ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಂಕನಹಳ್ಳಿ ಜೀತ ಪ್ರಕರಣ: ತವರಿಗೆ ಮರಳಿದ ಕೂಲಿ ಕಾರ್ಮಿಕರು

Last Updated 22 ಡಿಸೆಂಬರ್ 2018, 10:21 IST
ಅಕ್ಷರ ಗಾತ್ರ

ಹಾಸನ: ಸಾವಂಕನಹಳ್ಳಿ ತೋಟದಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ 52 ಮಂದಿ ಕೂಲಿ ಕಾರ್ಮಿಕರು, ಬಂಧಮುಕ್ತರಾದ ಐದು ದಿನಗಳ ನಂತರ ತಮ್ಮ ತಮ್ಮ ಊರುಗಳಿಗೆ ಮರಳಿದರು.

ಜಿಲ್ಲಾಡಳಿತ ಕಾರ್ಮಿಕರು ಊರು ತಲುಪುವಷ್ಟು ಪ್ರಯಾಣ ಭತ್ಯೆ ಕೊಟ್ಟು ಕಳಿಸಿದೆ. ಹೀಗಾಗಿ ಎಲ್ಲಾ ಕೂಲಿಯಾಳು, ಪುನರ್ವಸತಿ ಎಂಬ ಭರವಸೆಯ ಮೂಟೆ ಹೊತ್ತು ಬರಿಗೈಯಲ್ಲೇ ತಮ್ಮ ಗ್ರಾಮಗಳತ್ತ ಹೊರಟರು.

ಆಂದ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕೂಲಿ ಅರಸಿ ಬಂದು ತೆಂಗಿನ ತೋಟವೊಂದರಲ್ಲಿ ಬಂಧಿಯಾಗಿದ್ದ 52 ಮಂದಿಯನ್ನು ಡಿ. 16 ರ ರಾತ್ರಿ ಎಸ್ಪಿ ಪ್ರಕಾಶ್ ಗೌಡ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದರು. ಬಳಿಕ ಎಲ್ಲರಿಗೂ ಮೊರಾರ್ಜಿ ವಸತಿ ಶಾಲೆಯೊಂದರಲ್ಲಿ ಎಲ್ಲರಿಗೂ ಆಶ್ರಯ ನೀಡಲಾಗಿತ್ತು.
ಸುದ್ದಿ ತಿಳಿದು ಅನೇಕರು ಸ್ಥಳಕ್ಕೆ ಭೇಟಿ ನೀಡಿ ಧೈರ್ಯ ಹೇಳಿದ್ದರು. ಹಿಂಸೆಯಿಂದ ಪಾರಾದ ಸಂತಸ ಹೊರತು ಪಡಿಸಿ, ಬರಿಗೈಯಲ್ಲೇ ಊರುಗಳಿಗೆ ಮರಳಿದರು.

‘ಮನೆ ಇಲ್ಲದವರಿಗೆ ಮನೆ, ಜಮೀನು ಇಲ್ಲದವರಿಗೆ ಭೂಮಿ, ಜೀವನಾಧಾರಕ್ಕೆ ಜಾಬ್ ಕಾರ್ಡ್ ಕೊಡುತ್ತೇವೆ’ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

‘ಇದ್ದಷ್ಟು ದಿನ ಅನುಭವಿಸಿದ ಚಿತ್ರಹಿಂಸೆ, ನಿಂದನೆ ಸಾಕು. ನಮ್ಮೂರಲ್ಲಿ ಬರ ಉರಿ ತಾಳಲಾರದೆ ಇಲ್ಲಿಗೆ ಬಂದಿದ್ದೆವು. ಮನೆಯಲ್ಲಿ ತಿನ್ನುವುದಕ್ಕೆ ಏನೂ ಇಲ್ಲ. ಬದುಕು ಮತ್ತೆ ಭಯವಾಗಿದೆ. ಹಾಲಿ ಕೊಟ್ಟಿರುವ ಸಣ್ಣ ನೆರವು, ಹೋಗುವುದರೊಳಗೆ ಖಾಲಿಯಾಗಲಿದೆ. ಹೀಗಾಗಿ ಸರ್ಕಾರ ಎಲ್ಲರಿಗೂ ಸೂಕ್ತ ಸೌಲಭ್ಯ ಕಲ್ಪಿಸಲಿ’ ಎಂದು ಹಾವೇರಿ ಜಿಲ್ಲೆ ಕಾರ್ಮಿಕ ಸಂತೋಷ್ ಮನವಿ ಮಾಡಿದರು.

ಈ ನಡುವೆ ಕೂಲಿ ಕಾರ್ಮಿಕರನ್ನು ಭೇಟಿ ಮಾಡಿ, ಸಮಸ್ಯೆ ಆಲಿಸಿದ ಸಂಸದೆ ಶೋಭಾ ಕರಂದ್ಲಾಜೆ, ಪ್ರಕರಣದ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿದರು.

‘ಈಗಲೂ ಜೀತಪದ್ಧತಿ ಜೀವಂತವಾಗಿರುವುದು ನಿಜಕ್ಕೂ ವಿಷಾದನೀಯ. ಬಡವರ ಹಣ ತಿಂದಿರುವ ಪಾಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಇದು ಬೇರೆಯವರಿಗೆ ಪಾಠವಾಗಬೇಕು. ಸರ್ಕಾರ ಕೂಡಲೇ ನೊಂದವರ ಸಹಾಯ ಹಸ್ತ ಚಾಚಬೇಕು. ಆಯಾಯ ಜಿಲ್ಲೆಗಳಲ್ಲಿ ಪುನರ್ವಸತಿ ಕಲ್ಪಿಸಬೇಕು. ಶಾಲೆ ವಂಚಿತ ಮಕ್ಕಳಿಗೆ ಶಿಕ್ಷಣಕ್ಕೆ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT