ಹೊಟ್ಟೆ ತುಂಬಿದವರು ಟ್ವಿಟ್‌ ಮಾಡ್ತಾರೆ

7
ಬಿಜೆಪಿ ನಾಯಕರಿಗೆ ರೇವಣ್ಣ ತಿರುಗೇಟು

ಹೊಟ್ಟೆ ತುಂಬಿದವರು ಟ್ವಿಟ್‌ ಮಾಡ್ತಾರೆ

Published:
Updated:
Deccan Herald

ಹಾಸನ: ‘ಹೊಟ್ಟೆ ತುಂಬಿದವರು ಟ್ವೀಟ್ ಮಾಡ್ತಾರೆ, ನಾವು ಹಸಿದವರು ಜನರ ಕೆಲಸ ಮಾಡುತ್ತೇವೆ’ ಎಂದು ಬಿಜೆಪಿ ನಾಯಕರಿಗೆ ಸಚಿವ ಎಚ್‌.ಡಿ.ರೇವಣ್ಣ ತಿರುಗೇಟು ನೀಡಿದರು.

‘ವರ್ಗಾವಣೆ ವಿಷಯದಲ್ಲಿ ಹಣಕಾಸು ವ್ಯವಹಾರ ನಡೆದಿಲ್ಲ. ದಾಖಲೆ ಇದ್ದರೆ ಹಾಜರು ಪಡಿಸಲಿ. ಹಿರಿಯರಾದ ಯಡಿಯೂರಪ್ಪ ಅವರು ವಿನಾಕಾರಣ ಟೀಕೆ ಮಾಡುವುದನ್ನು ಬಿಟ್ಟು ಮಾರ್ಗದರ್ಶನ ನೀಡಿದರೆ ಸರಿಪಡಿಸಿಕೊಳ್ಳುವೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡುವ ನಾಯಕರಿಗೆ ನಾಚಿಕೆಯಾಗಬೇಕು. ಅವರ ವ್ಯಕ್ತಿತ್ವ ತಿಳಿಯದೆ ಮತನಾಡಬಾರದು. ಕುಮಾರಸ್ವಾಮಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳದೆ ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಹನ್ನೇರಡು ವರ್ಷದಿಂದ ಹೊಟ್ಟೆ ಹಸಿದುಕೊಂಡಿದ್ದೇವೆ. ಹಾಗಾಗಿ ಅಭಿವೃದ್ಧಿ ಕಡೆ ಗಮನ ಹರಿಸಿದ್ದೇವೆ. ಬಿಜೆಪಿ ನಾಯಕರು ಟ್ವೀಟ್‌ ಮಾಡಿಕೊಂಡು ಇರಲಿ’ ಎಂದು ವ್ಯಂಗ್ಯವಾಡಿದರು.

‘ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಿದರೆ ಅದರ ಲಾಭ ತಮಗೆ ಬರುತ್ತದೆ ಎಂಬ ಕಾರಣಕ್ಕೆ ಕುಮಾರಸ್ವಾಮಿ ಸ್ವಲ್ಪ ಉಳಿಸಿದ್ದಾರೆ. ಬಾಕಿ ಸಾಲವನ್ನು ಯಡಿಯೂರಪ್ಪ ಕೇಂದ್ರದ ಮೇಲೆ ಒತ್ತಡ ಹೇರಿ ಮನ್ನಾ ಮಾಡಿಸಿ ಲಾಭ ಪಡೆದುಕೊಳ್ಳಲಿ’ ಎಂದು ಸಲಹೆ ನೀಡಿದರು.

‘ಶೃಂಗೇರಿ ಗುರುಗಳು ಮತ್ತು ದೇವರ ಅನುಗ್ರಹದಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಎರಡು ತಿಂಗಳಲ್ಲಿ ಕುಮಾರಸ್ವಾಮಿ ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲವನ್ನು ಏಕಕಾಲಕ್ಕೆ ಮಾಡಲು ಅವರು ಮಂತ್ರವಾದಿ ಆಗಬೇಕು ಅಷ್ಟೇ. ಯಡಿಯೂರಪ್ಪ ಬಳಿ ನೋಟ್ ಪ್ರಿಂಟ್ ಮಷಿನ್ ಇದೆ. ನಮ್ಮ ಬಳಿ ಇಲ್ಲ’ ಎಂದರು.

ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗದಂತೆ ಹಾಸನ ನಗರದ 35 ವಾರ್ಡ್‌ಗಳಲ್ಲೂ ಸ್ಪರ್ಧೆ ಮಾಡುವುದು ಖಚಿತ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೊಳೆನರಸೀಪುರ ಬಳಿ ಶ್ರೀ ರಾಮ ದೇವರ ಕಟ್ಟೆ ಬಳಿ ₹ 122 ಕೋಟಿ ವೆಚ್ಚದಲ್ಲಿ ಅಣೆಕಟ್ಟೆ ಸರ್ಕಾರದಿಂದ ಆಡಳಿತಾತ್ಮಕ ಅನುಮೊದನೆ ದೊರೆತಿದೆ. ಇದರಿಂದ ಹೊಳೆನರಸೀಪುರ, ಕೆ.ಆರ್.ಪೇಟೆ ತಾಲ್ಲೂಕಿನ ಹಳ್ಳಿಗಳಿಗೆ ಅನುಕೂಲವಾಗಲಿದೆ ಎಂದು ನುಡಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !