ಬುಧವಾರ, ಜನವರಿ 20, 2021
24 °C
ನಾಲ್ಕು ಎಕರೆ ಭೂಮಿಯಲ್ಲಿ ಬೆಳೆದಿದ್ದ ಬೆಳೆ: ₹ 3 ಲಕ್ಷ ನಷ್ಟ

ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಕರಕಲಾದ ಮುಸುಕಿನ ಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‌ಬೇಲೂರು: ತಾಲ್ಲೂಕಿನ ಮಾದಿಹಳ್ಳಿ ಹೋಬಳಿಯ ಬಲ್ಲೇನಹಳ್ಳಿಯಲ್ಲಿ ಶನಿವಾರ ರಾತ್ರಿ ಮುಸುಕಿನ ಜೋಳದ ತೆನೆಗಳ ರಾಶಿಗೆ‌ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದರಿಂದ ಸಂಪೂರ್ಣ ಸುಟ್ಟಿದ್ದು, ಅಂದಾಜು ₹ 3 ಲಕ್ಷ ನಷ್ಟವಾಗಿದೆ.

ಗ್ರಾಮದ ರೈತ ಮಹದೇವಸ್ವಾಮಿ ತಮ್ಮ ನಾಲ್ಕು ಎಕರೆ ಭೂಮಿಯಲ್ಲಿ ಬೆಳೆದ ಮುಸುಕಿನ ಜೋಳವನ್ನು ಕಳೆದ ವಾರ ಕಟಾವು ಮಾಡಿ ಒಕ್ಕಣೆಗಾಗಿ ರಾಶಿ ಹಾಕಿದ್ದರು. ಸದ್ಯ ಬೆಲೆ ಕುಸಿದಿದ್ದರಿಂದ ಮತ್ತು ಮೋಡ ಮುಸುಕಿನ ವಾತಾವರಣ ಇರುವ ಕಾರಣದಿಂದ ಒಕ್ಕಣೆ ಮಾಡಿರಲಿಲ್ಲ. ಕಿಡಿಗೇಡಿಗಳ ಕೃತ್ಯಕ್ಕೆ ಜೋಳ ಸುಟ್ಟು ಕರಲಾಗಿವೆ.‌

ಶನಿವಾರ ರಾತ್ರಿ ಎರಡು ಗಂಟೆ ಸಮಯದಲ್ಲಿ ಗ್ರಾಮದ ರೈತರೊಬ್ಬರು ಮಾರುಕಟ್ಟೆಗೆ ಹೊರಟಿದ್ದಾಗ ಬೆಂಕಿಯ ಜ್ವಾಲೆ ಕಂಡು ಇತರರನ್ನು ಎಬ್ಬಿಸಿದ್ದಾರೆ. ಗ್ರಾಮಸ್ಥರೊಂದಿಗೆ ತೆರಳಿ ಬೆಂಕಿ ನಂದಿಸುವ ಪ್ರಯತ್ನ ಮಾಡಲಾಯಿತಾದರೂ ಅಷ್ಟರಲ್ಲಿ ಎಲ್ಲವೂ ಸುಟ್ಟು ಕರಕಲಾಗಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಪಟ್ಟರೂ ಪ್ರಯೋಜನವಾಗಲಿಲ್ಲ.

‘ನಾಲ್ಕು ಎಕರೆ ಭೂಮಿಯಲ್ಲಿ ಕಷ್ಟಪಟ್ಟು ಬೆಳೆದ ಬೆಳೆ ಬೆಂಕಿಗೆ ಆಹುತಿಯಾಗಿದೆ. ಕೈಗೆ ಬಂದ ತುತ್ತು ಬಾಯಿ‌ ಬರಲಿಲ್ಲ. ಬ್ಯಾಂಕ್‌ ಸಾಲ ಮತ್ತು ಕುಟುಂಬ ನಿರ್ವಹಣೆ ಕಷ್ಟವಾಗಿದೆ ಏನು ಮಾಡಬೇಕು ತೋಚುತ್ತಿಲ್ಲ’ ಎಂದು ರೈತ ಮಹಾದೇವಸ್ವಾಮಿ ಅಳಲು ತೋಡಿಕೊಂಡರು.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಲಿಂಗೇಶ್ ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ‌ ಉಪಾಧ್ಯಕ್ಷ ಬಲ್ಲೇನಹಳ್ಳಿ ರವಿಕುಮಾರ್ ‌ನೊಂದ‌ ಕೃಷಿಕರಿಗೆ ಧೈರ್ಯ ಹೇಳಿ, ಸರ್ಕಾರದಿಂದ ಸಾಧ್ಯವಾದಷ್ಟು‌ ಪರಿಹಾರ ನೀಡುವ ಭರವಸೆ ‌ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.