ಭಾನುವಾರ, ಅಕ್ಟೋಬರ್ 20, 2019
22 °C
ರಜತ ತುಲಾಭಾರ, ಬೆಳದಿಂಗಳೋತ್ಸವ, ಮಹಿಳಾ ಸಮಾವೇಶ ಆಯೋಜನೆ

ತಿಂಗಳ ಮಾಮನ ತೇರಿನ ಅಮೃತ ಹುಣ್ಣಿಮೆ

Published:
Updated:
Prajavani

ಹಾಸನ: ಆದಿಚುಂಚನಗಿರಿ ಮಠದ ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಸಂಸ್ಮರಣೋತ್ಸವ ಹಾಗೂ ಗುರು ತೋರಿದ ದಾರಿ–ತಿಂಗಳ ಮಾಮನ ತೇರಿನ 75ನೇ ಅಮೃತ ಹುಣ್ಣಿಮೆಯ ಆರನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಅ.13 ರಿಂದ 15ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶಾಖಾ ಮಠದ ಶುಂಭುನಾಥ ಸ್ವಾಮೀಜಿ ಹೇಳಿದರು.

ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ನಾಥ ಸ್ವಾಮೀಜಿ ಅವರ ಗುರುವಂದನಾ ಕಾರ್ಯಕ್ರಮ, ರಜತ ತುಲಾಭಾರ, ಬೆಳದಂಗಳೋತ್ಸವ ಮತ್ತು ರಾಜ್ಯ ಮಟ್ಟದ ಮಹಿಳಾ ಸಮಾವೇಶವನ್ನು ಬೇಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದೆ. 13ರಂದು ಸಂಜೆ ಸ್ವಾಮೀಜಿ ಅವರನ್ನು ಬೇಲೂರು ಗಡಿ ಬಳಿ ಯುವಕರು ಬೈಕ್‌ ರ್‍ಯಾಲಿ ಮೂಲಕ ಬರಮಾಡಿಕೊಳ್ಳುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚನ್ನಕೇಶವ ಸ್ವಾಮಿ ದರ್ಶನ ಪಡೆದು, ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾರ್ಲಾಪಣೆ ಅರ್ಪಿಸಲಾಗುತ್ತದೆ. ನಂತರ ಸಭಾಮಂಟಪದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುವ ಹೋಮ–ಹವನ ಮತ್ತು ಪೂರ್ಣಾಹುತಿಯಲ್ಲಿ ಸ್ವಾಮೀಜಿ ಭಾಗವಹಿಸುವರು ಎಂದರು.

14ರಂದು ಬೆಳಗ್ಗೆ 9 ಗಂಟೆಗೆ ಸ್ವಾಮೀಜಿ ಅವರ ಮುತ್ತಿನ ಪಲ್ಲಕ್ಕಿ ಉತ್ಸವ ಪಟ್ಟಣದ ಚನ್ನಕೇಶವ ಸ್ವಾಮಿ ದೇವಸ್ಥಾನದ ಮುಂಭಾಗದಿಂದ 1008 ಪೂರ್ಣಕುಂಭ ಸ್ವಾಗತ ಹಾಗೂ ಕಲಾತಂಡಗಳೊಂದಿಗೆ ಮುಖ್ಯ ರಸ್ತೆ ಮೂಲಕ ಸಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣ ತಲುಪಲಿದೆ. ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ. ಸ್ವಾಮೀಜಿಗೆ ಗುರುವಂದನೆ, ರಜತ ತುಲಾಭಾರ ಮತ್ತು ಪುಷ್ಪವೃಷ್ಟಿ ನೆರವೇರಲಿದೆ ಎಂದು ವಿವರಿಸಿದರು.

15ರಂದು ಬೆಳಗ್ಗೆ 10.30ಕ್ಕೆ ರಾಜ್ಯ ಮಟ್ಟದ ಮಹಿಳಾ ಸಮಾವೇಶ ನಡೆಯಲಿದ್ದು, ನಾಡಿನ ಹೆಸರಾಂತ ಸಾಹಿತಿಗಳು, ಕವಿಗಳು, ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಲಾಗುವುದು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ವಿವಿಧ ಭಾಗಗಳಿಂದ ಧರ್ಮಗುರುಗಳು ಬರುತ್ತಿದ್ದು, 15 ರಿಂದ 20 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾರ್ಯಕ್ರಮದ ಅಂಗವಾಗಿ ಬಾಲಗಂಗಾಧರನಾಥ ಸ್ವಾಮೀಜಿ ಅವರ ರಥಯಾತ್ರೆಯು ಹೋಬಳಿಗಳಲ್ಲಿ ಸಂಚರಿಸಿದೆ ಎಂದು ನುಡಿದರು.

Post Comments (+)