ಬೀದಿನಾಟಕ ಕಲಾವಿದರ ಧರಣಿ

7
ಜಾರ್ಖಂಡ್‌ನಲ್ಲಿ ಕಲಾ ತಂಡದ ಮೇಲೆ ಹಲ್ಲೆಗೆ ಖಂಡನೆ

ಬೀದಿನಾಟಕ ಕಲಾವಿದರ ಧರಣಿ

Published:
Updated:
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.

ಹಾಸನ: ಜಾರ್ಖಂಡ್‌ನ ಚೋಚಾಂಗ್ ಜಿಲ್ಲೆಯಲ್ಲಿ ಮಾನವ ಕಳ್ಳಸಾಗಣೆ ವಿರುದ್ಧ ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸುತ್ತಿದ್ದ ಕಲಾ ತಂಡದ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ನಗರದ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆಯಲ್ಲಿ ಬಂದ ಕಲಾವಿದರು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಿದರು.

‘ದುಷ್ಕರ್ಮಿಗಳು ಆರು ಪುರುಷ ಕಲಾವಿದರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಐದು ಮಹಿಳಾ ಕಲಾವಿದರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ನೀಡಬೇಕು ಹಾಗೂ ಅನ್ಯಾಯಕ್ಕೆ ಒಳಗಾದವರಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರಚಾರ ಮಾಧ್ಯಮಗಳಲ್ಲಿ ಬೀದಿ ನಾಟಕ ಪ್ರಮುಖವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಪ್ರತಿಭಟನಾ ರಂಗಭೂಮಿಯಾಗಿ ಬೆಳೆದು ಬಂದ ಇತಿಹಾಸವಿದೆ. ಜನವಿರೋಧಿ ನೀತಿ ಹಾಗೂ ಸಾಮಾಜಿಕ ಸಮಸ್ಯೆಗಳ ವಿರುದ್ಧ ಬೀದಿ ನಾಟಕ ಜನಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ. ಆದರೆ ಇಂತಹ ಕಲಾವಿದರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎಂದರು.

ದೇಶದ ಮೂಲೆ ಮೂಲೆಗಳಲ್ಲಿ ಬೀದಿ ನಾಟಕ ಕಲಾವಿದರು ಕಳೆದ 35 ವರ್ಷಗಳಿಂದ ಜನಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಕೆಲವು ಸಲ ಕನಿಷ್ಠ ಗೌರವಧನ ಇಲ್ಲದೆ ಕೆಲಸ ಮಾಡುತ್ತಾರೆ. ಸರ್ಕಾರದ ವಿವಿಧ ಯೋಜನೆಗಳು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಲು ಬೀದಿ ನಾಟಕ ನೆರವಾಗಿದೆ. ಆದರೆ, ಕಲಾವಿದರ ರಕ್ಷಣೆಗೆ ಯಾವ ಸರ್ಕಾರಗಳು ಅಗತ್ಯ ಕ್ರಮ ಕೈಗೊಂಡಿಲ್ಲ. ಜಾರ್ಖಂಡ್ ನ ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಒಕ್ಕೂಟದ ರಾಜ್ಯಾಧ್ಯಕ್ಷ ಗ್ಯಾರಂಟಿ ರಾಮಣ್ಣ, ಪದಾಧಿಕಾರಿಗಳಾದ ಲೋಕೇಶ್, ಬಿ.ಟಿ.ಮಾನವ, ಪಿ. ಚಿನ್ನರಾಯಿ, ರಾಜಣ್ಣ, ಕಲಾವಿದರಾದ ಅರಣಿ, ಸೇವಂತಿ, ಬಿಂಧು, ರುಕ್ಮಿಣಿ, ರೈತ ಮುಖಂಡರಾದ ಬಾಬು, ಎಚ್.ಆರ್. ನವೀನ್ ಕುಮಾರ್, ಎಂ.ಜಿ. ಪಥ್ವಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !