ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಗ್ರಾ.ಪಂ ಅಧಿಕಾರಕ್ಕಾಗಿ ಸದಸ್ಯರಿಗೆ ಪ್ರವಾಸ

ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಆಕಾಂಕ್ಷಿಗಳ ಕಸರತ್ತು
Last Updated 28 ಜನವರಿ 2021, 19:30 IST
ಅಕ್ಷರ ಗಾತ್ರ

ಹಾಸನ: ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೆ ಅಧಿಕಾರ ಹಿಡಿಯಲು ಆಕಾಂಕ್ಷಿಗಳು ಸದಸ್ಯರನ್ನು ಪ್ರವಾಸಕ್ಕೆ ಕರೆದೊ‌ಯ್ಯುತ್ತಿದ್ದಾರೆ.

ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನ, ಕಾಮಗಾರಿಗಳ ಗುತ್ತಿಗೆ ನೀಡುವ ಭರವಸೆಯನ್ನು ರಾಜಕೀಯ ಪಕ್ಷಗಳು ನೀಡುತ್ತಿವೆ. ಹಳ್ಳಿ ರಾಜಕೀಯ ಬಿರುಸು ಗೊಂಡಿದ್ದು, ಸದಸ್ಯರಿಗೆ ಡಿಮಾಂಡ್‌ ಶುರುವಾಗಿದೆ.

ಹಲವು ಮಂದಿ ಈಗಾಗಲೇ ನಂಜನಗೂಡು, ಧರ್ಮಸ್ಥಳ, ಸುಬ್ರಹ್ಮಣ್ಯ, ಹೊರನಾಡು, ಮಂಗಳೂರು, ಶೃಂಗೇರಿ ಸೇರಿ ಹಲವು ತೀರ್ಥ ಕ್ಷೇತ್ರದ ಪ್ರವಾಸದಲ್ಲಿದ್ದಾರೆ. ಚುನಾವಣೆ ದಿನದಂದು ಕ್ಷೇತ್ರಕ್ಕೆ ಹಿಂತಿರುಗುವ ಲೆಕ್ಕಾಚಾರದಲ್ಲಿ ಇದ್ದಾರೆ.

ಜಿಲ್ಲೆಯ 267 ಗ್ರಾಮ ಪಂಚಾಯಿತಿ ಪೈಕಿ 245 ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದು, 3351 ಸದಸ್ಯರು ಆಯ್ಕೆಯಾಗಿದ್ದಾರೆ. ಹಾಸನ, ಚನ್ನರಾಯಪಟ್ಟಣ, ಬೇಲೂರು, ಹೊಳೆನರಸೀಪುರ, ಸಕಲೇಶಪುರ, ಅರಸೀಕೆರೆ, ಆಲೂರು ತಾಲ್ಲೂಕಿನ ಪಂಚಾಯಿತಿಗಳ ಮೀಸಲು ಪ್ರಕಟವಾಗಿದೆ.

ಚನ್ನರಾಯಪಟ್ಟಣ ಮತ್ತು ಹೊಳೆನರಸೀಪುರದ ಕೆಲ ಪಂಚಾಯಿತಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯೂ ನಡೆದಿದೆ. ಹಲವು ಪಂಚಾಯಿತಿಗಳಲ್ಲಿ ಚುನಾವಣೆಗೆ ಅವಕಾಶ ಇರುವ ಕಾರಣ ಆಕಾಂಕ್ಷಿಗಳು ತಮ್ಮ ಬೆಂಬಲಿತ ಸದಸ್ಯರನ್ನು ಒಟ್ಟಗೂಡಿಸಿ ಹೊರ ಜಿಲ್ಲೆ, ಹೊರ ರಾಜ್ಯದ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದಾರೆ. ಚುನಾವಣೆ ವೇಳೆ ಮತದಾರರಿಗೆ ಮದ್ಯ, ಮಾಂಸ, ಉಡುಗೊರೆ ಕೊಟ್ಟು ಗೆದ್ದ ಬಂದ ಕೆಲ ಸದಸ್ಯರನ್ನು ಹಿಡಿದಿಟ್ಟುಕೊಳ್ಳವುದೇ ಮೂರು ಪಕ್ಷದ ಮುಖಂಡರಿಗೆ ಸವಾಲಾಗಿದೆ.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಹಿಡಿಯಲು ಅಗತ್ಯವಾದಷ್ಟು ಸದಸ್ಯರನ್ನು ಒಟ್ಟುಗೂಡಿಸಿ ಪ್ರವಾಸಕ್ಕೆ ಕರೆದೊಯ್ದು ಮೊಬೈಲ್‌ ನಾಟ್‌ ರೀಚಬಲ್‌ ಮಾಡುವ ಹಾದಿಯನ್ನು ಆಕಾಂಕ್ಷಿಗಳು ಕಂಡುಕೊಂಡಿದ್ದಾರೆ.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ, ಹಿಂದುಳಿದ ವರ್ಗ ಎ, ಬಿ ಗಳಿಗೆ ಮೀಸಲು ನಿಗದಿಯಾಗಿರುವ ಪಂಚಾಯಿತಿಗಳಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. ಈ ವರ್ಗಗಳಿಂದ ಒಂದಕ್ಕಿಂತಲೂ ಹೆಚ್ಚಿನ ಸದಸ್ಯರು ಆಯ್ಕೆಯಾಗಿರುವುದು ಹಾಗೂ ಆರ್ಥಿಕವಾಗಿ ಸಲಬವಾಗಿರುವ ಸದಸ್ಯರಿರುವುದು ಇದಕ್ಕೆ ಕಾರಣವಾಗಿದೆ. ಆದರೆ, ಮೀಸಲು ನಿಗದಿಯಾಗಿರುವ ವರ್ಗದಿಂದ ಏಕೈಕ ಸದಸ್ಯರು ಆಯ್ಕೆಯಾಗಿರುವ ಪಂಚಾಯಿತಿಗಳಲ್ಲಿ ಪ್ರವಾಸದ ರಗಳೆಗೆ ಅವಕಾಶವೇ ಇಲ್ಲ.

ಜಿಲ್ಲೆಯ ಪ್ರವಾಸಿ ತಾಣಗಳಾದ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಹಾಗೂ ಸಕಲೇಶಪುರದತ್ತ ಬಂದಿರುವ ಹೊರ ಜಿಲ್ಲೆಗಳ ಪಂಚಾಯಿತಿ ಸದಸ್ಯರು, ಒಂದೊಂದು ದಿನ ಒಂದು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ಪ್ರವಾಸಿ ತಾಣಗಳಲ್ಲಿ ಲಾಡ್ಜ್‌ಗಳು ಹಾಗೂ ಹೋಂ ಸ್ಟೇರ್‌ಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಸದಸ್ಯರಿಗೆ ಅವರ ಮುಖಂಡರು ಮದ್ಯ, ಬಾಡೂಟದ ಪಾರ್ಟಿಗಳನ್ನು ಆಯೋಜಿಸುತ್ತಿದ್ದಾರೆ.

ಚುನಾವಣೆಗೆ ಮುನ್ನವೇ ಅಭ್ಯರ್ಥಿಗಳ ತಂಡ ರಚಿಸಿಕೊಂಡು ಪ್ರಚಾರ ನಡೆಸುವುದರ ಹಿಂದೆ ಆಯ್ಕೆಯಾದ ನಂತರ ಅದೇ ತಂಡದಲ್ಲಿ ಉಳಿಯಬೇಕು ಎನ್ನುವುದು ಉದ್ದೇಶವಾಗಿರುತ್ತದೆ. ಆದರೆ, ಮೀಸಲು ಘೋಷಣೆಯಾದ ಬಳಿಕ ಗುಂಪುಗಳಲ್ಲಿ ಸ್ಥಿತ್ಯಂತರ ಆರಂಭವಾಗುತ್ತದೆ. ಇಲ್ಲವೇ ಪ್ರಬಲವಾಗಿರುವ ಸದಸ್ಯರ ಒತ್ತಡ, ಆಮಿಷಗಳಿಗೆ ಒಳಗಾಗಿ ಅವರತ್ತ ವಾಲುತ್ತಾರೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT