ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಜಿಲ್ಲೆಯಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಆರಂಭಿಸಿ

ಬಿಜಿವಿಎಸ್‌ 8 ನೇ ಜಿಲ್ಲಾ ಸಮ್ಮೇಳನದಲ್ಲಿ ಒತ್ತಾಯ
Last Updated 30 ನವೆಂಬರ್ 2022, 4:04 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಆರಂಭಿಸಲು ನಗರದ ನಿವೃತ್ತ ಸರ್ಕಾರಿ ನೌಕರರ ಸಭವನದಲ್ಲಿ ಈಚೆಗೆ ನಡೆದ ಬಿಜಿವಿಎಸ್ ಜಿಲ್ಲಾ ಸಮಿತಿಯ 8ನೇ ವಿಜ್ಞಾನ ಕಾರ್ಯಕರ್ತರ 8 ನೇ ಜಿಲ್ಲಾ ಸಮ್ಮೇಳನ ಒತ್ತಾಯಿಸಿದೆ.

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ತೆರೆಯಲು ಹೋರಾಟ-ಒತ್ತಡಗಳ ಫಲವಾಗಿ ನಗರದ ಬೇಲೂರು ರಸ್ತೆಯ ಸೀಗೆ ಗುಡ್ಡದಲ್ಲಿ 9 ಎಕರೆ 28 ಗುಂಟೆ ಸ್ಥಳ ಕಾದಿರಿಸಲಾಗಿದೆ. ಅಲ್ಲಿ ಬೇಗ ವಿಜ್ಞಾನ ಕೇಂದ್ರ ಸ್ಥಾಪನೆ ಕೆಲಸ ಆಗಬೇಕು. ನಿರಂತರ ಚಟುವಟಿಕೆ ನಡೆಯಲು ಅನುಕೂಲವಾಗುವಂತೆ ರೂಪುರೇಷೆ ಸಿದ್ಧಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತು.

ರಾಜ್ಯದಲ್ಲಿ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರಗಳ ಪ್ರತಿಬಂಧ ಮತ್ತು ನಿರ್ಮೂಲನೆ ಅಧಿನಿಯಮ– 2017 ಮತ್ತು ಅಮಾನವೀಯ ದುಷ್ಠ ಪದ್ಧತಿಗಳು ಹಾಗೂ ವಾಮಾಚಾರ ಪ್ರತಿಬಂಧ ಮತ್ತು ನಿರ್ಮೂಲನೆ ನಿಯಮಾವಳಿ– 2020 ಈಗಾಗಲೇ ಜಾರಿಗೆ ಬಂದಿದೆ. ನಾಡಿನ ಪ್ರತಿ ಪ್ರಾರ್ಥನಾ ಮಂದಿರದ ಆವರಣದಲ್ಲಿ ಈ ಬಗ್ಗೆ ನೋಟಿಸ್ ಲಗತ್ತಿಸಬೇಕು ಎಂದು ಒತ್ತಾಯಿಸಿತು.

ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದಿದ್ದಕ್ಕೆ ಹಸಿರು ನ್ಯಾಪೀಠ ರಾಜ್ಯಕ್ಕೆ ₹ 2,900 ಕೋಟಿ ದಂಡ ವಿಧಿಸಿದ್ದು, ಜಿಲ್ಲೆಯಾದ್ಯಂತ ಘನತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ನಡೆಸಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಮರುಬಳಕೆ ಘಟಕ ತೆರೆಯಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸುವ ನಿರ್ಣಯ ಕೈಗೊಳ್ಳಲಾಯಿತು.

ಬಿಜಿವಿಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಆರ್.ರಾಮಕೃಷ್ಣ ಮಾತನಾಡಿ, ಮಹಿಳಾ ಸಮಾನತೆ, ಪರಿಸರ ಕಾಳಜಿ, ಕಲಿಕಾ ಚೇತರಿಕೆ, ಜನಾರೋಗ್ಯ ಹಾಗೂ ಸಂವಿಧಾನ ಅರ್ಥ ಮಾಡಿಸುವ ಪ್ರಮುಖ ಚಟುವಟಿಕೆ ನಡೆಸುವ ಮೂಲಕ ಜನತೆಯಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವ, ವಿಜ್ಞಾನದ ಹಾದಿಯಲ್ಲಿ ಸಾಗುವ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.

ನೂತನ ಪದಾಧಿಕಾರಿಗಳ ಆಯ್ಕೆ

ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳಾಗಿ ವೈದ್ಯೆ ಡಾ.ಎ.ಸಾವಿತ್ರಿ (ಗೌರವಾಧ್ಯಕ್ಷೆ), ಅರಕಲಗೂಡು ಪಿಇಎಸ್ ಐಟಿಐನ ಪ್ರಾಂಶುಪಾಲ ಎಚ್.ಟಿ.ಗುರುರಾಜು (ಅಧ್ಯಕ್ಷ), ಬೇಲೂರಿನ ನಿವೃತ್ತ ಶಿಕ್ಷಕಿ ಸಿ.ಸೌಭಾಗ್ಯ, ನಿಟ್ಟೂರಿನ ವೈದ್ಯಾಧಿಕಾರಿ ಡಾ.ಎಚ್.ಜಿ.ಮಂಜುನಾಥ್, ಆಲೂರು ತಾಲ್ಲೂಕಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರಮೀಳಾ. ಸಮಾಜ ಸೇವಕಿ ಮಮತಾ ಶಿವು (ಉಪಾದ್ಯಕ್ಷರು), ಸಿದ್ದೇಶ್ವರ ಐಟಿಐ ಉಪನ್ಯಾಸಕ ಅಹಮದ್ ಹಗರೆ (ಕಾರ್ಯದರ್ಶಿ), ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ, ಕೆ.ವಿ.ಕವಿತಾ, ಅರ್ಜುನಶೆಟ್ಟಿ, ನಾಗೇಶ್ (ಜಂಟಿ ಕಾರ್ಯದರ್ಶಿಗಳು) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT