461 ಹೆಕ್ಟೇರ್‌ ಬೆಳೆ ನಾಶಗೊಂಡು, ಅಂದಾಜು ₹ 50 ಕೋಟಿ ನಷ್ಟವಾಗಿದೆ. ಬೆಳೆ ನಾಶಕ್ಕೆ ನಿಖರ ಕಾರಣ ತಿಳಿದುಕೊಳ್ಳಲಾಗುವುದು. ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಪರಿಹಾರ ಒದಗಿಸಲು ತೋಟಗಾರಿಕೆ ಇಲಾಖೆ ಸಚಿವ ಹಾಗೂ ಸಿ.ಎಂ. ಜತೆ ಚರ್ಚಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಶಕಗಳ ಹಿಂದೆ ಜಿಲ್ಲೆಯಲ್ಲಿ 1.20 ಲಕ್ಷ ಹೆಕ್ಟೇರ್‌ನಲ್ಲಿ ಆಲೂ ಬೆಳೆಯಲಾಗುತ್ತಿತ್ತು. ಈಗ 12 ಸಾವಿರ ಹೆಕ್ಟೇರ್‌ಗೆ ಇಳಿದಿದೆ. ಪಂಜಾಬ್‌, ಹಿಮಾಚಲ ಪ್ರದೇಶ ಬಿಟ್ಟರೆ ಅತಿ ಹೆಚ್ಚು ಆಲೂ ಬೆಳೆಯುತ್ತಿರುವ ರಾಜ್ಯ ಕರ್ನಾಟಕ. ಆಲೂ ಬೆಳೆಗೆ ಉತ್ತೇಜನಕ್ಕೆ ನೀಡುವ ಉದ್ದೇಶದಿಂದ ಬಿತ್ತನೆ ಬೀಜಕ್ಕೆ ಶೇಕಡಾ 100 ಸಬ್ಸಿಡಿ ನೀಡಲು ಚಿಂತಿಸಲಾಗಿದೆ ಎಂದು ವಿವರಿಸಿದರು.

ಸೋಮನಹಳ್ಳಿ ಕಾವಲ್‌ ಬಳಿ ತೋಟಗಾರಿಕಾ ಕಾಲೇಜು ಹಾಗೂ ಆಲೂ ಸಂಶೋಧನಾ ಕೇಂದ್ರ ತೆರೆಯಲು 400 ಎಕರೆ ಜಾಗ ಮೀಸಲಿರಿಸಲಾಗಿದೆ. ಗುಣಮಟ್ಟದ ಬಿತ್ತನೆ ಬೀಜ ವಿತರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ನಾಲೆಗಳ ಹೂಳು ತೆಗೆದ ಬಳಿ ಯಗಚಿಯಿಂದ ನೀರು ಬಿಡುಗಡೆಗೆ ಸೂಚಿಸಲಾಗಿದೆ. ಪಾಂಡವಪುರ, ನಾಗಮಂಗಲ ಭಾಗಕ್ಕೂ ನೀರು ಬಿಡಲು ಕ್ರಮ ಕೈಗೊಳ್ಳಲಾಗುವುದು. ಆನೆ ದಾಳಿಯಿಂದ ಹತ್ತು ವರ್ಷದಲ್ಲಿ 54 ಜನರು ಮೃತಪಟ್ಟಿದ್ದಾರೆ. ಪ್ರಸಕ್ತ ವರ್ಷ ನಾಲ್ವರು ಸಾವಿಗೀಡಾಗಿದ್ದಾರೆ. ಆನೆ ಹಾವಳಿ ತಪ್ಪಿಸಲು ಮೂರು ದಿನದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾಸಕ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಚಿವರ ಸಭೆ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಸಂಸದ ಎಚ್‌.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ನಿರ್ಧಾರ ಕೈಗೊಳ್ಳುವರು. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರ ಹೊಸ ಬಸ್ ನಿಲ್ದಾಣ ಬಳಿ 4 ಪಥದ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದರು.

‘ಕೋಲಾರ, ಹಾಸನ ಸೇರಿದಂತೆ ರಾಜ್ಯದ ಯಾವುದೇ ಹಾಲು ಒಕ್ಕೂಟ ನಷ್ಟ ಅನುಭವಿಸಬಾರದು. ಯುಎಚ್‌ಟಿ ಘಟಕ ಹೊಂದಿರುವ ಒಕ್ಕೂಟಗಳಿಗೆ ರಕ್ಷಣಾ ಇಲಾಖೆ ಹಾಲು ಸರಬರಾಜು ಟೆಂಡರ್‌ ನೀಡಲಿ. ಸಂಸದ ವೀರಪ್ಪ ಮೊಯಿಲಿ ಆರೋಪ ಮಾಡಿರುವಂತೆ ಇದರಲ್ಲಿ ನನ್ನ ಪಾತ್ರ ಇಲ್ಲ’ ಎಂದು ರೇವಣ್ಣ ಸ್ಪಷ್ಟಪಡಿಸಿದರು.

 ವಿಮಾನ ನಿಲ್ದಾಣ: ರೈತರ ಜತೆ ಸಭೆ
ವಿಮಾನ ನಿಲ್ದಾಣಕ್ಕೆ ಭೂಮಿ ವಶಪಡಿಸಿಕೊಳ್ಳುವ ಕುರಿತು ಗುರುವಾರ ರೈತರ ಸಭೆ ನಡೆಸಲಾಗುವುದು. ಭೂಮಿ ನೀಡಲು ಒಪ್ಪದಿದ್ದರೆ ಜಿಲ್ಲಾಧಿಕಾರಿ, ಕೆಎಐಡಿಬಿ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ರೇವಣ್ಣ ಹೇಳಿದರು.

ಅತಿವೃಷ್ಟಿಗೆ ಹಾನಿಯಾಗಿರುವ ಆಲೂಗೆಡ್ಡೆ ಬೆಳೆ

ತಾಲ್ಲೂಕು ಬೆಳೆ ನಷ್ಟ ಪ್ರದೇಶ (ಹೆಕ್ಟೇರ್‌) ಮೊತ್ತ (ಲಕ್ಷಗಳಲ್ಲಿ)
ಆಲೂರು 173 ₹147
ಅರಕಲಗೂಡು 600 ₹510
ಬೇಲೂರು 61 ₹39.65
ಹಾಸನ 5591 ₹4268
ಹೊಳೆನರಸೀಪುರ 36 ₹13.70

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !