ಶುಕ್ರವಾರ, ಡಿಸೆಂಬರ್ 4, 2020
22 °C
ಆತಂಕದಲ್ಲಿ ಕುರಿಗಾಹಿಗಳು, ಕೃಷಿಕರು

ಮೂರು ಚಿರತೆ ದಾಳಿ: 6 ಆಡು ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರವಣಬೆಳಗೊಳ: ಇಲ್ಲಿಯ ವಿಂಧ್ಯಗಿರಿ ಬಾಹುಬಲಿ ಬೆಟ್ಟದ ಪಶ್ಚಿಮ ಭಾಗದಲ್ಲಿ ಮೇಯುತ್ತಿದ್ದ ಆಡುಗಳ ಮೇಲೆ ಭಾನುವಾರ ಸಂಜೆ ವೇಳೆಯಲ್ಲಿಯೇ ಚಿರತೆಗಳು ಹಠಾತ್‌ ದಾಳಿ ಮಾಡಿ 6 ಆಡುಗಳನ್ನು ಕೊಂದು ಹಾಕಿವೆ.

ಆಡುಗಳೊಂದಿಗೆ ಬೆಟ್ಟದ ತಪ್ಪಲಿನಲ್ಲಿ ಮೇಯಿಸಲು ಎಂದಿನಂತೆ ತೆರಳಿದ್ದ ನಾಗಯ್ಯನಕೊಪ್ಪಲಿನ ಕುರಿಗಾಹಿ ಶಿವಣ್ಣ ಮತ್ತು ಆನಂದರು ನೋಡು ನೋಡುತ್ತಿದ್ದಂತೆ ಈಚಲು ಮರದ ಬಳಿ ಅವಿತುಕೊಂಡಿದ್ದ 3 ಚಿರತೆಗಳು ಏಕಾಏಕಿ ಆಡುಗಳ ಮೇಲೆ ದಾಳಿ ನಡೆಸಿ ಸ್ಥಳದಲ್ಲಿಯೇ 4 ಆಡುಗಳ ಕುತ್ತಿಗೆ ಮತ್ತು ಕೆಚ್ಚಲು ಭಾಗದಲ್ಲಿ ಕಚ್ಚಿ ರಕ್ತವನ್ನು ಹೀರಿ ಕೊಂದು ಹಾಕಿವೆ. ಇನ್ನುಳಿದ 2 ಆಡುಗಳನ್ನು ಹೊತ್ತುಕೊಂಡು ಹೋಗಿವೆ.

ಜೀವನಕ್ಕೆ ಆಶ್ರಯವಾಗಿದ್ದ 5 ಆಡುಗಳ ಮಾಲೀಕ ಶಿವಣ್ಣ ಮತ್ತು 1 ಹೋತದ ಮಾಲೀಕ ಆನಂದ ಗೋಳಾಡುತ್ತಾ ಓಡುತ್ತಾ ಮನೆಗೆ ಬಂದಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ನಂಜಪ್ಪ ಹೇಳಿದರು.

ಪದೇ ಪದೇ ಚಿರತೆಗಳು ಈ ಭಾಗದಲ್ಲಿ ದಾಳಿ ಮಾಡುತ್ತಿವೆ ಎಂದು ಜಮಾಯಿಸಿದ್ದ ನಾಗಯ್ಯನಕೊಪ್ಪಲುವಿನ ಜನತೆ ಶಾಶ್ವತ ಪರಿಹಾರ ಕಂಡು ಹಿಡಿಯಿರಿ ಎಂದು ಅರಣ್ಯ ಇಲಾಖೆ ಯವರ ಬಳಿ ಆತಂಕ ತೋಡಿಕೊಂಡರು.

ಚಂದ್ರಗಿರಿಯ ಚಿಕ್ಕಬೆಟ್ಟ ಮತ್ತು ವಿಂಧ್ಯಗಿರಿಯ ಬಾಹುಬಲಿ ಬೆಟ್ಟದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆ ಎಚ್ಚೆತ್ತುಕೊಂಡು 2 ಬೆಟ್ಟಗಳ ತಪ್ಪಲಿನಲ್ಲಿ ಹೆಚ್ಚು ಬೋನುಗಳನ್ನು ಇರಿಸಿ ಚಿರತೆಗಳನ್ನು ಹಿಡಿಯುವ ವ್ಯವಸ್ಥೆ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಜೆ.ರವಿ ಮತ್ತು ಕುಮಾರ್‌ ಒತ್ತಾಯಿಸಿದ್ದಾರೆ.

ಇದಕ್ಕೂ ಮುನ್ನ ವಿಷಯ ತಿಳಿದ ಪಿಎಸ್‌ಐ ಮಂಜುನಾಥ್‌ ಸ್ಥಳಕ್ಕೆ ಬಂದು ಅರಣ್ಯ ಇಲಾಖೆ ಹಾಗೂ ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ಉಪ ವಲಯ ಅರಣ್ಯಾಧಿಕಾರಿ ಆರ್‌. ವಿಶ್ವನಾಥ್‌ ಮಾತನಾಡಿ, ‘ಪಶು ವೈದ್ಯಾಧಿಕಾರಿಗಳ ಶಿಫಾರಸಿನಂತೆ ದಾಖಲಿಸಿರುವ ಆಡುಗಳಿಗೆ ಇಲಾಖೆಯ ವತಿಯಿಂದ ಧನ ಸಹಾಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.‌

ಈ ಸಮಯದಲ್ಲಿ ಆರ್‌.ಐ ಕೆ.ಪಿ.ರಮೇಶ್‌, ಎಎಸ್‌ಐಗಳಾದ ಉಮೇಶ್‌, ಬೇಲೂರಯ್ಯ, ನಾಗಯ್ಯನಕೊಪ್ಪಲು ಗ್ರಾಮಸ್ಥರು ಇದ್ದರು.

ಚಿರತೆ ಸೆರೆಗೆ ಬೋನು

ಇಲ್ಲಿಯ ವಿಂಧ್ಯಗಿರಿ ಬಾಹುಬಲಿ ಬೆಟ್ಟದ ದಕ್ಷಿಣ ಭಾಗದಲ್ಲಿ ಮತ್ತು ಚಂದ್ರಗಿರಿಯ ಚಿಕ್ಕಬೆಟ್ಟದಲ್ಲಿ ಇರುವ ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ಬೋನು ಇರಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು