ಸೋಮವಾರ, ನವೆಂಬರ್ 18, 2019
24 °C
184 ಗ್ರಾಂ ಚಿನ್ನ, 2 ಕೆ.ಜಿ. ಬೆಳ್ಳಿ ಸೇರಿ ₹ 8,74 ಲಕ್ಷ ಬೆಲೆಯ ಆಭರಣ ವಶ

ಹಾಸನ: ಕುಖ್ಯಾತ ಮನೆಗಳ್ಳನ ಬಂಧನ

Published:
Updated:
Prajavani

ಹಾಸನ: ಜಿಲ್ಲೆಯ ವಿವಿಧೆಡೆ ಮನೆಗಳ್ಳತನ ಹಾಗೂ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಬಂಧಿಸುವಲ್ಲಿ ಬಂಧಿಸುವಲ್ಲಿ ಹೊಳೆನರಸೀಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೊಳೆನರಸೀಪುರ ತಾಲ್ಲೂಕಿನ ದೊಡ್ಡ ಕುಂಚೇವು ಗ್ರಾಮದ ಸತೀಶ ಅಲಿಯಾಸ್ ಸತ್ತಿ ಬಂಧಿತ ಆರೋಪಿ. ಬಾರ್‌ ಬೆಂಡಿಂಗ್‌ ಕೆಲಸ ಮಾಡಿಕೊಂಡಿರುವ ಈತನ ವಿರುದ್ಧ ಈಗಾಗಲೇ ಒಟ್ಟು 24 ಪ್ರಕರಣ ದಾಖಲಾಗಿವೆ. ಹೊಳೆನರಸೀಪುರ ನಗರ, ಗ್ರಾಮಾಂತರ ಮತ್ತು ಚನ್ನರಾಯಪಟ್ಟಣ ನಗರ ಠಾಣೆ ವ್ಯಾಪ್ತಿಯಲ್ಲಿ 8 ಪ್ರಕರಣ ಪತ್ತೆಯಾಗಿವೆ. ಅಷ್ಟೇ ಅಲ್ಲ ಆರೋಪಿ ವಿರುದ್ಧ ಪ್ರಸ್ತುತ 24 ದಸ್ತಗಿರಿ ವಾರಂಟ್ ಜಾರಿಯಾಗಿವೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಪಟ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಒಟ್ಟು 8 ಪ್ರಕರಣಗಳಲ್ಲಿ 184 ಗ್ರಾಂ ಚಿನ್ನ ಮತ್ತು 2 ಕೆ.ಜಿ. ಬೆಳ್ಳಿ ಸೇರಿ ಒಟ್ಟು ₹ 8,74 ಲಕ್ಷ ಬೆಲೆಯ ಚಿನ್ನಾಭರಣ ಪಡಿಸಿಕೊಳ್ಳಲಾಗಿದೆ. ಹಗಲು ವೇಳೆ ಮನೆಗಳನ್ನು ನೋಡಿಕೊಂಡು ಬಂದು, ರಾತ್ರಿ ಮನೆಯ ಹಿಂಬಾಗಿಲ ಬೀಗ ಮುರಿದು ಕಳವು ಮಾಡುತ್ತಿದ್ದ ಎಂದು ವಿವರಿಸಿದರು.

ಹೊಳೆನರಸೀಪುರ ಪಟ್ಟಣದಲ್ಲಿ ಫೆ. 24 ರಂದು ಮನೆ ಕಳವು ಪ್ರಕರಣ ನಡೆದಿತ್ತು. ಪ್ರಭಾಕರ್ ಎಂಬುವರ ಮನೆಯಲ್ಲಿ 21 ಗ್ರಾಂ ಚಿನ್ನ ಮತ್ತು 315 ಗ್ರಾಂ ತೂಕದ ಬೆಳ್ಳಿ ಸೇರಿ ಒಟ್ಟು ₹99 ಸಾವಿರ ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದವು. ಆರೋಪಿಗಳ ಪತ್ತೆಗಾಗಿ ಡಿವೈಎಸ್ಪಿ ಬಿ.ಬಿ.ಲಕ್ಷ್ಮೇಗೌಡ, ಸಿಪಿಐ, ಅಶೋಕ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತನಿಖೆ ಮುಂದುವರಿಸಿದ್ದ ತಂಡ ಅ.18 ರಂದು ಅಗ್ರಹಾರ ಗೇಟಿನಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

ಪ್ರಕರಣ ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಗ್ರಾಮಾಂತರ ಠಾಣೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಮೋಹನ ಕೃಷ್ಣ, ನಗರ ಪೊಲೀಸ್ ಠಾಣೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಕುಮಾರ್, ಹಾಸನ ಬಡಾವಣೆ ಠಾಣೆ ಎಸ್‌ಐ ವಿನೋದ್‌ ರಾಜ್‌, ಸಿಬ್ಬಂದಿಗೆ ಬಹುಮಾನ ಘೋಷಿಸಲಾಗಿದೆ ಎಂದು ನುಡಿದರು.

ಪ್ರತಿಕ್ರಿಯಿಸಿ (+)