ಶನಿವಾರ, ಏಪ್ರಿಲ್ 1, 2023
29 °C
ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಎಸ್.ಟಿ.ಸೋಮಶೇಖರ್‌, ಸಂಸದ ಪ್ರತಾಪ್ ಸಿಂಹ ದರ್ಶನ

ಅಧಿದೇವತೆ ದರ್ಶನಕ್ಕೆ ಗಣ್ಯರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಹಾಸನಾಂಬಾ ದರ್ಶನೋತ್ಸವ ಆರನೇ ದಿನವಾದ ಮಂಗಳವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಿ ದರ್ಶನ ಪಡೆದರು. 

ಬೆಳಿಗ್ಗೆಯಿಂದಲೇ ಭಕ್ತರು ದೇವಸ್ಥಾನದತ್ತ ಮುಖ ಮಾಡಿದ್ದರಿಂದ ಎಲ್ಲ ವಿಭಾಗದ ಸಾಲುಗಳು ಭರ್ತಿಯಾಗಿದ್ದವು. ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಮಧ್ಯಾಹ್ನ ನಂತರ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು. ದೇವಿ ದರ್ಶನಕ್ಕೆ ಎರಡರಿಂದ ಮೂರು ತಾಸು ಸರದಿ ಸಾಲಿನಲ್ಲಿ ಸಾಗಬೇಕಾಯಿತು.

ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಪ್ರತಾಪ್ ಸಿಂಹ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ವಿಧಾನ ಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ, ರಮೇಶ್‌ ಗೌಡ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ
ಅವರ ಪತ್ನಿ ಚನ್ನಮ್ಮ ದೇವೇಗೌಡ, ಅವರ ಪುತ್ರಿ ಶೈಲಜಾ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಬಿ.ಎಸ್.ರಾಜಶೇಖರ್‌, ಕಿರಿಕೋಡ್ಲಿ ಮಠದ ಸದಾಶಿವ ಸ್ವಾಮೀಜಿ, ಸಂಗೀತ ನಿರ್ದೇಶಕ ಹಂಸಲೇಖ ಅವರ ಪತ್ನಿ ಲತಾ ಹಂಸಲೇಖ, ನ್ಯಾಯಾಧೀಶರು ಹಾಗೂ ಇತರೆ ಗಣ್ಯರು ಕುಟುಂಬ ಸಮೇತರಾಗಿ ಹಾಸನಾಂಬೆ ಹಾಗೂ ಸಿದ್ಧೇಶ್ವರ ಸ್ವಾಮಿ ದರ್ಶನ ಪಡೆದರು.

ಸರದಿ ಸಾಲಿನಲ್ಲಿ ನಿಂತಿರುವ ಭಕ್ತಾದಿಗಳಿಗೆ ಕುಡಿಯುವ ನೀರು ಒದಗಿಸುವ ಕಾರ್ಯವನ್ನು ಸ್ಕೌಟ್ಸ್ ಅಂಡ್‌ ಗೈಡ್ಸ್‌ ಹಾಗೂ ಇತರೆ ಸಂಘಟನೆಗಳ ಕಾರ್ಯಕರ್ತರು ಮಾಡುತ್ತಿದ್ದಾರೆ. ಅಧಿದೇವತೆ ದರ್ಶನಕ್ಕೆ ಬರುವ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ಪೊಲೀಸ್‌ ಇಲಾಖೆ ಅಗತ್ಯ ಬಿಗಿ ಭದ್ರತೆ ಕೈಗೊಂಡಿದೆ.

₹ 300 ಹಾಗೂ ಸಾವಿರ ರೂಪಾಯಿ ದರದ ಟಿಕೆಟ್‌ ದರ್ಶನದ ಸಾಲುಗಳು ಸಹ ಭರ್ತಿಯಾಗಿತ್ತು. ಸತತ ನಾಲ್ಕು ದಿನಗಳಿಂದ ಸಂಜೆ ನಗರದಲ್ಲಿ ಮಳೆ ಸುರಿಯುತ್ತಿರುವುದರಿಂದ ಭಕ್ತರಿಗೆ ದರ್ಶನ ಪಡೆಯಲು ಅಡ್ಡಿಯಾಗಿದೆ. ಸಂಜೆ ಅರ್ಧ ತಾಸು ಮಳೆ ಸುರಿಯಿತು.

ಹಾಸನಾಂಬಾ ದರ್ಶನಕ್ಕೆ ಬರುತ್ತಿರುವವರ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಹಾಗೂ ಮಳೆ ಅಡಚಣೆ ಎದುರಾಗುತ್ತಿರುವುದರಿಂದ ದರ್ಶನದ ಅವಧಿಯನ್ನು ರಾತ್ರಿ 10 ಗಂಟೆವರೆಗೆ ಜಿಲ್ಲಾಡಳಿತ ವಿಸ್ತರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು