ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಮಂಜೂರಾತಿ ವಿಳಂಬಕ್ಕೆ ಆಕ್ರೋಶ

ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕ ಸಂಘಟನೆಗಳ ಒಕ್ಕೂಟ ಪ್ರತಿಭಟನೆ
Last Updated 12 ಡಿಸೆಂಬರ್ 2018, 13:46 IST
ಅಕ್ಷರ ಗಾತ್ರ

ಹಾಸನ : ಕಾರ್ಮಿಕರ ಸೌಲಭ್ಯಗಳನ್ನು ಮಂಜೂರು ಮಾಡುವಲ್ಲಿ ಆಗುತ್ತಿರುವ ವಿಳಂಬ ಖಂಡಿಸಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘಟನೆಗಳ ಒಕ್ಕೂಟ ಮತ್ತು ಎಐಟಿಯುಸಿ ಕಾರ್ಯಕರ್ತರು ಕಾರ್ಮಿಕ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.

ನಗರದ ಸಾಲಗಾಮೆ ರಸ್ತೆ, ಹೇಮಾವತಿ ಪ್ರತಿಮೆ, ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ಬಂದು ಮನವಿ ಸಲ್ಲಿಸಿದರು.

‘ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಹಿತಕ್ಕಾಗಿ ಕ್ಷೇಮಾಭಿವೃದ್ಧಿ ಮಂಡಳಿ ರಚಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಂಡಳಿಯು ಕಟ್ಟಡ ಕಾರ್ಮಿಕರನ್ನು ಕಡೆಗಣಿಸುತ್ತಿವೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಅಪಘಾತ ಪರಿಹಾರ, ವೈದ್ಯಕೀಯ ವೆಚ್ಚ ಹಾಗೂ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಮಂಜೂರು ಮಾಡುವಲ್ಲಿ ವಿಳಂಬ ಮಾಡಲಾಗುತ್ತಿದೆ. ಇದರಿಂದ ಫಲಾನುಭವಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ’ ಎಂದು ದೂರಿದರು.

‘ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ನಿಧಿಯನ್ನು ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಬಳಸಕೂಡದು. ಪ್ರಮುಖ ಕಾಯಿಲೆಗಳಾದ ಹೃದ್ರೋಗ, ಕಿಡ್ನಿ ಜೋಡಣೆ, ಮೂಳೆ ಶಸ್ತ್ರ ಚಿಕಿತ್ಸೆ, ಪಿತ್ತಕೋಶದಲ್ಲಿ ಕಲ್ಲು ತೆಗೆಯುವುದು ಮುಂತಾದವುಗಳಿಗೆ ಮಂಡಳಿಯು ನೇರವಾಗಿ ಚಿಕಿತ್ಸಾ ವೆಚ್ಚವನ್ನು ಸಂಬಂಧಪಟ್ಟ ಆಸತ್ರೆಗೆ ಪಾವತಿಸಬೇಕು. ಭಾಗ್ಯಲಕ್ಷ್ಮಿ ಬಾಂಡ್ ಕೊಡುವುದನ್ನು ನಿಲ್ಲಿಸಿ ಮದುವೆ ನಿಮಿತ್ತದ ಸಹಾಯಧನವನ್ನು ಫಲಾನುಭವಿಗಳಿಗೆ ನೇರವಾಗಿ ನೀಡಬೇಕು. ಸರ್ಕಾರದ ಯೋಜನೆ ಅಡಿ ನಿವೇಶನ ಮತ್ತು ವಾಸಿಸಲು ಮನೆಗಳನ್ನು ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

‘2018ರ ಜ. 4 ರಿಂದ ನೋಂದಣಿಯಾದ ಕಟ್ಟಡ ಕಾರ್ಮಿಕರಿಗೆ ಗುರುತಿನ ಕಾರ್ಡ್ ನೀಡಲು ವಿಳಂಬ ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬ ಹಾಗೂ ಅಪಘಾತವಾದವರಿಗೆ ಕಾರ್ಡ್ ನೀಡಬೇಕು ಹಾಗೂ ಪರಿಹಾರ ಮಂಜೂರು ಮಾಡಬೇಕು. ಮಹಿಳಾ ಕಟ್ಟಡ ಕಾರ್ಮಿಕರಿಗೆ ನೋಂದಣಿಯಾಗಿ ಮೂರು ವರ್ಷ ಕಳೆದರೂ ಹೆರಿಗೆ ಧನ ಸಹಾಯ ಮಂಜೂರಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಐಟಿಯುಸಿ ಮುಖಂಡ ಎಂ.ಸಿ.ಡೋಂಗ್ರೆ, ಕಾರ್ಮಿಕ ಮುಖಂಡರಾದ ಮುಮ್ತಾಜ್, ಎಚ್.ವಿ.ಸ್ವಾಮಿ, ಮಂಜೇಗೌಡ, ರಾಜಣ್ಣ, ಶಶಿಧರ್, ಗಣೇಶ್, ಚಂದ್ರು, ಧರ್ಮರಾಜ್, ರೈತ ಮುಖಂಡ ಕೊಟ್ಟೂರು ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT