ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಜುವಳ್ಳಿ ಹಿರೇಮಠದ ಸ್ವಾಮೀಜಿ ಅಂತ್ಯಕ್ರಿಯೆ

Last Updated 27 ನವೆಂಬರ್ 2020, 4:16 IST
ಅಕ್ಷರ ಗಾತ್ರ

ಆಲೂರು: ಕಾರ್ಜುವಳ್ಳಿ ಹಿರೇಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಅಂತ್ಯಕ್ರಿಯೆ ಮಠದ ಆವರಣದಲ್ಲಿ ವೀರಶೈವ- ಲಿಂಗಾಯತ ಧರ್ಮದ ವಿಧಿ ವಿಧಾನಗಳ ಪ್ರಕಾರ ಹಲವು ಮಠಾಧೀಶರು, ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ನಡೆಯಿತು.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಶಾಖಾ ಮಠವಾದ ಕಾರ್ಜುವಳ್ಳಿ ಹಿರೇಮಠದಲ್ಲಿ ಶ್ರೀಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಶ್ರೀಗಳ ಪಾರ್ಥಿವ ಶರೀರವನ್ನು ಬುಧವಾರ ಬೆಳಿಗ್ಗೆಯಿಂದ ಗುರುವಾರ ಬೆಳಿಗ್ಗೆವರೆಗೂ ಮಠದ ಆವರಣದಲ್ಲಿ ಭಕ್ತರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಜಿಲ್ಲೆ ಹಾಗೂ ರಾಜ್ಯದ ನಾನಾ ಭಾಗಗಳಿಂದ ಹಲವು ಮಠಗಳ ಸ್ವಾಮೀಜಿ, ಭಕ್ತರು ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದರು.

ಗುರುವಾರ ಮಧ್ಯಾಹ್ನ 11.30ಕ್ಕೆ ಶ್ರೀಗಳ ಪಾರ್ಥಿವ ಶರೀರವನ್ನು ಪಲ್ಲಕ್ಕಿಯಲ್ಲಿಟ್ಟು ಮಠದ ಆವರಣದಲ್ಲಿ ಒಂದು ಸುತ್ತು ಮೆರವಣಿಗೆ ನಡೆಸಲಾಯಿತು. ಬಳಿಕ ಮಠದ ಪಕ್ಕದಲ್ಲಿ ನಿರ್ಮಿಸಿದ್ದ ಸಮಾಧಿಯಲ್ಲಿ ಕೂರಿಸಿ ವಿಭೂತಿ, ಬಿಲ್ವಪತ್ರೆಯಲ್ಲಿ ಮುಚ್ಚಲಾಯಿತು. ಮಧ್ಯಾಹ್ನ 1.20ರವರೆಗೆ ಭಕ್ತರು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಹಲವು ಮಠಾಧೀಶರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಂತ್ಯಕ್ರಿಯೆಗೆ ಆಗಮಿಸುವ ಭಕ್ತರು, ಸಾರ್ವಜನಿಕರನ್ನು ನಿಯಂತ್ರಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಊಟ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್. ಗುರುದೇವ್ ಮಾತನಾಡಿ, ‘ಮಠದ ಮುಂದಿನ ಉಸ್ತುವಾರಿಯನ್ನು ಯಾರಿಗೆ ವಹಿಸುವುದು ಎನ್ನುವ ಬಗ್ಗೆ ಶ್ರೀಗಳ 11ನೇ ದಿನ ಪೂಜಾ ಕಾರ‍್ಯಕ್ರಮಗಳನ್ನು ಮುಗಿಸಿ ಸಮುದಾಯದ ಹಿರಿಯ ಮುಖಂಡರುಗಳನ್ನೊಳಗೊಂಡು ರಂಭಾಪುರಿ ಸ್ವಾಮೀಜಿ ಭೇಟಿ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

ತೆಂಡೆಕೆರೆ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುತ್ತಿನಕಟ್ಟೆ ಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಯಸಳೂರು ತೆಂಕಲಗೂಡು ಮಠದ ಪೂರ್ಣಚಂದ್ರ ದೇವರು, ಕೊಡ್ಲಿಪೇಟೆಯ ಕಿರೆಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅವರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT