ಬುಧವಾರ, ಅಕ್ಟೋಬರ್ 21, 2020
24 °C
‌ಅನುಮತಿ ನೀಡಿದರೂ ಚಿತ್ರ ಪ್ರದರ್ಶನ ಮಾಡದಿರಲು ಮಾಲೀಕರ ನಿರ್ಧಾರ

ಶೇ 50 ಪ್ರೇಕ್ಷಕರಿಂದ ನಷ್ಟವೇ ಅಧಿಕ: ಚಿತ್ರಮಂದಿರಗಳ ಮಾಲೀಕರು

ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಲಾಕ್‌ಡೌನ್‌ನಿಂದ ಮುಚ್ಚಿದ್ದ ಚಲನಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದ್ದರೂ ಜಿಲ್ಲೆಯಲ್ಲಿ ಅ. 15ರಿಂದ ಚಿತ್ರ ಪ್ರದರ್ಶನ ಮಾಡದಿರಲು ಮಾಲೀಕರು ನಿರ್ಧರಿಸಿದ್ದಾರೆ.

ಚಿತ್ರಮಂದಿರ ತೆರೆದರೂ ಪ್ರೇಕ್ಷಕರು ಬರುತ್ತಾರೆಯೇ ಎಂಬ ಅನುಮಾನ, ಶೇಕಡಾ 50 ಪ್ರೇಕ್ಷಕರಿಗೆ ಚಿತ್ರ ಪ್ರದರ್ಶಿಸುವುದರಿಂದ ನಷ್ಟ ಅನುಭವಿಸಬೇಕಾಗುತ್ತದೆ ಹಾಗೂ ಚಲನಚಿತ್ರ ವಿತರಕರಿಗೆ ಪಾವತಿಸಬೇಕಾದ ಎನ್‌ಆರ್‌ಐ ಹೊರೆಯಾಗಿದೆ ಎಂಬುದು ಬಹುತೇಕ ಚಿತ್ರಮಂದಿರಗಳ ಮಾಲೀಕರು ನೀಡಿದ ಕಾರಣ.

ಹಾಸನ ತಾಲ್ಲೂಕಿನಲ್ಲಿ ಆರು, ಸಕಲೇಶಪುರ 2, ಹೊಳೆನರಸೀಪುರ 2, ಅರಕಲಗೂಡು 1, ಅರಸೀಕೆರೆ 3, ಚನ್ನರಾಯಪಟ್ಟಣ 4, ಬೇಲೂರು 1 ಚಿತ್ರಮಂದಿರಗಳು ಇವೆ. ಏಳು ತಿಂಗಳಿನಿಂದ ಬಾಗಿಲು ಮುಚ್ಚಿರುವ ಈ ಚಿತ್ರ ಮಂದಿರಗಳ ಪರದೆ ಸರಿಸಲು ಮಾಲೀಕರು ಹಿಂದೇಟು ಹಾಕಿದ್ದಾರೆ.

ಚಿತ್ರಮಂದಿರಗಳ ಒಟ್ಟು ಆಸನಗಳ ಸಂಖ್ಯೆ ಶೇಕಡಾ 50 ವೀಕ್ಷಕರಿಗಷ್ಟೇ ಪ್ರವೇಶ ನೀಡಿ, ಆಸನಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು. ಪ್ರೇಕ್ಷಕರು ಮಾಸ್ಕ್‌ ಧರಿಸಬೇಕು, ಚಿತ್ರಮಂದಿರ ಪ್ರವೇಶಿಸುವಾಗ ಸ್ಯಾನಿಟೈಸರ್‌ ಬಳಸಬೇಕು, ಸಿಬ್ಬಂದಿ ಪಿಪಿಇ ಕಿಟ್‌ ಧರಿಸಬೇಕೆಂಬ ಷರತ್ತು ವಿಧಿಸಿ ಸರ್ಕಾರ ಅನುಮತಿ ನೀಡಿದೆ.

ಲಾಕ್‌ಡೌನ್‌ ಆರಂಭದ ಮೂರು ತಿಂಗಳು ಪೂರ್ಣ ತಿಂಗಳು ಪೂರ್ಣ ವೇತನ, ನಂತರದ ಎರಡು ತಿಂಗಳು ಅರ್ಧದಷ್ಟು ವೇತನ ಪಡೆದ ಚಿತ್ರಮಂದಿರ ಸಿಬ್ಬಂದಿ, ಈಗ ಕೆಲಸ ಇಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ನಿಯಮಗಳ ಪಾಲನೆ ಮಾಡಿ ನಷ್ಟದಲ್ಲಿ ಚಿತ್ರ ಪ್ರದರ್ಶನ ಮಾಡಲು ಹಾಗೂ ವಿತರಕರು ವಿಧಿಸಿರುವ ಎನ್‌ಆರ್‌ಟಿ ಪಾವತಿಸಿ ಚಿತ್ರಮಂದಿರಗಳ ಮಾಲೀಕರು ಚಿತ್ರಗಳ ಪ್ರದರ್ಶನಕ್ಕೆ ಸಿದ್ಧರಿಲ್ಲ.

ಟಿಕೆಟ್‌ ಮಾರಾಟದ ಲೆಕ್ಕ ಆಧರಿಸಿ ಹಂಚಿಕೆ ಮಾಡಿಕೊಳ್ಳುವ ಪದ್ಧತಿಯ ಬದಲು ಹಿಂದಿನಂತೆ ಬಾಡಿಗೆ ಪದ್ಧತಿ ಆಧರಿಸಿ ಚಿತ್ರಗಳ ಪ್ರದರ್ಶನವಾಗಬೇಕು. ಎನ್‌ಆರ್‌ಐಯಿಂದ ನಷ್ಟ ಅನುಭವಿಸಬೇಕಾಗಿದೆ ಎಂಬುದು ಮಂದಿರಗಳ ಮಾಲೀಕರ ವಾದ.

‘ಚಿತ್ರಮಂದಿರದ ಸ್ವಚ್ಛತಾ ಕೆಲಸ ವಾರಕ್ಕೊಮ್ಮೆ ಮಾತ್ರ ನಡೆಯುತ್ತಿದೆ. ವಿದ್ಯುತ್‌ ಬಿಲ್‌ ಪಾವತಿಯ ಆತಂಕವೂ ಇಲ್ಲ. ಹಾಗಾಗಿ ಶೇಕಡಾ 100 ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಹಾಗೂ ಎನ್‌ಆರ್‌ಐ ವಿವಾದ ಇತ್ಯರ್ಥವಾಗುವವರೆಗೂ ಚಿತ್ರ ಪ್ರದರ್ಶನ ಬೇಡ’ ಎನ್ನುತ್ತಾರೆ ಕೆಲ ಚಿತ್ರಮಂದಿರಗಳ ಮಾಲೀಕರು.

‘ಸರ್ಕಾರ ಶೇಕಡಾ 50 ಪ್ರೇಕ್ಷಕರಿಗೆ ಮಾತ್ರ ಚಿತ್ರಮಂದಿರಕ್ಕೆ ಪ್ರವೇಶ ನಿಗದಿಪಡಿಸಿರುವುದರಿಂದ ಮಾಲೀಕರು ನಷ್ಟ ಅನುಭವಿಸಬೇಕಾಗುತ್ತದೆ. ಶೇಕಡಾ 50 ಅಥವಾ ಶೇಕಡಾ 100 ಪ್ರೇಕ್ಷಕರು ಬಂದರೂ ವಿದ್ಯುತ್‌ ಶುಲ್ಕ, ಕಾರ್ಮಿಕರ ವೇತನದಲ್ಲಿ ವ್ಯತ್ಯಾಸವಾಗಲ್ಲ. ಚಿತ್ರಮಂದಿರ ತೆರೆದರೂ ಪ್ರೇಕ್ಷಕರು ಬರುತ್ತಾರೆಂಬ ನಂಬಿಕೆಯೂ ಇಲ್ಲ. ಚಿತ್ರ ನಿರ್ಮಾಪಕರೂ ಬೃಹತ್‌ ಬಜೆಟ್‌ ಸಿನಿಮಾ ಪ್ರದರ್ಶನಕ್ಕೆ ಸಿದ್ಧರಿಲ್ಲ. ಈ ಎಲ್ಲ ವಿಷಯಗಳು ಇತ್ಯರ್ಥವಾದರೆ ನ.1ರಿಂದ
ಚಿತ್ರಗಳ ಪ್ರದರ್ಶನ ಸಾಧ್ಯವಾಗಬಹುದು’ ಎನ್ನುತ್ತಾರೆ ಎಸ್‌ಬಿಜಿ ಚಿತ್ರಮಂದಿರ ವ್ಯವಸ್ಥಾಪಕ ಕಾಂತರಾಜ್‌.

‘ಚಿತ್ರಮಂದಿರಗಳ ಬಾಡಿಗೆ ವ್ಯವಸ್ಥೆ ಜಾರಿಯಾಗಬೇಕು. ಎನ್‌ಆರ್‌ಐ ವ್ಯವಸ್ಥೆ ರದ್ದಾಗಬೇಕು ಎಂಬುದು ಬೇಡಿಕೆ. ಹಾಗಾಗಿ ಈ ವಿಷಯ ಚಿತ್ರ ಪ್ರದರ್ಶಕರ ಸಂಘದಲ್ಲಿಯೇ ತೀರ್ಮಾನವಾಗಬೇಕು. ಇದು ಇತ್ಯರ್ಥವಾಗದಿದ್ದರೆ ಆರು ತಿಂಗಳಾದರೂ ಚಿತ್ರ ಪ್ರದರ್ಶನ ನಡೆಯಲ್ಲ’ಎಂದು ಚನ್ನರಾಯಪಟ್ಟಣ ಧನಲಕ್ಷ್ಮಿ ಚಿತ್ರಮಂದಿರ ಮಾಲೀಕ ಕೃಷ್ಣಪ್ಪ ತಿಳಿಸಿದರು.

‘ಚಿತ್ರ ಪ್ರದರ್ಶನ ಮಾಡುವ ಕುರಿತು ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಗುರು ಥಿಯೇಟರ್‌ ಸೂಪರ್‌ ವೈಸರ್‌ ಸ್ವಾಮಿ ಹೇಳಿದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು