ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಸೌಕರ್ಯಗಳೇ ಇಲ್ಲದ ಸಂತೆ ಮಾರುಕಟ್ಟೆಗಳು

ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್‌ನಂತಹ ವ್ಯವಸ್ಥೆಯ ಕೊರತೆ; ವ್ಯಾಪಾರಿಗಳು, ಗ್ರಾಹಕರ ಪರದಾಟ
Last Updated 5 ಡಿಸೆಂಬರ್ 2022, 4:33 IST
ಅಕ್ಷರ ಗಾತ್ರ

ಹಾಸನ: ಜಿಲ್ಲಾ ಕೇಂದ್ರವಾಗಿರುವ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸಂತೆ ಮಾರುಕಟ್ಟೆಗಳಿಗೆ ವ್ಯವಸ್ಥೆಗಳು ಇಲ್ಲದೇ ಇರುವುದರಿಂದ ಜನರು, ವ್ಯಾಪಾರಿಗಳು ತೊಂದರೆ ಅನುಭವಿಸು ವಂತಾಗಿದೆ. ಸರಿಯಾದ ಮಾರುಕಟ್ಟೆ ಶೆಡ್‌ಗಳು, ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದೇ ಸಮಸ್ಯೆ ಹೆಚ್ಚಾಗುತ್ತಿದೆ.

ಹಾಸನದಲ್ಲಿ ಮಂಗಳವಾರ ನಡೆಯುವ ಸಂತೆಯ ಮರುದಿನ ಇಡೀ ರಸ್ತೆಯೇ ಕಸದ ಗೂಡಾಗಿ ಪರಿಣಮಿ ಸುತ್ತದೆ. ಜನರಿಗೆ ನೇರವಾಗಿ ರೈತರಿಂದ ತರಕಾರಿಗಳು ದೊರೆಯುತ್ತಿದ್ದರೂ, ಮರುದಿನ ಅದನ್ನು ಸ್ವಚ್ಛ ಮಾಡುವುದೇ ಹರಸಾಹಸ ಆಗಿದೆ. ಇನ್ನೊಂದೆಡೆ ಸಾಲಗಾಮೆ ರಸ್ತೆಯಲ್ಲಿಯೇ ಸಂತೆ ನಡೆಯುತ್ತಿದ್ದು, ವಾಹನಗಳ ಓಡಾಟಕ್ಕೂ ತೊಂದರೆ ಉಂಟಾಗಿದೆ.

ಹಳೇಬೀಡಿನ ಸಂತೆ ಮೈದಾನದಲ್ಲಿ ಮೂರು ಕಡೆ ವ್ಯಾಪಾರದ ಶೆಲ್ಟರ್ ಮಾಡಲಾಗಿದೆ. ಸಂತೆ ಇಲ್ಲದ ದಿನ ಶೆಲ್ಟರ್‌ನಲ್ಲಿ ಅಲೆಮಾರಿಗಳು ವಾಸ ಮಾಡುತ್ತಾರೆ. ಗಲೀಜು ಮಾಡುವು ದರಿಂದ ಸಂತೆ ದಿನ ಸರಕು ಜೋಡಿಸಿ ಕೊಂಡು ವ್ಯಾಪಾರ ಮಾಡಲು ತೊಂದರೆ ಯಾಗುತ್ತದೆ ಎನ್ನುತ್ತಾರೆ ಇಲ್ಲಿನ ವರ್ತಕರು.

12ಕ್ಕೂ ಹೆಚ್ಚು ವ್ಯಾಪಾರದ ಕಟ್ಟೆಗಳಿಗೆ ಚಾವಣಿ ಇಲ್ಲ. ಇಲ್ಲಿ ವ್ಯಾಪಾರ ಮಾಡುವ ತಿಂಡಿ ತಿನಿಸು, ಬಟ್ಟೆ, ದಿನಸಿ ವರ್ತಕರು ಗುಡಾರ ಕಟ್ಟಿಕೊಂಡು ವ್ಯಾಪಾರ ಮಾಡುವಂತಾಗಿದೆ. ಈ ಸ್ಥಳದಲ್ಲಿ ಅಂಗಡಿ ಜೋಡಿಸುವವರು ಮಳೆ ಬಂದಾಗ ಪಡಬಾರದ ಕಷ್ಟ ಅನುಭವಿಸುವಂತಾಗಿದೆ.

ಸಂತೆ ಮುಗಿದ ನಂತರ ಕಸ ಗುಡಿಸುವ ವ್ಯವಸ್ಥೆ ಇಲ್ಲದೆ ಇರುವುದ ರಿಂದ ಮೈದಾನದಲ್ಲಿ ಕಸ ಹರಡಿರುತ್ತದೆ. ಆಗಾಗ್ಗೆ ಗ್ರಾಮ ಪಂಚಾಯಿತಿಯಿಂದ ಗಿಡಗಂಟಿ ತೆರವು ಮಾಡುತ್ತಾರೆ. ಸಂತೆಯ ದಿನ ಮಂಗಳವಾರ
ಮೈದಾನ ಸ್ವಚ್ಛ ಮಾಡುವ ವ್ಯವಸ್ಥೆ ಆಗಬೇಕಾಗಿದೆ ಎನ್ನುವುದು ವರ್ತಕರ ಒತ್ತಾಯ.

ಮಳೆಗಾಲದಲ್ಲಿ ಸಂತೆ ಮೈದಾನ ಕೆಸರುಗದ್ದೆಯಂತಾಗುತ್ತದೆ. ಮೈದಾನ ದಲ್ಲಿ ಕಾಲಿಡಲು ಜಾಗ ಇಲ್ಲದಂತೆ ಕೆಸರಿನ ರಾಡಿ ಹರಡುವುದರಿಂದ ಗ್ರಾಹಕರು ಮೈದಾನಕ್ಕೆ ಬರಲು ಹಿಂದೆ ಸರಿಯುತ್ತಾರೆ. ಈ ಸಂದರ್ಭದಲ್ಲಿ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ. ಸಂತೆ ಮೈದಾನದ ರಸ್ತೆಗಳಿಗೆ ಕಾಂಕ್ರೀಟ್ ಹಾಕಿಸಬೇಕು ಎಂಬುದು ರೈತರು ಹಾಗೂ ವ್ಯಾಪಾರಗಳ ಬೇಡಿಕೆಯಾಗಿದೆ.

ಸಂತೆ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ದ್ವಾರಸಮುದ್ರ ಕೆರೆ ಕೋಡಿ ತಿರುವಿನಲ್ಲಿಯೂ ಅಂಗಡಿ ಜೋಡಿಸುವುದರಿಂದ ವಾಹನ ಸಂಚಾರಕ್ಕೆ ತೊಡಕಾಗುತ್ತದೆ. ವಾರದ ಸಂತೆಯ ದಿನವಾದ ಬುಧವಾರ ಈ ಸ್ಥಳದಲ್ಲಿ ವಾಹನ ದಟ್ಟಣೆ ಉಂಟಾಗು
ವುದು ಮಾಮೂಲಿ ಯಾಗಿದೆ. ಎಲ್ಲ ವರ್ತಕರು ಮೈದಾನ ದಲ್ಲೇ ವ್ಯಾಪಾರ ಮಾಡುವ ವ್ಯವಸ್ಥೆ ಆಗಬೇಕಾಗಿದೆ ಎಂಬ ಮಾತು ಸ್ಥಳೀಯ ರಿಂದ ಕೇಳಿ ಬರುತ್ತಿದೆ.

ಜಾವಗಲ್‌ನಲ್ಲಿ ಭಾನುವಾರ ನಡೆಯುವ ವಾರದ ಸಂತೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಸಂತೆ ಮೈದಾನದಲ್ಲಿ ಕುಡಿಯುವ ನೀರು, ಶೌಚಾಲಯ, ಸಂತೆ ಕಟ್ಟೆ ಮೇಲೆ ನೆರಳಿನ ಶಾಶ್ವತ ವ್ಯವಸ್ಥೆ ಇಲ್ಲದಿರುವುದರಿಂದ ಹಲವು ವರ್ತಕರು ಬಿಸಿಲಿನಲ್ಲಿ ಛತ್ರಿಗಳನ್ನು ಹಿಡಿದು ವ್ಯಾಪಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ಸಂತೆ ಮೈದಾನವು ವಿಶಾಲ ವಾದ ವಿಸ್ತೀರ್ಣವನ್ನು ಹೊಂದಿದ್ದು, ಅದಕ್ಕೆ ತಕ್ಕಂತೆ ಸಂತೆ ಕಟ್ಟೆಯನ್ನು ನಿರ್ಮಿಸದಿರುವುದರಿಂದ ವರ್ತಕರು ಸರ್ಕಾರಿ ಆಸ್ಪತ್ರೆಯ ರಸ್ತೆ ಹಾಗೂ ಪೊಲೀಸ್ ಠಾಣೆಯ ರಸ್ತೆ ಮೂಲಕ ಸಂತೆಗೆ ಸಂಪರ್ಕಿಸುವ ರಸ್ತೆಯ ಎರಡು ಬದಿಗಳಲ್ಲಿ ವ್ಯಾಪಾರ ನಡೆಸುತ್ತಿದ್ದು, ವಾರದ ಸಂತೆ ದಿನ ವಾಹನ ಸವಾರರು ಈ ರಸ್ತೆಗಳಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿದೆ.

ಇನ್ನು ಸರ್ಕಾರಿ ಆಸ್ಪತ್ರೆಯ ಬಳಿಯೇ ಮೀನು ಮಾರಾಟ ಮಾಡಲಾಗುತ್ತಿದ್ದು, ಸಂತೆ ಮುಗಿದ ಬಳಿಕ ಮೀನಿನ ತ್ಯಾಜ್ಯವನ್ನು ಸ್ವಚ್ಛಗೊಳಿಸಿದರೂ ಕೆಟ್ಟ ವಾಸನೆ ಮಾತ್ರ ಕೆಲ ದಿನಗಳವರೆಗೂ ಬಡಿಯುತ್ತದೆ.

ಆಲೂರು ತಾಲ್ಲೂಕು ಕೇಂದ್ರದಲ್ಲಿ ವಾರದ ಸಂತೆ ಬುಧವಾರ ನಡೆಯುತ್ತದೆ. ಆದರೆ, ಈವರೆಗೂ ಸಂತೆ ನಡೆಸಲು ಸುಸಜ್ಜಿತ ಜಾಗವನ್ನು ಗುರುತಿಸಲು ಪಟ್ಟಣ ಪಂಚಾಯಿತಿ ವಿಫಲವಾಗಿದೆ.

ಕೋವಿಡ್ ಸಂದರ್ಭ ವಾಟೆಹೊಳೆ ಡಕ್ ಪ್ರದೇಶದಲ್ಲಿ ಸಂತೆ ನಡೆಯಿತಾದರೂ ಮೂಲ ಸೌಕರ್ಯ ಗಳಿಲ್ಲದೆ ಮಾರಾಟಗಾರರು, ಗ್ರಾಹಕರು ಇನ್ನಿಲ್ಲದ ತೊಂದರೆ ಅನುಭವಿಸ ಬೇಕಾಯಿತು. ಸದ್ಯ ತಾಲ್ಲೂಕು ಆಸ್ಪತ್ರೆ ಎದುರು ರಸ್ತೆಯಂಚಿನಲ್ಲಿ ಸಂತೆ ನಡೆಯುತ್ತಿದ್ದು, ಜನದಟ್ಟಣೆ ಅಧಿಕ ವಾಗಿದೆ. ವಾಹನಗಳ ಸಂಚಾರಕ್ಕೆ ತೊಡಕಾಗಿದೆ. ಶೌಚಾಲಯ ತೊಂದರೆ ಯಾಗಿದೆ.

ಚನ್ನರಾಯಪಟ್ಟಣದ ಹೃದಯ ಭಾಗದಲ್ಲಿ ವಾರದ ಸಂತೆ ಶನಿವಾರ ನಡೆಯುತ್ತದೆ. ಈ ವೇಳೆ ರಸ್ತೆ ಇಕ್ಕೆಲಗಳಲ್ಲಿ ವ್ಯಾಪಾರ ಮಾಡುವುದ ರಿಂದ ವಾಹನಗಳು, ಜನರ ಸಂಚಾರಕ್ಕೆ ತೊಂದರೆ ಆಗುತ್ತದೆ. ಹಾಸನದಲ್ಲಿ ಐದು ಕಡೆ ವಾರದ ಸಂತೆ ನಡೆಯುತ್ತದೆ. ಚನ್ನರಾಯಪಟ್ಟಣದಲ್ಲಿ ಇನ್ನೊಂದು ಭಾಗದಲ್ಲಿ ಸಂತೆ ಮಾಡುವುದು ಒಳಿತು ಎನ್ನುತ್ತಾರೆ ಜನತೆ.

ಹೆಚ್ಚುವ ಸಂಚಾರ ದಟ್ಟಣೆ

ಅರಸೀಕೆರೆಯ ಸಾಯಿನಾಥ ರಸ್ತೆ ಸಂತೆ ಮೈದಾನದಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದು, ಸಂತೆಯಲ್ಲಿ ವ್ಯಾಪಾರಸ್ಥರು, ಗ್ರಾಹಕರಿಗೆ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಇದೆ. ಸ್ವಚ್ಛತೆ ಇಲ್ಲದ ಕಾರಣ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.

ಹಿಂದೆ ಸ್ಥಳ ಇದ್ದುದರಿಂದ ಯಾವುದೇ ಆತಂಕ ಇಲ್ಲದೇ ಸಂತೆ ನಡೆಯುತ್ತಿತ್ತು. ಈಗ ಸಂತೆ ಮೈದಾನದಲ್ಲಿ ತರಕಾರಿ ಮಾರುಕಟ್ಟೆ ಮಳಿಗೆ ನಿರ್ಮಾಣ ಮಾಡಿರುವುದರಿಂದ ಸಮರ್ಪಕ ಸ್ಥಳಾವಕಾಶವಿಲ್ಲದೇ ಪರದಾಡುವ ಪರಿಸ್ಥಿತಿ ಇದೆ.

ರಸ್ತೆಯ ಇಕ್ಕೆಲಗಳಲ್ಲಿ ಸಂತೆ ನಡೆಯುತ್ತಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಜತೆಗೆ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವಿಲ್ಲದೇ ರಸ್ತೆಯಲ್ಲೇ ವಾಹನ ನಿಲ್ಲಿಸುವಂತಾಗಿದೆ.

ಪ್ರತಿ ಶುಕ್ರವಾರ ನಗರದಲ್ಲಿ ನಡೆಯುವ ವಾರದ ಸಂತೆ ದಿನ ಸಂತೆ ಮೈದಾನದ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಆದರೂ ನಗರಸಭೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಜನರು ದೂರುತ್ತಿದ್ದಾರೆ.

***

ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಎಚ್‌.ಎಸ್‌. ಅನಿಲ್‌ಕುಮಾರ್, ಎಂ.ಪಿ. ಹರೀಶ್‌, ಸಿದ್ದರಾಜು, ಜೆ.ಎನ್. ರಂಗನಾಥ್, ದೀಪಕ್‌ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT