ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌, ಜೆಡಿಎಸ್‌ ರೈತರ ವಿರೋಧಿಗಳು: ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌

ರಾಹುಲ್‌ಗೆ ರೈತರ ಬಗ್ಗೆ ಏನು ಗೊತ್ತಿದೆ: ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಪ್ರಶ್ನೆ
Last Updated 18 ಫೆಬ್ರುವರಿ 2021, 12:49 IST
ಅಕ್ಷರ ಗಾತ್ರ

ಹಾಸನ: ಕಾಂಗ್ರೆಸ್‌ನಲ್ಲಿ ನಾಯಕತ್ವದ ಗುಣ ಇಲ್ಲ. ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿರುವ ರಾಹುಲ್ ಗಾಂಧಿಗೆ ರೈತರ ಬಗ್ಗೆ ಏನು ಗೊತ್ತಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಟೀಕಾ ಪ್ರಹಾರ ನಡೆಸಿದರು.

ನಗರದ ಹೊರವಲಯದ ಎಚ್.ಕೆ.ಎಸ್.ಇಂಟರ್ ನ್ಯಾಷನಲ್ ಶಾಲೆ ಆವರಣದಲ್ಲಿ ಗುರುವಾರ ನಡೆದ ರಾಜ್ಯ ಪ್ರಕೋಷ್ಠಗಳವಿಶೇಷ ಸಭೆ ಉದ್ಘಾಟಿಸಿ ಮಾತನಾಡಿದರು.

ಮೋದಿ ಅವರ ಜನಪ್ರಿಯ ಯೋಜನೆಗಳನ್ನು ಕಾಂಗ್ರೆಸ್‌ ವಿರೋಧ ಮಾಡುತ್ತಿದೆ. ದೇಶದ ಅಭಿವೃದ್ಧಿ ಸಹಿಸುತ್ತಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ರೈತರ ವಿರೋಧಿಗಳು. ಇದೇ ಕಾರಣಕ್ಕೆ ಕರ್ನಾಟಕದ ಜನರುಅವರಿಗೆ ಅಧಿಕಾರ ನೀಡಿಲ್ಲ ಎಂದು ಟೀಕಿಸಿದರು.

ಮುಂದಿನ ದಿನಗಳಲ್ಲಿ ಹಾಸನ, ಮಂಡ್ಯ ಸೇರಿದಂತೆ ಹಳೇ ಮೈಸೂರು ಭಾಗಗಳಲ್ಲಿ ಜೆಡಿಎಸ್-ಕಾಂಗ್ರೆಸ್‍ಗಿಂತ ಬಿಜೆಪಿ ಬಲಿಷ್ಠವಾಗಲಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿರುವುದೇ ಉದಾಹರಣೆಯಾಗಿದೆ. ಇದು ದೆಹಲಿಯವರೆಗೂ ಚರ್ಚೆಯಾಗಿದ್ದು, ಬಿಜೆಪಿ ಬಲವರ್ಧನೆಯ ಕುರುಹು. ಮುಂದಿನ ಚುನಾವಣೆಗಳಲ್ಲೂ ಇದು ಮುಂದುವರಿಯಬೇಕು ಎಂದರು.

ಬಿಜೆಪಿ ಅವಧಿಯಲ್ಲಿ ದೇಶಾದ್ಯಂತ ಹೆಚ್ಚು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದ್ದು, ಮೊಬೈಲ್ ಉತ್ಪಾದನೆಯಲ್ಲಿ ಭಾರತ 2ನೇ ಸ್ಥಾನ ಪಡೆದಿದೆ ಎಂದರು.

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಅರುಣ್ ಸಿಂಗ್ಪ್ರಶಂಸೆ ವ್ಯಕ್ತಪಡಿಸಿದರು.

ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ‘ರಾಜ್ಯದಲ್ಲಿ ಈ ಹಿಂದೆ ಡ್ರಗ್ಸ್ ಹಣದಲ್ಲಿ ಸರ್ಕಾರ
ನಡೆಯುತ್ತಿತ್ತು. ಆದರೆ, ಯಡಿಯೂರಪ್ಪ ಸರ್ಕಾರ ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಿದೆ. ಬಿಜೆಪಿ ದೇಶದಲ್ಲಿ
ಕೇವಲ ಮತ ಪರಿವರ್ತನೆಯ ರಾಜಕಾರಣ ಮಾಡುತ್ತಿಲ್ಲ, ರಾಷ್ಟ್ರ ಪರಿವರ್ತನೆಯ ರಾಜಕಾರಣ ಮಾಡುತ್ತಿದೆ. ವಿವಿಧ
ಸಮಾಜಗಳನ್ನು, ಯುವ ಜನರನ್ನು, ಹೊಸಬರನ್ನು ಪಕ್ಷಕ್ಕೆ ಕರೆತರುವ ಕೆಲಸ ಬಿಜೆಪಿ ಪ್ರಕೋಷ್ಠಗಳಿಂದ ಆಗಬೇಕು’ ಎಂದುಹೇಳಿದರು.

‘ಅಯೋಧ್ಯೆಯಲ್ಲಿ ರಾಮನಿಗೆ ಮಂದಿರಾ ಬೇಕಾ ಅಂತಾರೆ. ಸ್ವಾಮಿ ನಿಮ್ಮ ಮೂರ್ಖತನಕ್ಕೆ ಏನೆನ್ನಬೇಕು. ಮೊದಲು
ರಾಮನ ಇತಿಹಾಸ ಓದಿ. ಅಧಿಕಾರಕ್ಕಾಗಿ ಪಕ್ಷ ಬದಲಾವಣೆ ಮಾಡಿದವರು. ಅಧಿಕಾರ ಇಲ್ಲದಿದ್ದಾಗ ಅಹಿಂದಾ
ಹೆಸರೇಳುತ್ತೀರೀ, ಅಹಿಂದಾದಿಂದ ಅಧಿಕಾರ ಸಿಕ್ಕಿದಾಗ ಸ್ವಹಿಂದಾ ಮಾಡುತ್ತೀರಿ’ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ
ಅವರನ್ನು ಟೀಕಿಸಿದರು.

ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂ ಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಸುರೇಶ್, ಸಂಘಟನಾ ಕಾರ್ಯದರ್ಶಿ ಅರುಣ್‌, ಪ್ರಕೋಷ್ಠ ಸಂಯೋಜಕ ಭಾನುಪ್ರಕಾಶ್‌, ಸಹ ಸಂಯೋಜಕ ಶಿವಯೋಗಿ ಸ್ವಾಮಿ, ರಾಜ್ಯಸಭಾ ಸದಸ್ಯ ನಾರಾಯಣ, ಹಾವೇರಿ ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯ್ಕ ಹಾಜರಿದ್ದರು. ವಿಭಾಗ ಪ್ರಭಾರಿ ಮೈ.ವಿ.ರವಿ ಸ್ವಾಗತಿಸಿದರು.

ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ 21 ಜಿಲ್ಲೆಗಳ 869 ಸಂಚಾಲಕರು, ಸಹ ಸಂಚಾಲಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT