ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಥಮ ಪ್ರಾಶಸ್ತ್ಯದಲ್ಲೇ ಸೂರಜ್ ರೇವಣ್ಣ ಪರಿಷತ್‌ಗೆ: ಕಾಂಗ್ರೆಸ್‌ಗೆ ಹೀನಾಯ ಸೋಲು

ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ಗೆ ಹೀನಾಯ ಸೋಲು
Last Updated 14 ಡಿಸೆಂಬರ್ 2021, 15:43 IST
ಅಕ್ಷರ ಗಾತ್ರ

ಹಾಸನ: ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆರ್.ಸೂರಜ್‌ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ವಿಧಾನಸೌಧ ಪ್ರವೇಶಿಸಿದೆ.

ಡಿ. 10ರಂದು ನಡೆದ ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬುಧವಾರ ನಡೆಯಿತು. 257 ಮತಗಟ್ಟೆಗಳ ಮತಗಳನ್ನು ಮಿಶ್ರಣ ಮಾಡಿದ ನಂತರ ಬೆಳಿಗ್ಗೆ 10 ಗಂಟೆಗೆ ಎಣಿಕೆ ಕಾರ್ಯ ಆರಂಭವಾಯಿತು. ಆರಂಭದಿಂದಲೂ ಕೊನೆವರೆಗೂ ಎಲ್ಲ ಟೇಬಲ್‌ಗಳಲ್ಲೂ ಸೂರಜ್ ಮುನ್ನಡೆ ಕಾಯ್ದುಕೊಂಡು ಬಂದು, ಅಂತಿಮವಾಗಿ 1,533 ಮತಗಳ ಅಂತರದಿಂದ ಸೂರಜ್‌ ಗೆಲುವಿನ ನಗೆ ಬೀರಿದರು.

ಸೂರಜ್‌ 2,281 ಮತ ಪಡೆಯುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ಎಂ.ಶಂಕರ್ (746) ಅವರನ್ನು ಸೋಲಿಸಿದ್ದಾರೆ. ಬಿಜೆಪಿಯ ಎಚ್.ಎಂ. ವಿಶ್ವನಾಥ್ 421 ಪಡೆದು ಸೋಲು ಕಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಎಚ್.ಡಿ. ರೇವಣ್ಣ 18 ಮತ ಗಳಿಸಲಷ್ಟೇ ಶಕ್ತರಾದರು. ಚಲಾವಣೆಯದ 3,571 ಮತಗಳ ಪೈಕಿ 103 ತಿರಸ್ಕೃತಗೊಂಡಿದ್ದು, 3,468 ಮತಗಳು ಕ್ರಮ ಬದ್ಧವಾಗಿವೆ.

ಬೆಳಿಗ್ಗೆ ಮತ ಎಣಿಕೆ ಕೇಂದ್ರಕ್ಕೆ ಖುಷಿಯಿಂದಲೇ ಬಂದಿದ್ದ ಬಿಜೆಪಿ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್‌ ಸೋಲಿನ ಸುಳಿವು ಸಿಗುತ್ತಿದ್ದಂತೆಯೇ ಅಲ್ಲಿಂದ ಹೊರ ನಡೆದರು. ಸೂರಜ್ ಗೆಲುವು ಖಚಿತವಾಗುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಸಹ ತಮ್ಮ ಬೆಂಬಲಿಗರ ಜತೆ ಫಲಿತಾಂಶ ಘೋಷಣೆ ಆಗುವವರೆಗೂ ಕಾಯದೆ ಹೊರಟು ಹೋದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜಿಲ್ಲಾ ಕೇಂದ್ರದಲ್ಲೇ ಸೋಲುವ ಮೂಲಕ ಕೊಂಚ ಹಿನ್ನಡೆ ಅನುಭವಿಸಿತ್ತು. ಆದರೆ, ಪರಿಷತ್ ಚುನಾವಣೆಯಲ್ಲಿ ಸೂರಜ್‌ ಗೆಲುವಿನೊಂದಿಗೆ ಜಿಲ್ಲೆಯಲ್ಲಿ ಮತ್ತೆ ಜೆಡಿಎಸ್‌ ತನ್ನ ಪ್ರಾಬಲ್ಯಹೆಚ್ಚಿಸಿಕೊಂಡಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್‌ ಅಭ್ಯರ್ಥಿ ಆರ್.ಸೂರಜ್ ಅವರಿಗೆ ಜಿಲ್ಲಾ ಚುನಾವಣಾಧಿಕಾರಿ ಆರ್.ಗಿರೀಶ್‌ ಪ್ರಮಾಣ ಪತ್ರ ವಿತರಿಸಿದರು. ಈ ವೇಳೆ ಶಾಸಕರಾದ ಎಚ್.ಡಿ.ರೇವಣ್ಣ, ಸಿ.ಎನ್.ಬಾಲಕೃಷ್ಣ, ಸಂಸದ ಪ್ರಜ್ವಲ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭವಾನಿ ರೇವಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT