ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಸಾಗಣೆ ಮೇಲೆ ಹದ್ದಿನ ಕಣ್ಣು: ಜಾನುವಾರು ಸಂತೆಯ ಮೇಲೆ ನಿಗಾ

ಪರಿಶೀಲನೆಗೆ ತಂಡ ರಚನೆ
Last Updated 14 ಜುಲೈ 2022, 5:45 IST
ಅಕ್ಷರ ಗಾತ್ರ

ಹಾಸನ: ಜಾನುವಾರುಗಳ ಅಕ್ರಮ ಸಾಗಣೆ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೊಸ ಕಾರ್ಯತಂತ್ರ ರೂಪಿಸಿದ್ದಾರೆ. ಜಾನುವಾರುಗಳ ಮಾರಾಟ ನಡೆಯುವಂತೆ ಸಂತೆಯ ಮೇಲೆ ನಿಗಾ ಇರಿಸುವ ಮೂಲಕ ಜಾನುವಾರುಗಳು ರೈತರಿಗೆ ಮಾತ್ರ ಮಾರಾಟ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯ 8 ಕಡೆಗಳಲ್ಲಿ ಜಾನುವಾರು ಸಂತೆ ನಡೆಯುತ್ತವೆ. ಪ್ರತಿ ಸಂತೆಯಲ್ಲೂ ಮಾರಾಟದ ಮೇಲೆ ನಿಗಾ ಇರಿಸಲು ಎಪಿಎಂಸಿ, ಸಾರಿಗೆ ಇಲಾಖೆ, ಪಶುಸಂಗೋಪನೆ, ಕಂದಾಯ, ಪೊಲೀಸ್ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ಈ ತಂಡವು ಜಾನುವಾರ ಸಂತೆ ನಡೆಯುವ ಸ್ಥಳಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ತಪಾಸಣೆ ನಡೆಸುತ್ತಿದ್ದಾರೆ.

ಕೃಷಿಕರ ದಾಖಲೆಗಳನ್ನು ಪರಿಶೀಲಿಸುವ ತಂಡ, ಈ ಜಾನುವಾರುಗಳನ್ನು ಕೃಷಿ ಕಾರ್ಯಕ್ಕೆ ಖರೀದಿಸಲಾಗುತ್ತಿದೆ ಎಂಬುದನ್ನು ಖಾತರಿ ಮಾಡಿಕೊಂಡ ನಂತರವೇ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತದೆ. ನಂತರ ಅಂತಹ ಜಾನುವಾರುಗಳ ಕಿವಿಗೆ ಟ್ಯಾಗ್‌ ಅಳವಡಿಸಲಾಗುತ್ತಿದೆ. ಈ ಸಂತೆಗಳಲ್ಲಿ ಒಂದೇ ಗೇಟ್ ಅಳವಡಿಸಲಾಗಿದ್ದು, ಜಾನುವಾರುಗಳು ಅಕ್ರಮವಾಗಿ ಸಂತೆಯಿಂದ ಹೊರಹೋಗದಂತೆ ಎಚ್ಚರ ವಹಿಸಲಾಗುತ್ತಿದೆ.

‘ಕೃಷಿ ಕಾರ್ಯಕ್ಕೆ ಜಾನುವಾರು ಖರೀದಿಸುವವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ. ಒಂದೇ ಕಡೆ ಎಲ್ಲ ಇಲಾಖೆಗಳ ಅಧಿಕಾರಿಗಳು ಇರುವುದರಿಂದ, ಸಾಗಣೆ, ಪಶುಸಂಗೋಪನೆ ಇಲಾಖೆಯ ದೃಢೀಕರಣ ಸೇರಿದಂತೆ ಅಗತ್ಯ ದಾಖಲೆಗಳನ್ನು ಒಂದೇ ಸ್ಥಳದಲ್ಲಿ ವಿತರಿಸಲಾಗುತ್ತದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್‌ ತಿಳಿಸಿದ್ದಾರೆ.

‘ಜಾನುವಾರುಗಳ ಅಕ್ರಮ ಸಾಗಣೆ ತಡೆಯುವ ಉದ್ದೇಶದಿಂದ ಅನ್ಯ ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿರುವ ಸ್ಥಳಗಳಲ್ಲಿ 14 ಹಾಗೂ ಜಿಲ್ಲೆಯ ಒಳಗಡೆ 16 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಈ ಸ್ಥಳಗಳಲ್ಲಿ ಜಾನುವಾರು ಸಾಗಣೆಯ ಬಗ್ಗೆ ಕಟ್ಟುನಿಟ್ಟಿನ ತಪಾಸಣೆ ನಡೆಯಲಿದೆ’ಎಂದು ಹೇಳಿದ್ದಾರೆ.

ಕಸಾಯಿಖಾನೆಗೆ ಮಾರುವಂತಿಲ್ಲ

ಕೃಷಿ ಕಾರ್ಯಕ್ಕೆ ಖರೀದಿಸಿದ ಜಾನುವಾರುಗಳನ್ನು ಕೃಷಿ ಕಾರ್ಯಕ್ಕಲ್ಲದೇ ಬೇರೆ ಉದ್ದೇಶಕ್ಕೆ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಜಾನುವಾರು ಸಂತೆಯಲ್ಲಿ ಕೃಷಿ ಕಾರ್ಯಕ್ಕೆಂದು ಖರೀದಿಸಿದ ರೈತರು, ನಂತರ ಬೇರೆಯವರಿಗೆ ಮಾರಾಟ ಮಾಡಿದರೆ, ಕೃಷಿ ಕೆಲಸಕ್ಕೆ ಜಾನುವಾರ ಮಾರಾಟ ಮಾಡಲಾಗಿದೆ ಎಂಬುದಕ್ಕೆ ಅದಕ್ಕೆ ದಾಖಲೆಗಳನ್ನು ಇಟ್ಟುಕೊಳ್ಳಬೇಕು.

ಈ ಜಾನುವಾರುಗಳಿಗೆ ಟ್ಯಾಗ್ ಹಾಕಲಾಗಿದ್ದು, ಇವುಗಳನ್ನು ಕೃಷಿ ಕೆಲಸಕ್ಕೆ ಮಾತ್ರ ಮಾರಾಟ ಮಾಡಬೇಕು. ಟ್ಯಾಗ್‌ ಹಾಕಿದ ಜಾನುವಾರುಗಳು ಕಸಾಯಿಖಾನೆಗೆ ಸಾಗಿಸುತ್ತಿರುವುದು ಪತ್ತೆಯಾದಲ್ಲಿ, ಅನಧಿಕೃತ ಮಾರಾಟ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹರಿರಾಂ ಶಂಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT