ಸೆ.5 ಶಿಕ್ಷಕರ ದಿನಾಚರಣೆ. ಹಾಸನ ಜಿಲ್ಲೆಯ ಅದೆಷ್ಟೋ ಶಿಕ್ಷಕರು, ತೆರೆಮರೆಯಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅಂತಹ ಕೆಲವು ಶಿಕ್ಷಕರನ್ನು ಪರಿಚಯಿಸುವ ಮೂಲಕ ಶಿಕ್ಷಕರಿಗೆ ಗೌರವ ಸಲ್ಲಿಸುವ ಪ್ರಯತ್ನ ಇಲ್ಲಿದೆ.
ಮಕ್ಕಳಿಗಾಗಿ ಜೀವನ ಮುಡಿಪಿಟ್ಟ ತಮ್ಮಣ್ಣಗೌಡ
ಚಿದಂಬರಪ್ರಸಾದ
ಹಾಸನ: ವೈವಾಹಿಕ ಜೀವನವನ್ನೇ ತ್ಯಜಿಸಿ, ಶಾಲಾ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಶಿಕ್ಷಣಾಧಿಕಾರಿ ಜೆ.ಬಿ.ತಮ್ಮಣ್ಣಗೌಡರು, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಆಗಸ್ಟ್ 31ರಂದು ನಿವೃತ್ತರಾಗಿದ್ದಾರೆ.
ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ತಮ್ಮಣ್ಣಗೌಡರು, ನಂತರ ಕೆಇಎಸ್ ತೇರ್ಗಡೆಯಾಗಿ ಪ್ರೌಢಶಾಲಾ ಮುಖ್ಯಶಿಕ್ಷಕರಾದರು. ಕಂದಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾಗಿ 2000ನೇ ಇಸ್ವಿಯ ಜುಲೈ 8ರಿಂದ 2020ರ ನವೆಂಬರ್ 30ರವರೆಗೆ ಕಾರ್ಯನಿರ್ವಹಿಸಿದ್ದಾರೆ. 20 ವರ್ಷಗಳಲ್ಲಿ ಶಾಲೆಯ ಆವರಣದಲ್ಲಿ 1,200 ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಅವುಗಳಲ್ಲಿ ಶೇ 40ರಷ್ಟು ಹಣ್ಣಿನ ಗಿಡಗಳು.
ಗುಣಮಟ್ಟದ ಶಿಕ್ಷಣ ಮತ್ತು ಫಲಿತಾಂಶಕ್ಕಾಗಿ ತಮ್ಮ ವೇತನದ ಹಣದಿಂದ ಸಾವಿರಾರು ರೂಪಾಯಿಗಳನ್ನು ವಿದ್ಯಾರ್ಥಿಗಳಿಗೆ ನಗದು ಬಹುಮಾನವಾಗಿ ಕೊಡುತ್ತ ಬಂದಿದ್ದಾರೆ.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ₹3 ಸಾವಿರ, ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳೆಲ್ಲರಿಗೂ ತಲಾ ₹ 2 ಸಾವಿರ, ಶೇ 85ರಿಂದ ಶೇ 90 ಅಂಕ ಪಡೆದವರಿಗೆ ₹1 ಸಾವಿರ, ಶೇ 80ರಿಂದ 85 ಅಂಕ ಪಡೆದವರಿಗೆ ₹ 800 ನಗದು ಬಹುಮಾನ ನೀಡಿದ್ದು, 2022-23 ಮತ್ತು 2023-24ನೇ ಸಾಲಿನ ಬಹುಮಾನವಾಗಿ ₹1,29,400 ಅನ್ನು ವಿತರಿಸಿದ್ದಾರೆ.
ಕಂದಲಿ ಶಾಲೆಯಷ್ಟೇ ಅಲ್ಲ, ಚನ್ನರಾಯಪಟ್ಟಣ ತಾಲ್ಲೂಕು ಜಿನ್ನೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೂ ಇದೇ ರೀತಿ ನಗದು ಬಹುಮಾನ ನೀಡುತ್ತಿದ್ದಾರೆ.
ವೇತನದ ಜೊತೆಗೆ ಜಿಲ್ಲಾಡಳಿತವು 2004ರಲ್ಲಿ ನೀಡಿದ ಅತ್ಯುತ್ತಮ ನಾಗರಿಕ ಸೇವಾ ಪ್ರಶಸ್ತಿಯ ನಗದು ಮೊತ್ತ ₹10 ಸಾವಿರ, 2019ರಲ್ಲಿ ಮಂಡ್ಯದ ಕರ್ನಾಟಕ ಸಂಘ ನೀಡಿದ ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿಯ ನಗದು ₹10 ಸಾವಿರ, ಕರ್ನಾಟಕ ವಸತಿ ಶಿಕ್ಷಣ ಸಂಘ ನೀಡಿದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿಯ ನಗದು ₹10 ಸಾವಿರವನ್ನು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಬಳಸಿದ್ದಾರೆ ತಮ್ಮಣ್ಣಗೌಡರು.
ಮಕ್ಕಳನ್ನು ಆಕರ್ಷಿಸುತ್ತಿರುವ ಶಿಕ್ಷಕ ದಂಪತಿ
ಎ.ಎಸ್. ರಮೇಶ್
ಅರಸೀಕೆರೆ: ಮಕ್ಕಳ ಕೊರತೆಯಿಂದಾಗಿ ತಾಲೂಕಿನಲ್ಲಿ ಅನೇಕ ಸರ್ಕಾರಿ ಶಾಲೆಗಳು ಮುಚ್ಚಿವೆ. ಈ ಕಟ್ಟಡಗಳು ಪಾಳು ಬಿದ್ದಿವೆ. ಗ್ರಾಮೀಣ ಪ್ರದೇಶಕ್ಕೆ ನಗರದ ಖಾಸಗಿ ಶಾಲೆಗಳ ವಾಹನಗಳು ಲಗ್ಗೆ ಇಟ್ಟಿವೆ. ಇಂಗ್ಲೀಷ್ ವ್ಯಾಮೋಹದಿಂದಾಗಿ ಹಣ ಇಲ್ಲದಿದ್ದರೂ, ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಕನಕಟ್ಟೆ ಹೋಬಳಿಯ ಜನ್ನಾವರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಗ್ರಾಮೀಣ ಜನರಿಗೆ ಆಶಾಕಿರಣವಾಗಿದೆ. ಈ ಶಾಲೆಯಲ್ಲಿ ಎರಡು ವರ್ಷಗಳ ಹಿಂದೆ 18 ವಿದ್ಯಾರ್ಥಿಗಳಿದ್ದರು. ಈಗ 38 ಮಕ್ಕಳಿದ್ದಾರೆ. ತಲುಪಿದೆ. ಶಿಕ್ಷಕ ದಂಪತಿ ಕುಸುಮಾ ಮತ್ತು ನಟರಾಜ್ ಈ ಶಾಲೆಗೆ ಬಂದಾಗಿನಿಂದ ಮಕ್ಕಳ ಸಂಖ್ಯೆ ಹೆಚ್ಚಿದೆ. ಅದಕ್ಕೆ ಇಂಗ್ಲಿಷ್‌ಗೆ ಕಲಿಕೆಯೇ ಪ್ರಮುಖ ಆಕರ್ಷಣೆಯಾಗಿದೆ.
ಶಿಕ್ಷಕ ದಂಪತಿಯ ಪ್ರಯತ್ನದಿಂದ ಎಲ್ಲ ಮಕ್ಕಳು ಇಂಗ್ಲಿಷ್‌ನಲ್ಲೇ ಮಾತನಾಡುತ್ತಾರೆ. ಶಾಲೆಗೆ ಯಾವ ಅಧಿಕಾರಿ ಬಂದರೂ ಅವರನ್ನು ಇಂಗ್ಲಿಷ್‌ನಲ್ಲೇ ರಾಷ್ಟ್ರೀಯ ಹಬ್ಬಗಳು, ಸಾಂಸ್ಕೃತಿಕ ಕಾರ್ಯಕ್ರಮ ಮೊದಲಾದ ಸಂದರ್ಭಗಳಲ್ಲಿ ಮಕ್ಕಳು ಇಂಗ್ಲಿಷ್‌ನಲ್ಲಿಯೇ ಭಾಷಣ ಮಾಡುತ್ತಾರೆ.
ತಮ್ಮ ಗ್ರಾಮದ ಶಾಲೆಯ ಇಂಗ್ಲಿಷ್ ಗುಣಮಟ್ಟ ಅರಿತ ಈ ಗ್ರಾಮದ ಹೆಣ್ಣು ಮಕ್ಕಳು, ತಮ್ಮೂರಿನ ಕಾನ್ವೆಂಟ್ ಬಿಡಿಸಿ, ತವರೂರಿನ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಹೀಗಾಗಿ ದೂರದ ಊರಗಳ ಕಾನ್ವೆಂಟ್ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಧ್ಯೇಯ ವಾಕ್ಯದ ಶಿಕ್ಷಕಿಯರು
ಹಿ.ಕೃ. ಚಂದ್ರು
ಹಿರೀಸಾವೆ: 2024–25ನೇ ಸಾಲಿನಲ್ಲಿ ‘ಮಗುವಿನ ನೈತಿಕ ಮತ್ತು ಶೈಕ್ಷಣಿಕ ಸಮಗ್ರ ಗುಣಮಟ್ಟದ ಕಲಿಕೆ ನಮ್ಮಿಂದ ಸಾಧ್ಯ’ ಎಂಬ ಶಾಲಾ ಧ್ಯೇಯ ವಾಕ್ಯದೊಂದಿಗೆ ಹೋಬಳಿಯ ಕೊತ್ತನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿಯರಾದ ಶೋಭಾ ಮತ್ತು ನಾಗಲಕ್ಷ್ಮಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಒಂದರಿಂದ ಐದನೇ ತರಗತಿವರೆಗೆ 20 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ನಿತ್ಯ ಪ್ರಾರ್ಥನೆಯ ನಂತರ ಡಾ.ಅಂಬೇಡ್ಕರ್ ರವರ ಸಂವಿಧಾನದ ಪೂರ್ವ ಪೀಠಿಕೆಯನ್ನು ಮಕ್ಕಳು ಓದಬೇಕು. ಒಳ್ಳೆಯ ವಿಷಯದ ಬಗ್ಗೆ ಪ್ರತಿಜ್ಞೆ ತೆಗೆದುಕೊಳ್ಳಬೇಕು. ದಿನಪ್ರತ್ರಿಕೆಯಲ್ಲಿ ಬರುವ ಒಂದು ವಿಷಯದ ಬಗ್ಗೆ ವಿಶ್ಲೇಷಣೆ ಮಾಡುವ ಮೂಲಕ ಶಾಲೆಯ ತರಗತಿ ಪ್ರಾರಂಭ ಮಾಡುತ್ತಾರೆ.
ಪ್ರತಿ ತರಗತಿಯಲ್ಲಿ ಕನ್ನಡ ಮಾಧ್ಯಮದ ಜೊತೆಯಲ್ಲಿ ಆಂಗ್ಲ ಭಾಷೆಯಲ್ಲಿ ಬೋಧನೆ ಮಾಡುವುದು ಮತ್ತು ಕಲಿಸುವುದನ್ನು ಇಬ್ಬರೂ ಶಿಕ್ಷಕಿಯರು ತಮ್ಮ ರೂಢಿಸಿಕೊಂಡಿದ್ದಾರೆ.
ಶೈಕ್ಷಣಿಕ ಪ್ರಗತಿಗೆ ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ದಾನಿಗಳಿಂದ ಇಂಗ್ಲಿಷ್ ಮಾಧ್ಯಮ ಪುಸ್ತಕಗಳು, ಟ್ರ್ಯಾಕ್ ಸೂಟ್, ಗ್ರೀನ್ ಬೋರ್ಡ್ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.
ಶಾಲಾ ಆವರಣದಲ್ಲಿ ಉತ್ತಮ ಕೈ ತೋಟ, ಗೋಡೆ ಬರಹಗಳು, ತಡೆಗೋಡೆಯ ಮೇಲೆ ಉತ್ತಮ ಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳಲ್ಲಿ ಓದಿನ ಆಸಕ್ತಿ ಹೆಚ್ಚಿಸಿದ್ದಾರೆ. ಪಠ್ಯದ ಹೊರತಾಗಿ ಸಾಮಾನ್ಯ ಜ್ಞಾನ ಹೆಚ್ಚಿಸಲು ಪ್ರತಿ ಶುಕ್ರವಾರ ರಸಪ್ರಶ್ನೆ ಕಾರ್ಯಕ್ರಮ ನಡೆಸುತ್ತಾರೆ. ದೇಶ ಭಕ್ತರು ಸೇರಿದಂತೆ ವಿವಿಧ ಜಯಂತಿಗಳನ್ನು ಗ್ರಾಮೀಣ ಸೊಗಡಿನೊಂದಿಗೆ ಆಚರಿಸುತ್ತಾರೆ. ಈ ಶಾಲೆಯ ಶೈಕ್ಷಣಿಕ ಪ್ರಗತಿ ಬಗ್ಗೆ ಹಾಸನ ಆಕಾಶವಾಣಿಯಲ್ಲಿ ‘ಸೊಬಗಿನ ಶಾಲೆ’ ಎಂಬ ಕಾರ್ಯಕ್ರಮವೂ ಬಿತ್ತರವಾಗಿದೆ.
‘ಶಾಲೆಯಲ್ಲಿ ಕಲಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಸ್ಮಾರ್ಟ್ ತರಗತಿಗಳನ್ನು ನಡೆಸಲು ದಾನಿಗಳಿಂದ ಅಥವಾ ಶಿಕ್ಷಣ ಇಲಾಖೆಯಿಂದ ಸ್ಮಾರ್ಟ್ ಬೋರ್ಡ್ ಪಡೆಯುವ ಪ್ರಯತ್ನದಲ್ಲಿದ್ದೇವೆ ಎನ್ನುತ್ತಾರೆ ಈ ಶಿಕ್ಷಕಿಯರು.
ಎನ್ಎಂಎಂಎಸ್ ಅಣಿಗೊಳಿಸುತ್ತಿರುವ ಶಿಕ್ಷಕ
ಎಚ್.ಎಸ್.ಅನಿಲ್ ಕುಮಾರ್
ಹಳೇಬೀಡು: ಶಾಲೆಯ ಅವಧಿ ಮುಗಿದು ಕೊಠಡಿಗಳು ಬಾಗಿಲು ಮುಚ್ಚಿದ್ದರೂ ಒಂದು ಕೊಠಡಿಯಲ್ಲಿ ಮಾತ್ರ ನಿತ್ಯ ಸಂಜೆ ಪಾಠ ಕೇಳಿ ಬರುತ್ತಲೇ ಇರುತ್ತದೆ.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗಾಗಿ ಗಣಿತ ಶಿಕ್ಷಕ ಮನೋಜ್ ಕುಮಾರ್ ಎಚ್.ಎಂ. ಆಸಕ್ತಿಯಿಂದ ಹೆಚ್ಚುವರಿ ಬೋಧನೆ ನಡೆಸುತ್ತಿದ್ದಾರೆ.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ವಿದ್ಯಾರ್ಥಿ ವೇತನ (ಎನ್ಎಂಎಂಎಸ್) ಪರೀಕ್ಷೆಗೆ ಅಣಿ ಮಾಡುವುದಕ್ಕಾಗಿ ಮನೋಜ್ ಪಣತೊಟ್ಟಿದ್ದಾರೆ.
2022–03 ರಲ್ಲಿ ಇಬ್ಬರು, 2023-24 ನೇ ಸಾಲಿನಲ್ಲಿ 4 ವಿದ್ಯಾರ್ಥಿಗಳು ಈ ಪರೀಕ್ಷೆ ತೇರ್ಗಡೆಯಾಗಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.
ಗಣಿತ, ಭೌತಶಾಸ್ತ್ರ ಬೋಧಿಸುವುದು ಮಾತ್ರ ಅವರ ಕರ್ತವ್ಯ. ಅದರ ಹೊರತಾಗಿಯೂ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿ ನಿಲ್ಲುವ ಮನಸ್ಥಿತಿ ಹೊಂದಿದ್ದಾರೆ ಮನೋಜ್.
ಶಾಲೆಯ ಉದ್ಯಾನ ನಿರ್ಮಾಣ, ರಾಷ್ಟ್ರೀಯ ಹಬ್ಬದ ಪಥ ಸಂಚಲನ ಕವಾಯಿತು ಹಾಗೂ ಕ್ರೀಡಾ ಚಟುವಟಿಕೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ದ ಮಾಡುವ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮನೋಜ್ ಸಹಾಯ ಮಾಡುತ್ತಾರೆ. ಶಾಲೆಯಲ್ಲಿ ಈಗ ಕಂಪ್ಯೂಟರ್ ಶಿಕ್ಷಣ ಆರಂಭವಾಗಿದ್ದು, ಶಿಕ್ಷಕರ ಹುದ್ದೆ ಭರ್ತಿಯಾಗಿಲ್ಲ. ಸಹೋದ್ಯೋಗಿ ಶಿಕ್ಷಕರ ಜೊತೆಗೂಡಿ ಮಕ್ಕಳಿಗೆ ಕಂಪ್ಯೂಟರ್ ಕಲಿಕೆಗೆ ಸಹಾಯ ಮಾಡುತ್ತಿದ್ದಾರೆ.
‘ಎಂ.ಎಸ್ಸಿ, ಬಿಇಡಿ ಪದವಿಧರರಾಗಿರುವ ಮನೋಜ್ ಪಠ್ಯ ಮೀರಿದ ವಿಷಯವನ್ನು ಸದಾ ನಗುಮುಖದ ಶಿಕ್ಷಕ ಮನೋಜ್ ಕುಮಾರ್, ವಿದ್ಯಾರ್ಥಿಗಳು ಮಾತ್ರವಲ್ಲದೇ, ಶಿಕ್ಷಕರ ಮೆಚ್ಚಿನ ಸಹೋದ್ಯೋಗಿ. ಶಾಲೆಯ ಎಲ್ಲ ಚಟುವಟಿಕೆಗೂ ಕೈಜೋಡಿಸುವ ಅವರು ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ ಮೂಡಿಸುವ ಜಾಣ್ಮೆ ಹೊಂದಿದ್ದಾರೆ’ ಎನ್ನುತ್ತಾರೆ ಶಾಲೆ ಉಪ ಪ್ರಾಂಶುಪಾಲ ಮುಳ್ಳಯ್ಯ.
‘ಶಿಕ್ಷಕ ವೃತ್ತಿ ದೊರಕಿರುವುದೇ ಪುಣ್ಯ. ವಿದ್ಯಾರ್ಥಿಗಳೊಂದಿಗೆ ಕಳೆಯುವ ಪ್ರತಿ ಕ್ಷಣವೂ ಮನಸ್ಸಿಗೆ ಹಿತ ನೀಡುತ್ತದೆ’ ಎಂದು ಮನೋಜ್ ಕುಮಾರ್ ಹೇಳುತ್ತಾರೆ.
ವಿದ್ಯಾರ್ಥಿಗಳ ಹೆಸರಿನಲ್ಲಿ ಠೇವಣಿ
ಎಂ.ಪಿ. ಹರೀಶ್
ಆಲೂರು: ತಾಲ್ಲೂಕಿನ ಸುಳುಗೋಡು ಕೂಡಿಗೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಕೆ.ಎಲ್. ಪುರುಷೋತ್ತಮ, ಶಾಲೆ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.
ವೈಯಕ್ತಿಕವಾಗಿ ಮತ್ತು ಸಂಬಂಧಿಗಳ ಸಹಕಾರ ಪಡೆದು, 2018-19 ರಿಂದ ಈವರೆಗೆ ಶಾಲೆಗೆ ಯುಪಿಎಸ್‌ಗೆ ₹15,100, ಲೇಖನ ಸಾಮಗ್ರಿಗಳಿಗೆ ₹8,500, ಹೊರ ಊರಿಂದ ಸುಳುಗೋಡು ಶಾಲೆಗೆ ಸೇರಿದ ಮಕ್ಕಳಿಗೆ ವರ್ಷಪೂರ್ತಿ ಉಚಿತ ನೋಟ್ ಬುಕ್, , ಪೆನ್, ಬ್ಯಾಗ್, ಸಮವಸ್ತ್ರ, ಶುದ್ಧ ಕುಡಿಯುವ ನೀರಿಗೆ ಅಕ್ವಾಗಾರ್ಡ್ ಯಂತ್ರದಂತಹ ಸೌಲಭ್ಯಗಳನ್ನು ಒದಗಿಸಿದ್ದಾರೆ.
ಹೊರ ಊರಿನಿಂದ ಬಂದು ಈ ಶಾಲೆಗೆ ದಾಖಲಾಗುವ 1ರಿಂದ 4 ನೇ ತರಗತಿ ಮಕ್ಕಳ ಹೆಸರಿಗೆ ತಲಾ 2ಸಾವಿರ, 5ರಿಂದ 7ನೇ ತರಗತಿ ಮಕ್ಕಳಿಗೆ ತಲಾ ₹ 1ಸಾವಿರದಂತೆ ಪೋಷಕರ ಹೆಸರಿಗೆ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಇರಿಸಿದ್ದಾರೆ.
ಶಾಲಾ ಕಟ್ಟಡಕ್ಕೆ ಕಬ್ಬಿಣದ ತಡೆಗೋಡೆ ನಿರ್ಮಾಣ ಸೇರಿದಂತೆ ಈವರೆಗೆ ಸುಮಾರು ₹7.16 ಲಕ್ಷ ಖರ್ಚು ಮಾಡಿ, ಶಾಲೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕಾಪಾಡಲು ಶ್ರಮಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.