ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಮಾಹಿತಿ ನೀಡಿದರೆ ಶಿಸ್ತುಕ್ರಮ: ಸಚಿವ ಮಾಧುಸ್ವಾಮಿ ಎಚ್ಚರಿಕೆ

ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ
Last Updated 27 ಸೆಪ್ಟೆಂಬರ್ 2019, 14:53 IST
ಅಕ್ಷರ ಗಾತ್ರ

ಹಾಸನ: ತಪ್ಪು ಮಾಹಿತಿ ನೀಡುವ ಹಾಗೂ ಅಸಡ್ಡೆ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಯೋಜನೆ ಹಾಗೂ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬರ ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಅಧಿಕಾರಿಗಳ ನಿರ್ಲಕ್ಷ ಸಹಿಸುವುದಿಲ್ಲ, ಉತ್ತಮ ಆಡಳಿತ ನಡೆಯಬೇಕು. ಸರ್ಕಾರದ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಮತ್ತೊಬ್ಬರ ಮೇಲೆ ಸವಾರಿ ಮಾಡುವ ಚಟ ಇಲ್ಲ. ವ್ಯವಸ್ಥೆ ಸುಧಾರಣೆ ಆಗಬೇಕು. ಹಾಗಾಗಿ ಅಧಿಕಾರಿಗಳು ಭಯ ಇಲ್ಲದೆ, ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಸಬೇಕು ಎಂದರು

ಕಚೇರಿಯಲ್ಲಿ ಕುಳಿತು ಕೆಲಸ ಮಾಡದೆ ಕ್ಷೇತ್ರಗಳಿಗೆ ತರಳಿ ಜನಸಾಮಾನ್ಯರ ಸಮಸ್ಯೆ ಅರಿಯಬೇಕು. ಪರಿಸ್ಥಿತಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಬೇಕು. ಸಂವಿಧಾನಕ್ಕೆ ಬದ್ಧವಾಗಿ ಎಲ್ಲರೂ ತಮ್ಮ ಕೆಲಸ ನಿರ್ವಹಿಸಬೇಕು. ಸಾರ್ವಜನಿಕರ ಹಣ ಸರಿಯಾಗಿ ಸದ್ಬಳಕೆಯಾಗಬೇಕು. ಜನ ಸಾಮಾನ್ಯರನ್ನು ಅಲೆದಾಡಿಸದೆ, ಅವಮಾನಿಸದೆ ಕೆಲಸ ಮಾಡಬೇಕು. ಈ ಬಗ್ಗೆ ಯಾವುದಾದರೂ ದೂರು ಕೇಳಿಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಬಾಕಿಯಿರುವ ಏತ ನೀರಾವರಿ ಯೋಜನೆ ಕಾಮಗಾರಿಗಳು ಆದಷ್ಟು ಬೇಗ ಮುಗಿಯಬೇಕು. ಯೋಜನೆ ಪೂರ್ಣಗೊಂಡಿದ್ದರೂ ಕಾರ್ಯಾರಂಭ ಮಾಡದೇ ಇರಲು ಕಾರಣವೇನು ತಿಳಿಸಬೇಕು. ಪ್ರವಾಹ ನಿಯಂತ್ರಣ, ನಿರ್ವಹಣೆ, ಅತಿಯಾಗಿ ಹರಿದು ಬರುವ ನೀರು ವ್ಯರ್ಥವಾಗಿ ಹೋಗದಂತೆ ಸಂಗ್ರಹಿಸುವ ಮಾರ್ಗೊಪಾಯಗಳ ಬಗ್ಗೆ ಯೋಜನೆ ರೂಪಿಸಬೇಕು. 700 ರಿಂದ 800 ಟಿಎಂಸಿ ನೀರು ಸಮುದ್ರಸೇರಿದೆ ಎಂದು ಸಚಿವರು ಹೇಳಿದರು.

ಸ್ಥಳಿಯವಾಗಿ ಹೆಚ್ಚುವರಿ ನೀರು ಸಂಗ್ರಹಿಸಿ ಬರ ಪೀಡಿತ ಪ್ರದೇಶಗಳಿಗೆ ಹರಿಸುವ ಸ್ಥಿತಿ ನಿರ್ಮಾಣ ಮಾಡಬೇಕು. ಎಲ್ಲಾ ಜಿಲ್ಲೆಯ ರೈತರು ಸಮಾನರು ಎಂಬ ಮನೋಭಾವ ಬರಬೇಕು ಎಂದರು.

ಎತ್ತಿನ ಹೊಳೆ ಯೋಜನೆ ಆದಷ್ಟು ಬೇಗ ಪೂರ್ಣಗೊಳಿಸಿ ಅದಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಬೇಕು. ಅರಣ್ಯ ತೆರವು, ಅರಣ್ಯೀಕರಣಕ್ಕೆ ಪರ್ಯಾಯ ಭೂಮಿ ಒದಗಿಸುವ ಕಾರ್ಯಗಳನ್ನು ಬೇಗ ಮುಗಿಸಿ ಎಂದ ಸಚಿವರು, ರಾಜ್ಯ ಸರ್ಕಾರದಿಂದ ಸೂಚನೆ ಇಲ್ಲದೆ ಎತ್ತಿನ ಹೊಳೆ ನೀರನ್ನು ಬೇರೆ ಯಾವುದೇ ನದಿಗೆ ಪ್ರಾಯೋಗಿಕವಾಗಿ ಹರಿಸುವ ಕೆಲಸ ಮಾಡಬೇಡಿ. ಇದರಿಂದ ಮುಂದೆ ಹಲವು ತಾಂತ್ರಿಕೆ ಸಮಸ್ಯೆಗಳು ಎದುರಾಗಬಹುದು ಎಂದು ಎಚ್ಚರಿಕೆ ನೀಡಿದರು.

ವಿಶೇಷ ಭೂ ಸ್ವಾಧೀನಾಧಿಕಾರಿಗಳು ಯಾವುದೇ ಪೂರ್ವಾಗ್ರಹ ಪೀಡಿತರಾಗಿ ಅಥವಾ ಯಾರಿಗೂ ಉದ್ದೇಶಪೂರ್ವಕ ಅನುಕೂಲ ಕಲ್ಪಿಸಬಾರದು ಅಥವಾ ಭಯದಿಂದ ಕರ್ತವ್ಯ ನಿರ್ವಹಿಸಬಾರದು ಎಂದು ಸಚಿವರು ಸೂಚನೆ ನೀಡಿದರು.

ರಸ್ತೆಗಳನ್ನು ತ್ವರಿತವಾಗಿ ಸಂಚಾರ ಯೋಗ್ಯವನ್ನಾಗಿ ಮಾಡಿ ಕೆರೆ, ಕಟ್ಟಡಗಳ ದುರಸ್ತಿ ಮಾಡುವಂತೆ ಲೋಕೋಪಯೋಗಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಗಳಿಗೆ ನಿರ್ದೇಶನ ನೀಡಿದ ಅವರು, ಲೋಕೋಪಯೋಗಿ ಇಲಾಖೆ ರಸ್ತೆ ರಿಪೇರಿಗಾಗಿಯೇ ₹ 500 ಕೋಟಿ ಬಿಡುಗಡೆ ಮಾಡಲಾಗಿದೆ. ಅಗತ್ಯವಿದ್ದರೆ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ತಹಶೀಲ್ದಾರರು ತ್ವರಿತವಾಗಿ ಅರ್ಜಿ ವಿಲೇವಾರಿ ಮಾಡಬೇಕು, ದೃಢೀಕರಣ ಪತ್ರಗಳಿಗೆ ಜನ ಸಾಮಾನ್ಯರನ್ನು ಅಲೆದಾಡಿಸಬೇಡಿ. ಪಿಂಚಣಿ ಹಾಗೂ ಸರ್ಕಾರದ ಸಬ್ಸಿಡಿ ಹಣವನ್ನು ಅಂಚೆ ಕಚೇರಿಯ ಉಳಿತಾಯ ಖಾತೆಗೆ ಹಾಕುವ ಬದಲಿಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಆದ್ಯತೆ ನೀಡಿ ಎಂದರು.

ಬಗರ್ ಹುಕುಂ ಸಮಿತಿ ಮತ್ತೆ ರಚನೆಯಾಗಲಿವೆ. ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಕಾನೂನಿನ ನೆಪ ಹೇಳಿ ಸತಾಯಿಸಬೇಡಿ. ಸರ್ಕಾರಕ್ಕೆ ಹೆಸರು ಬರುವಂತೆ ಜನಪರವಾಗಿ ಕೆಲಸ ಮಾಡಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಜಿಲ್ಲೆಯ ನೆರೆ ಹಾಗೂ ಬರ ಪರಿಸ್ಥಿತಿಗಳ ಬಗ್ಗೆ ವಿವರಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಶಾಸಕ ಕೆ.ಎಂ.ಲಿಂಗೇಶ್, ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸಪಟ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್ ಹಾಗೂ ವಿವಿಧ ಇಲಾಖಾ ಅಧಿಖಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT