ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ: ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ

Last Updated 10 ಮಾರ್ಚ್ 2021, 12:35 IST
ಅಕ್ಷರ ಗಾತ್ರ

ಹಾಸನ: ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇರುತ್ತವೆ. ಹಾಗಾಗಿ ಯಾರೂ ಆತ್ಮಹತ್ಯೆ ಕಡೆಗೆ ಮುಖ ಮಾಡಬಾರದು ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌.ನಂದಿನಿ ಹೇಳಿದರು.

ನಗರದ ಎವಿಕೆ ಕಾಲೇಜಿನಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಪೂರ್ತಿ ರೇಂಜರ್‌ ಘಟಕ, ಭಾರತ ಸೇವಾದಳ ಜಿಲ್ಲಾ ಸಮಿತಿ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಶಿಬಿರದಲ್ಲಿ ಮಹಿಳೆ ಮತ್ತುಕಾನೂನಿನ ರಕ್ಷಣೆ ಎಂಬ ವಿಷಯ ಕುರಿತು ಮಾತನಾಡಿದರು.

ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ತಾತ್ಸಾರ, ಗಂಡು ಮಗು ಜನಿಸಿದರೆ ಸಿಹಿ ಹಂಚಿ ಸಂಭ್ರಮಿಸುವ ಮನಸ್ಥಿತಿಯಜನ ಇಂದಿಗೂ ಸಮಾಜದಲ್ಲಿ ಇದ್ದಾರೆ. ನಿತ್ಯ ಪೊಲೀಸ್‌ ಠಾಣೆಗೆ ಕೌಟುಂಬಿಕ ಸಮಸ್ಯೆ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಬರುತ್ತವೆ. ಇತ್ತೀಚೆಗೆ ಸೈಬರ್‌ ಅಪರಾಧಗಳ ಸಂಖ್ಯೆಯೇ ಹೆಚ್ಚುತ್ತಿದೆ. ಮಹಿಳೆಯರಿಗೆ
ಸಾಕಷ್ಟು ಜಾಗೃತಿ ಮೂಡಿಸಿದರೂ ಅಪರಾಧಗಳ ಸಂಖ್ಯೆ ತಗ್ಗಿಲ್ಲ. ಶೇಕಡಾ 60 ರಷ್ಟು ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು, ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣಗಳಾದ ಫೇಸ್‌ ಬುಕ್‌, ಇನ್‌ಸ್ಟಾಗ್ರಾಮ್‌, ವಾಟ್ಸ್‌ ಆಪ್‌ ಬಳಸುವಾಗ ಎಚ್ಚರಿಕೆ ವಹಿಸಬೇಕು. ಶೈಕ್ಷಣಿಕ ದೃಷ್ಠಿಯಿಂದ ಮಾತ್ರವೇ ಮೊಬೈಲ್‌ ಬಳಸಿ ಎಂದು ಸಲಹೆನೀಡಿದರು.

ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚುತ್ತಿದೆ. ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ಈ ಪ್ರಮಾಣ ಮತ್ತಷ್ಟು ಏರಿಕೆಯಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 80 ರಿಂದ 90 ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ವರ್ಷ ಮೂರು ತಿಂಗಳಲ್ಲಿ ಅಂದಾಜು 20 ಪ್ರಕರಣಗಳು ದಾಖಲಾಗಿವೆ. ಮಕ್ಕಳ ಮೇಲೆ ಅತ್ಯಾಚಾರಗಳುನಡೆಯುತ್ತಿದೆ. ಇದನ್ನೆಲ್ಲ ಗಮನಿಸಿದರೆ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದುಆತಂಕ ಉಂಟಾಗುತ್ತಿದೆ ಎಂದರು.

ಶಿಕ್ಷಣ ಪಡೆದ ಹೆಣ್ಣುಮಕ್ಕಳು ತಮ್ಮ ಸುತ್ತ ನಡೆಯುವ ಬಾಲ್ಯ ವಿವಾಹಗಳನ್ನು ತಡೆಯಬೇಕು. ರಾಜ್ಯ ಸರ್ಕಾರ ಹೊಸದಾಗಿ 112 ಸಹಾಯವಾಣಿ ತೆರೆದಿದ್ದು, ಕರೆ ಮಾಡಿದರೆ ಅಗ್ನಿಶಾಮಕ, ಆರೋಗ್ಯ ಹಾಗೂ ಪೊಲೀಸ್‌ ಸೇವೆ ಸಿಗಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತೀಯ ಸೇವಾದಳ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್‌.ಎಸ್‌. ಪೂರ್ಣಿಮಾ, ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಸೇನೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಮಹಿಳೆ ಇಂದು ತನ್ನನ್ನು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ವಿವಿಧ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಜ್ಯೋತಿ ಆನಂದ್‌, ಎಸ್‌.ಎಲ್‌. ಚಂದನಾ, ಕೆ.ಬಿ. ಸಹನಾ, ಎಲ್‌.ಎಸ್‌. ಶಿಲ್ಪಾ, ಯಶ್ವಿನಿ ಅವರನ್ನು ಸನ್ಮಾನಿಸಲಾಯಿತು.

ಸ್ತ್ರೀ ರೋಗ ತಜ್ಞೆ ಡಾ.ಎ. ಸಾವಿತ್ರಿ, ಹಾಸನ ಲೇಡಿಸ್‌ ಕ್ಲಬ್‌ ಸಂಸ್ಥಾಪಕ ಅಧ್ಯಕ್ಷೆ ಎಂ. ಸುಮ, ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಕಮಲ್‌ ಕುಮಾರ್‌, ಮಲೆನಾಡುತಾಂತ್ರಿಕ ಶಿಕ್ಷಣ ಸಮಿತಿ ಕೋಶಾಧ್ಯಕ್ಷ ಜಿ.ಆರ್‌. ಶ್ರೀನಿವಾಸ್‌, ಎವಿಕೆ ಕಾಲೇಜಿನಪ್ರಾಂಶುಪಾಲ ಕೆ.ಜಿ. ಸುರೇಶ್‌ ಕುಮಾರ್‌, ಭಾರತ ಸೇವಾದಳ ವಲಯ ಸಂಘಟಕಿವಿ.ಎಸ್‌. ರಾಣಿ, ಕನ್ನಡ ಪ್ರಾಧ್ಯಾಪಕ ಸಿ.ಚ. ಯತೀಶ್ವರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT