ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಗ್ಗೇಹಳ್ಳಿ | 6 ವರ್ಷವಾದರೂ ಸಿದ್ಧವಾಗದ ಶಾಲೆ

ಅನೈತಿಕ ಚಟುವಟಿಕೆ ತಾಣವಾದ ಮೊರಾರ್ಜಿ ವಸತಿ ಶಾಲೆಯ ಕಟ್ಟಡ
ಪ್ರದೀಪ್‌ಕುಮಾರ್‌ ಎನ್‌.ಎನ್‌.
Published : 17 ಆಗಸ್ಟ್ 2024, 6:24 IST
Last Updated : 17 ಆಗಸ್ಟ್ 2024, 6:24 IST
ಫಾಲೋ ಮಾಡಿ
Comments

ನುಗ್ಗೇಹಳ್ಳಿ: ಹೋಬಳಿಯ ಸೋಮವಾರ ಸಂತೆ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಾಣ ಹಂತದಲ್ಲಿರುವ ಮೊರಾರ್ಜಿ ವಸತಿ ಶಾಲೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೇ ಅನೈತಿಕ ಚಟುವಟಿಕೆ ತಾಣವಾಗಿದೆ.

ನುಗ್ಗೇಹಳ್ಳಿ ಹೋಬಳಿ ಮೊರಾರ್ಜಿ ವಸತಿ ಶಾಲೆಯ ಬಾಲಕಿಯರ ಹಾಗೂ ಬಾಲಕರ ನೂತನ ಕಟ್ಟಡ ನಿರ್ಮಾಣಕ್ಕೆ 2018ರಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು. ಸುಮಾರು ₹14 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆದರೆ ಗುತ್ತಿಗೆದಾರರ ಬೇಜವಾಬ್ದಾರಿಯಿಂದ 6 ವರ್ಷ ಕಳೆದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರ ನಡುವೆ ಕಟ್ಟಡದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದು, ಕಟ್ಟಡದ ಒಳಗೆ ಹಾಗೂ ಸುತ್ತ ಮದ್ಯದ ಬಾಟಲಿಗಳು, ಸಿಗರೇಟ್ ಪ್ಯಾಕ್ ಎಲ್ಲೆಂದರಲ್ಲಿ ಬಿದ್ದಿವೆ ಎಂದು ಜನರು ದೂರುತ್ತಿದ್ದಾರೆ.

ವಸತಿ ನಿಲಯದ ಮಕ್ಕಳಿಗೆ ನಿತ್ಯ ಕಿರಿಕಿರಿ: ನುಗ್ಗೇಹಳ್ಳಿ ಮೊರಾಜಿ ವಸತಿ ಶಾಲೆಯಲ್ಲಿ ಬಾಲಕಿಯರು ಹಾಗೂ ಬಾಲಕರು ಸೇರಿ ಸುಮಾರು 250 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ನೂತನ ಕಟ್ಟಡ ಉದ್ಘಾಟನೆ ಆಗದಿರುವುದರಿಂದ ಚನ್ನರಾಯಪಟ್ಟಣ ಬಳಿ ಇರುವ ಗೊರಮಾರನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ವಸತಿ ಹಾಗೂ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ನಿತ್ಯ ಮಕ್ಕಳಿಗೆ ರಾತ್ರಿ ಮಲಗಲು ಹಾಗೂ ಶೌಚಾಲಯದ ಸಮಸ್ಯೆ ಎದುರಾಗಿದೆ.

ಒಂದು ಕೊಠಡಿಯಲ್ಲಿ 10 ವಿದ್ಯಾರ್ಥಿಗಳು ಮಾತ್ರ ಮಲಗಲು ನಿಯಮವಿದೆ. ಆದರೆ 2 ವಸತಿ ಶಾಲೆಗಳ ಮಕ್ಕಳು ಒಂದೇ ಕಡೆ ಇರುವುದರಿಂದ 1 ಕೊಠಡಿಯಲ್ಲಿ 30 ರಿಂದ 35 ವಿದ್ಯಾರ್ಥಿಗಳಿಗೆ ಮಲಗಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ.

ವಸತಿ ನಿಲಯಕಿಲ್ಲ ಭದ್ರತೆ: ಸರ್ಕಾರದ ₹14 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಮೊರಾರ್ಜಿ ವಸತಿ ನಿಲಯದ ಕಟ್ಟಡದಲ್ಲಿ ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಬಾಗಿಲು, ಕಿಟಕಿ, ಫ್ಯಾನ್ ಮುಂತಾದ ವಸ್ತುಗಳನ್ನು ಕಿಡಿಗೇಡಿಗಳು ಹಾಳು ಮಾಡಿದ್ದು, ಇನ್ನೂ ಕೆಲವರು ಸಿಕ್ಕ ಸಿಕ್ಕ ವಸ್ತುಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ. ಕಟ್ಟಡದಲ್ಲಿ  ಭದ್ರತಾ ಸಿಬ್ಬಂದಿ ನಿಯೋಜಿಸದಿರುವುದೇ ಇದಕ್ಕೆಲ್ಲ ಮುಖ್ಯ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೋಮವಾರ ಸಂತೆ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಾಣಗೊಂಡಿರುವ ಮೊರಾರ್ಜಿ ವಸತಿ ಶಾಲೆ ಕಟ್ಟಡದ ಒಳಗೆ ಕಿಡಿಗೇಡಿಗಳು ಮದ್ಯಪಾನ ಮಾಡಿರುವುದು
ಸೋಮವಾರ ಸಂತೆ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಾಣಗೊಂಡಿರುವ ಮೊರಾರ್ಜಿ ವಸತಿ ಶಾಲೆ ಕಟ್ಟಡದ ಒಳಗೆ ಕಿಡಿಗೇಡಿಗಳು ಮದ್ಯಪಾನ ಮಾಡಿರುವುದು
ಸಿ.ಎನ್. ಬಾಲಕೃಷ್ಣ
ಸಿ.ಎನ್. ಬಾಲಕೃಷ್ಣ

ಹೊಸ ಕಟ್ಟಡ ಪ್ರಾರಂಭಗೊಳ್ಳದೇ ಗೊರಮಾರನಹಳ್ಳಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಕೊಠಡಿ ಶೌಚಾಲಯ ಸೇರಿದಂತೆ ಅನೇಕ ಸಮಸ್ಯೆಗಳಿವೆ

- ಜಿತೇಂದ್ರ ಕುಮಾರ್ ಪೋಷಕ

ಗಡಿಭಾಗದ ರಾಷ್ಟ್ರೀಯ ಹೆದ್ದಾರಿ ಸೋಮವಾರ ಸಂತೆ ಬಳಿ ನಿರ್ಮಾಣ ಮಾಡಿರುವುದರಿಂದ ಮಕ್ಕಳಿಗೆ ಪೋಷಕರಿಗೆ ತೊಂದರೆಯಾಗಿದೆ. ಬೇಗ ಉದ್ಘಾಟಿಸಿದರೆ ಅನುಕೂಲ

- ಎನ್‌.ಸಿ. ನಟೇಶ್ ಕಸ್ತೂರಿ ಕನ್ನಡ ಗೆಳೆಯರ ಬಳಗದ ಅಧ್ಯಕ್ಷ

6 ವರ್ಷ ಕಳೆದರೂ ಕಟ್ಟಡ ಪೂರ್ಣಗೊಂಡಿಲ್ಲ. ಗುತ್ತಿಗೆದಾರರನ್ನು ಸಂಪರ್ಕಿಸಿದರೆ ಸರಿಯಾದ ಪ್ರತಿಕ್ರಿಯೆ ನೀಡುತ್ತಿಲ್ಲ . ಇಂತಹ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು

- ಸೋಸಲಿಗೆರೆ ವೆಂಕಟೇಶ್ ಡಿಎಸ್ಎಸ್ ಮುಖಂಡ

- ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನುಗ್ಗೇಹಳ್ಳಿ ಹೋಬಳಿ ಮೊರಾರ್ಜಿ ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ನನ್ನ ಅವಧಿಯಲ್ಲಿ ₹ 14 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿತ್ತು. ಜೊತೆಗೆ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸಿದ್ದರು. ಆದರೆ ಗುತ್ತಿಗೆದಾರರ ಸಮಸ್ಯೆಯಿಂದ 6 ವರ್ಷಗಳಿಂದ  ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದ್ದಾರೆ. ಈ ಬಗ್ಗೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಾಗಿ ತಿಳಿಸಿದ್ದು ತಿಂಗಳಾಂತ್ಯದೊಳಗೆ ಬಾಕಿ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಇತ್ತೀಚೆಗೆ ನುಗ್ಗೇಹಳ್ಳಿ ವಸತಿ ಶಾಲೆಯ ಮಕ್ಕಳ ಪೋಷಕರು ತಮ್ಮನ್ನು ಭೇಟಿ ಮಾಡಿ ನೂತನ ಕಟ್ಟಡ ಉದ್ಘಾಟಿಸಿ ಮಕ್ಕಳಿಗೆ ಅನುಮಾಡಿಕೊಡುವಂತೆ ಮನವಿ ಕೂಡ ಮಾಡಿದ್ದರು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT