ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೀತಂರಿಂದ ಮೈತ್ರಿ ಧರ್ಮದ ಪಾಠ ಕಲಿಯಬೇಕಿಲ್ಲ: ಎಸ್‌.ದ್ಯಾವೇಗೌಡ ವಾಗ್ದಾಳಿ

Published : 24 ಆಗಸ್ಟ್ 2024, 14:10 IST
Last Updated : 24 ಆಗಸ್ಟ್ 2024, 14:10 IST
ಫಾಲೋ ಮಾಡಿ
Comments

ಹಾಸನ: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆ ಮಾಡದ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಅವರಿಂದ ನಾವು ಮೈತ್ರಿ ಧರ್ಮದ ಪಾಠ ಕಲಿಯಬೇಕಿಲ್ಲ ಎಂದು ಜೆಡಿಎಸ್ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ದ್ಯಾವೇಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿ ಧರ್ಮ ಪಾಲಿಸಲಿಲ್ಲ ಎಂಬ ಬಿಜೆಪಿ ಮುಖಂಡರ ಆರೋಪ ಸರಿಯಲ್ಲ ಎಂದರು.

ಲೋಕಸಭೆ ಚುನಾವಣೆಯಲ್ಲಿ ಪ್ರೀತಂಗೌಡ ಹಾಗೂ ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮೈತ್ರಿಧರ್ಮ ಪಾಲನೆ ಮಾಡಲಿಲ್ಲ. ಕಾಂಗ್ರೆಸ್‌ಗೆ ಮತ ಹಾಕಿ ಎಂದು ನೇರವಾಗಿಯೇ ತಮ್ಮ ಬೆಂಬಲಿಗರಿಗೆ ಹೇಳಿದ್ದರು. ಅವರ ಬೆಂಬಲಿಗರು ಕಾಂಗ್ರೆಸ್ ಪರವಾಗಿಯೇ ಪ್ರಚಾರ ನಡೆಸಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗ ಹಾಸನ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಮಾಡುವುದಾದರೂ, ಸಂಸದ ಶ್ರೇಯಸ್ ಪಟೇಲ್ ಅವರು ಕಾಂಗ್ರೆಸ್ ನಾಯಕರ ಬದಲು ಪ್ರೀತಂಗೌಡ ಅವರ ಸಲಹೆ ಪಾಲಿಸುತ್ತಾರೆ ಎಂದು ಕಾಂಗ್ರೆಸ್ಸಿಗರೇ ಹೇಳುತ್ತಿದ್ದಾರೆ. ಅವರಿಂದ ನಾವು ಮೈತ್ರಿ ಧರ್ಮ ಪಾಲನೆ ಬಗ್ಗೆ ಕಲಿಯಬೇಕಿಲ್ಲ ಎಂದರು.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನದ ಚುನಾವಣೆಯಲ್ಲಿ ನಾವು ಮೈತ್ರಿಧರ್ಮ ಪಾಲಿಸಿದ್ದೇವೆ. ಬಿಜೆಪಿಯಿಂದ ಆಯ್ಕೆಯಾಗಿರುವ ಸದಸ್ಯೆ ಲತಾದೇವಿ ಅವರನ್ನು ಉಪಾಧ್ಯಕ್ಷರಾಗಿ ಮಾಡಿದ್ದೇವೆ. ಇವರ ಅಧಿಕಾರ ಅವಧಿ ಎಷ್ಟು ದಿನ ಮುಂದುವರಿಯಲಿದೆ ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.

ಸದಸ್ಯ ಕ್ರಾಂತಿ ಮಾತನಾಡಿ, ಸ್ವರೂಪ್ ಅವರನ್ನು ಸಾಂದರ್ಭಿಕ ಶಾಸಕ ಎಂದು ಪ್ರೀತಂಗೌಡ ಜರಿದಿದ್ದಾರೆ. ಆದರೆ ಸ್ವರೂಪ್ ಅವರು ಜಿಲ್ಲಾ ಪಂಚಾಯತಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ನಂತರ ಶಾಸಕರಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಪ್ರೀತಂಗೌಡ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೇ ಆಕಸ್ಮಿಕ ಶಾಸಕರಾಗಿ ಬಂದವರು ಎಂಬುದನ್ನು ಮರೆಯಬಾರದು ಎಂದರು.

ಸ್ವರೂಪ್ ಅವರ ತಂದೆ ನಾಲ್ಕು ಬಾರಿ ಶಾಸಕರಾಗಿದ್ದರು. ಅವರ ನಂತರ ಸ್ವರೂಪ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರೀತಂಗೌಡ ಅವರು ಶಾಸಕರಾಗಿ ನಗರದಲ್ಲಿ ಯಾವುದೇ ಗುರುತರ ಕೆಲಸ ಮಾಡಿಲ್ಲ. ಕೇವಲ ನಗರದಾದ್ಯಂತ ಬಾರ್ ತೆರೆದಿದ್ದೆ ಅವರ ಸಾಧನೆಯಾಗಿದೆ ಎಂದು ಟೀಕಿಸಿದರು.

ಒಡೆದು ಆಳುವ ನೀತಿ ಹೊಂದಿರುವ ಪ್ರೀತಂಗೌಡ, ಪತ್ರಿಕಾಗೋಷ್ಠಿಯಲ್ಲಿ ಹೇಳುವುದು ಒಂದು, ಮಾಡುವುದು ಇನ್ನೊಂದು. ಹಾಸನದಲ್ಲಿ ಮೈತ್ರಿ ಸಂಬಂಧಿಸಿದಂತೆ ಜೆಡಿಎಸ್ ನಾಯಕರೊಂದಿಗೆ ಸರಿಯಾದ ಮತುಕತೆ ನಡೆಸಿಲ್ಲ. ಕೇವಲ ಮಾಧ್ಯಮದಲ್ಲಿ ಹೇಳಿಕೆಯಷ್ಟೇ ನೀಡಿದ್ದಾರೆ ಎಂದು ತಿರುಗೇಟು ನೀಡಿದರು.

ಜೆಡಿಎಸ್‌ ಜಿಲ್ಲಾ ವಕ್ತಾರ ಹೊಂಗೆರೆ ರಘು, ಮಾಜಿ ಅಧ್ಯಕ್ಷ ಸೈಯದ್ ಅಕ್ಟರ್, ಮುಖಂಡ ಜಯರಾಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT