ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥ್ರಿಲ್ಲಿಂಗ್ ಅನುಭವ ನೀಡುವ ಆರ್‌–3

Last Updated 16 ಮೇ 2018, 19:30 IST
ಅಕ್ಷರ ಗಾತ್ರ

ಯಮಹಾ ಬೈಕ್‌ಗಳೆಂದರೇ ಯುವಕರಲ್ಲಿ ಒಂದು ರೀತಿ ಥ್ರಿಲ್ಲಿಂಗ್‌ ಅನುಭವ. ರಸ್ತೆ ಮೇಲೆ ಸರ‍್ರನೆ ಶಬ್ದ ಮಾಡಿಕೊಂಡು ಗಾಳಿಗೂ ಸಿಗದಂತಹ ವೇಗದಲ್ಲಿ ಹೋದಾಗ ‘ನಾವೇ ರಸ್ತೆ ರಾಜರು’ ಎಂಬ ಮನೋಭಾವ. ಇದಕ್ಕೆಲ್ಲ ಕಾರಣ ಆ ಕಂಪನಿಯ ಬೈಕ್‌ನಲ್ಲಿರುವ ಸಾಮರ್ಥ್ಯ ಮತ್ತು ಜಪಾನ್‌ ದೇಶದ ಆಟೊ ತಂತ್ರಜ್ಞಾನ.

90ರ ದಶಕದಿಂದಲ್ಲೂ ‘ಚಿಗುರು ಮೀಸೆ ಚೆಲುವರ ಉತ್ಸಾಹಕ್ಕೆ ಯಮಹಾ ಸಾಥ್ ನೀಡುತ್ತಾ ಬಂದಿದೆ. ಬೈಕ್ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಅಭಿಮಾನಿಗಳಾಗಿ ಪರಿವರ್ತಿಸಿರುವ ಕಂಪನಿ ಎಂದರೆ ಯಮಹಾ. ಇದಕ್ಕೆ ಉತ್ತಮ ಉದಾಹರಣೆ ಯಮಹಾ ಆರ್‌ಎಕ್ಸ್‌ ಬೈಕ್‌ ಮತ್ತು ಯಮಹಾ ಆರ್‌15 ಬೈಕ್‌ಗಳು ಇಂದಿಗೂ ಕ್ರೇಜ್‌ ಹಾಗೇ ಉಳಿಸಿಕೊಂಡಿರುವುದು.

ಅಂತರರಾಷ್ಟ್ರೀಯ ಫಾರ್ಮುಲಾ ರೇಸ್‌ಗಳಲ್ಲಿ ವಿಜಯ ಪತಾಕೆ ಹಾರಿಸಿ ತನ್ನ ಬೈಕ್‌ಗಳ ಸಾಮರ್ಥ್ಯವನ್ನು ನಿರೂಪಿಸುವಲ್ಲಿ ಈ ಕಂಪನಿ ಯಶಸ್ವಿಯೂ ಆಗಿದೆ.

ವೃತ್ತಿಪರ ಬೈಕ್‌ ರೈಡರ್‌ಗಳು ರೇಸ್‌ ಟ್ರ್ಯಾಕ್‌ ಮೇಲೆ ಹೊಂದುವ ರೋಮಾಂಚಕ ರೇಸಿಂಗ್‌ ಅನುಭವವನ್ನು ‘ಆರ್‌’ ಸರಣಿಯ ಬೈಕ್‌ಗಳ ಮೂಲಕ ತನ್ನ ಗ್ರಾಹಕರಿಗೆ ಪರಿಚಯಿಸುವ ನಿಟ್ಟಿನಲ್ಲಿ ಹಲವಾರು ಸೂಪರ್‌ ಬೈಕ್‌ಗಳನ್ನು ಈಗಾಗಲೇ ರಸ್ತೆ ಮೇಲೆ ಇಳಿಸಿದೆ.

‘ಬಿಎಸ್ 4 ಅವತಾರದಲ್ಲಿ ಯಮಹಾ
ವೈಜೆಢ್‌ಎಫ್‌ – ಆರ್ 3’: ಒಂದು ದಶಕದಿಂದಲೂ ‘ಆರ್’ ಸರಣಿಯ ಸೂಪರ್‌ ಬೈಕ್‌ಗಳು ಆಟೊ ಕ್ಷೇತ್ರದಲ್ಲಿ ಛಾಪು ಮೂಡಿಸಿವೆ. ಮೊದಲ ಬಾರಿಗೆ ರೇಸ್‌ ಟ್ರ್ಯಾಕ್‌ ಪ್ರವೇಶಿಸುವ ರೈಡರ್‌ಗಳಿಗೆ ಉತ್ತಮ ಆಯ್ಕೆ ಎಂದೇ ವೃತ್ತಿಪರ ಬೈಕ್‌ ರೈಡರ್‌ರಿಂದ ಪ್ರಶಂಸೆಗೆ ಪಾತ್ರವಾಗಿರುವ ‘ಯಮಹಾ ವೈಝಡ್ಎಫ್‌ – ಆರ್‌ 3’ ಬಿಕರಿಯಾಗಲು ಸಿದ್ಧವಿದೆ.

2015ರಲ್ಲಿಯೇ ‘ಆರ್‌–3’ ಮಾದರಿಯ ಬೈಕ್‌ಗಳು ಮಾರುಕಟ್ಟೆ ಪ್ರವೇಶಿಸಿದ್ದರೂ, ರೋಡ್‌ ಗ್ರಿಪ್‌ ಮತ್ತು ಬೈಕ್‌ ನಿರ್ವಹಣೆಯಲ್ಲಿ ಗ್ರಾಹಕರಿಂದ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಹೊಸ ಆವೃತ್ತಿಯ ‘ಆರ್‌–3’ ಬೈಕ್‌ನಲ್ಲಿ ಇಂತಹ ಸಮಸ್ಯೆಗಳನ್ನು ಸರಿಪಡಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ವೇಗಕ್ಕೆ ಶಕ್ತಿ ತುಂಬುವ ಟ್ವಿನ್‌ ಸಿಲಿಂಡರ್‌ ಎಂಜಿನ್‌: ಆರ್‌ 3 ಬೈಕ್‌ನಲ್ಲಿರುವ 4 ಸ್ಟ್ರೋಕ್‌ 320.6 ಸಿ.ಸಿ ಎಂಜಿನ್‌ ನೂತನ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಲಾಗಿದೆ. ಒಳಭಾಗದಲ್ಲಿರುವ 2 ಸಿಲಿಂಡರ್‌ಗಳಲ್ಲಿ ತಲಾ 4 ಕವಾಟುಗಳಿದ್ದು ಇದರ ಮೂಲಕ ಸಲೀಸಾಗಿ ಇಂಧನ ನುಗ್ಗಿ ಗರಿಷ್ಠ ವೇಗ ಪಡೆಯಲು ನೆರವಾಗುತ್ತದೆ. ಇದರಲ್ಲಿ ‘ಏರ್‌–ಫ್ಯೂಯಲ್‌ ಮಿಕ್ಸ್‌ ಯೂನಿಟ್‌’ ಇದ್ದು, ಇಂಧನವನ್ನು ಬಹುಬೇಗ ದಹಿಸುವಂತೆ ಮಾಡಿ ಶರವೇಗದಲ್ಲಿ ಚಲನ ಶಕ್ತಿಯಾಗಿ ಮಾರ್ಪಡಿಸುತ್ತದೆ.

ಸ್ಥಿರತೆಗಾಗಿ ಉದ್ದದ ಸ್ವಿಂಗ್‌ಆರ್ಮ್: ಸೂಪರ್‌ ಬೈಕ್‌ ಕಡಿಮೆ ಸಮಯದಲ್ಲಿ ಗರಿಷ್ಠ ವೇಗ ತಲುಪುವುದರಿಂದ ಬೈಕ್‌ ಸವಾರರಿಗೆ ಅದನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಆದರೆ ಆರ್‌–3 ಯಲ್ಲಿರುವ 573 ಎಂ.ಎಂ ಉದ್ದದ ಸ್ವಿಂಗ್‌ ಆರ್ಮ್‌ ಇದ್ದು, ಬೈಕ್‌ ನಿಯಂತ್ರಣ ಕಾಯ್ದುಕೊಳ್ಳಲು ಸವಾರರಿಗೆ ಸಹಕಾರಿಯಾಗುತ್ತದೆ. ಮತ್ತಷ್ಟು ವೇಗ ಹೆಚ್ಚಿಸಿಕೊಳ್ಳಲು ಹಿಂಬದಿಯ ಚಕ್ರದ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ.

ಕ್ಷಣಮಾತ್ರದಲ್ಲೇ ವೇಗದೂತನಾಗಿ ಬದಲು: ಸೂಪರ್‌ ಬೈಕ್‌ಗಳೆಂದರೆ ವೇಗಕ್ಕೆ ಹೆಸರುವಾಸಿ. ಈ ಬೈಕ್‌ 5.5 ಸೆಕೆಂಡ್‌ಗೂ ಕಡಿಮೆ ಅವಧಿಯಲ್ಲಿ ‘ಆರ್‌–3’ ಬೈಕ್‌ 100 ಕಿ.ಮೀ/ಪ್ರತಿ ಗಂಟೆಯಷ್ಟು ವೇಗ ತಲುಪುವ ಸಾಮರ್ಥ್ಯ ಹೊಂದಿದೆ. 42 ಒಪಿಎಸ್‍ನಲ್ಲಿ 10.750 ಆರ್.ಪಿ.ಎಂ ಶಕ್ತಿಯನ್ನು ಹೊರಹಾಕಿ ಗರಿಷ್ಠ 180 ಕಿ.ಮೀ ಪ್ರತಿ ಗಂಟೆಯ ವೇಗದಲ್ಲಿ ಬೈಕ್ ಮುನ್ನುಗ್ಗಲು ಶಕ್ತವಾಗಿದ್ದು, 9,000 ಟಾರ್ಕ್‌ ಆರ್‌ಪಿಎಂ ಉತ್ಪತ್ತಿ ಮಾಡುವಷ್ಟು ಸಾಮರ್ಥ್ಯ ಹೊಂದಿದೆ.

ಎಂಜಿನ್ ಬಲಕ್ಕೆ ತಕ್ಕಂತೆ ಬ್ರೇಕಿಂಗ್ ಸಿಸ್ಟಮ್ ವಿನ್ಯಾಸ: ಬ್ರೇಕಿಂಗ್ ಸಿಸ್ಟಮ್‌ ಉತ್ಕೃಷ್ಟವಾಗಿದ್ದರೆ ಸವಾರರ ಆತ್ಮಸ್ಥೈರ್ಯವೂ ಹೆಚ್ಚುತ್ತದೆ. ಬೈಕ್‌ ನಿಯಂತ್ರಣಕ್ಕೆ ಬ್ರೇಕಿಂಗ್‌ ವಿನ್ಯಾಸ ಆಧಾರವಾಗಿರುತ್ತದೆ. ಇದರಲ್ಲಿರುವ ಎರಡು ಚಾನಲ್‌ನ ಎಬಿಎಸ್‌ (ಆ್ಯಂಟಿ ಬ್ರೇಕಿಂಕ್‌ ಸಿಸ್ಟಮ್‌) ವ್ಯವಸ್ಥೆ ಇದ್ದು, ಬ್ರೇಕ್‌ ಹಾಕಿದ ತಕ್ಷಣ ಚಕ್ರದ ತಿರುವನ್ನು ಸ್ಥಗಿತಗೊಳಿಸುತ್ತದೆ.‌‌

ಮೆಟ್‌ಜೀಲರ್‌ ಸ್ಪೋಟಿಕ್ ಎಂ 5 ರೇಡಿಯಲ್ ಟೈರ್: ಮೆಟ್ಜಲರ್‌ ಟೈರ್‌ಗಳು ರೇಸಿಂಗ್‌ ಟ್ರ್ಯಾಕ್‌ನಲ್ಲಿ ಓಡುವ ಬೈಕ್‌ಗಳಿಗೆ ಹೊಂದುವಂತಿವೆ. ಅದೇ ಟೈರ್‌ಗಳನ್ನು ಈ ಬೈಕ್‌ನಲ್ಲಿ ಅಳವಡಿಸಲಾಗಿದೆ. ಘಾಟ್‌ನಂತಹ ರಸ್ತೆಗಳಲ್ಲಿರುವ ತಿರುವಿನಲ್ಲೂ ಸಹ ವೇಗದಲ್ಲಿ ರಾಜಿಯಾಗದೆ ಮುನ್ನುಗ್ಗಲು ಈ ಟೈರ್‌ಗಳು ಗ್ರಿಪ್‌ ನೀಡಲಿದ್ದು, ತಿರುವಿನಲ್ಲಿ ಬಗ್ಗಿಸಿ ಚಲಿಸಿದರೂ ಸಮತೋಲನ ಕಾಪಾಡುತ್ತದೆ.

ಕಚ್ಚಾ ರಸ್ತೆಗೂ ಸೈ ಪಕ್ಕಾ ರಸ್ತೆಗೆ ಜೈ
ಈ ಬೈಕ್‌ನಲ್ಲಿರುವ ಹ್ಯಾಂಡಲ್‌ ಬಾರ್‌ ಹಾಗೂ 30.7 ಇಂಚಿನ ಎತ್ತರ ಸೀಟಿಂಗ್ ಪೊಸಿಷನ್‌ನಿಂದ ಬೈಕ್‌ ಸವಾರರಿಗೆ ಸುಲಭವಾಗಿ ನೆಲ ಎಟಕುತ್ತದೆ. 160 ಎಂ.ಎಂ. ಗ್ರೌಂಡ್ ಕ್ಲಿಯರೆನ್ಸ್‌ನಿಂದ ಟ್ರಾಫಿಕ್‌ ಭರಿತ ರಸ್ತೆಯಿಂದ ಹಿಡಿದು ಗುಡ್ಡಗಾಡು, ಕಚ್ಚಾ, ಪಕ್ಕಾ ರಸ್ತೆಗಳಲ್ಲೂ ಈ ಬೈಕ್‌ ಸರಾಗವಾಗಿ ಸಾಗುತ್ತದೆ.

ಸಂಪೂರ್ಣ ಮಾಹಿತಿ ನೀಡುವ ಇನ್‌ಸ್ಟ್ರುಮೆಂಟ್‌ ಪ್ಯಾನಲ್‌: ಅನಲಾಗ್‌ ಟಾಕೋಮೀಟರ್‌, ಡಿಜಿಟಲ್‌ ಸ್ಪೀಡೋಮೀಟರ್‌, ಟೈಂ ಇಂಡಿಕೇಟರ್, ಗೇರ್‌ನ ಸ್ಥಾನಸೂಚಿ, ಫ್ಯೂಲ್‌ ಗೇಜ್‌, ತಾಪಮಾನ ಮಾಪಕ, ಆಯಿಲ್‌ ಬದಲಾವಣೆಯ ಸೂಚಕ ಸೇರಿದಂತೆ ಇತರ ಬೈಕ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಒಂದೇ ಫಲಕದಲ್ಲಿ ಲಭ್ಯವಿವೆ. ಸವಾರರಿಗೆ ಒಂದೇ ಪ್ಯಾನಲ್‌ನಲ್ಲಿ ಎಲ್ಲ ಮಾಹಿತಿ ದೊರೆತು, ಬೈಕ್‌ನ ನಿರ್ವಹಣೆ ಸೇರಿದಂತೆ ರಸ್ತೆಯಲ್ಲಿ ಯಾವ ರೀತಿ ವಾಹನ ಚಲಾಯಿಸಿದರೆ ಉತ್ತಮ ಎಂಬ ಮಾಹಿತಿ ನೀಡುತ್ತದೆ.

ವಜ್ರಾಕೃತಿಯ ಅಚ್ಚುಕಟ್ಟು: ಆಧುನಿಕ ರಚನಾತ್ಮಕ ತಂತ್ರಜ್ಞಾನವನ್ನು ಬಳಸಿ, ವಜ್ರದ ಮಾದರಿಯ ಉಕ್ಕಿನ ಚೌಕಟ್ಟಿನ ಮೇಲೆ ಬೈಕ್‌ ವಿನ್ಯಾಸಗೊಂಡಿದೆ. ರಸ್ತೆಯಲ್ಲಿ ಬಿಗಿಯದ ಸಮತೋಲನ ಕಾಪಾಡಿಕೊಳ್ಳಲು ಹಗುರವಾಗಿ ಅಚ್ಚುಕಟ್ಟು ನಿರ್ಮಿಸಲಾಗಿದೆ. ಎಂಜಿನ್‌ ಇರುವ ಸ್ಥಳದಲ್ಲಿ ಮೂರು ಕಟ್ಟುನಿಟ್ಟಿನ ರಬ್ಬರ್‌ ಮೌಂಟ್‌ ಹೊಂದಿರುವ ಕೊಳವೆ ಇದೆ. ಬೈಕ್‌ ಸವಾರ ಕುಳಿತಿರುವ ಸ್ಥಳದಲ್ಲಿ ಅವರಿಗೆ ನೆಲ ಮುಟ್ಟಲು ಅನುಕೂಲವಾಗುವಂತೆ ತೆಳುವಿನ ರಚನೆ ಮಾಡಲಾಗಿದೆ.

ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಬೈಕ್‌ ಚಲಿಸುವಾಗ ರಕ್ಷಣೆಗಾಗಿ ವಿಂಡ್‌ ಶೀಲ್ಡ್‌ ಇದ್ದು, ಇಂಧನ ಟ್ಯಾಂಕ್‌ನಲ್ಲಿ ಗರಿಷ್ಠ 14 ಲೀ. ಪೆಟ್ರೋಲ್‌ ತುಂಬಬಹುದಾಗಿದೆ. ಒಂದು ಬಾರಿ ಟ್ಯಾಂಕ್‌ ಭರ್ತಿಯಾದರೆ 250 ಕಿ.ಮೀ ದೂರ ಕ್ರಮಿಸಬಹುದು ಎಂದು ಕಂಪನಿ ತಿಳಿಸಿದೆ.

ಕಡಿಮೆ ವೇಗದಿಂದ ಗರಿಷ್ಠ ವೇಗಕ್ಕೆ ತಕ್ಕಂತೆ 6 ಗೇರ್‌ ಹಂತಗಳು ಈ ಬೈಕ್‌ನಲ್ಲಿದ್ದು, ಗೇರ್‌ಗೆ ತಕ್ಕ ವೇಗವರ್ಧಕದ ರೋಮಾಂಚನದೊಂದಿಗೆ ಬೈಕ್‌ ರೈಡಿಂಗ್‌ ಆಹ್ಲಾದದ ಭಾವನೆ ಉಂಟಾಗುತ್ತದೆ.

ಎಕ್ಸ್ ಶೋರೂಂ ದರ: ₹ 3.48 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT