ಅಯ್ಯಪ್ಪನ ಭಕ್ತರಿಲ್ಲದೆ ಭಣಗುಡುತ್ತಿದೆ ಹಳೇಬೀಡು

7
ಕೇರಳದ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ವಿವಾದದ ಪರಿಣಾಮ

ಅಯ್ಯಪ್ಪನ ಭಕ್ತರಿಲ್ಲದೆ ಭಣಗುಡುತ್ತಿದೆ ಹಳೇಬೀಡು

Published:
Updated:

ಹಳೇಬೀಡು: ಕೇರಳದ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ವಿವಾದದ ಪರಿಣಾಮ ಇಲ್ಲಿನ ಪ್ರವಾಸಿ ತಾಣಗಳ ಮೇಲೆ ಉಂಟಾಗಿದೆ.

ಶಬರಿಮಲೈ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕೆಲ ತಿಂಗಳಿಂದ ಅಲ್ಲಿ ಗಲಭೆಗಳು ನಡೆಯುತ್ತಲೇ ಇವೆ. ಅಲ್ಲದೇ ಕಳೆದೆರೆಡು ದಿನದ ಹಿಂದೆ ಮಹಿಳೆಯರಿಬ್ಬರು ದೇವಸ್ಥಾನ ಪ್ರವೇಶಿಸಿದ್ದರಿಂದ ಕೇರಳದಾದ್ಯಂತ ಉಗ್ರ ಪ್ರತಿಭಟನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಅಯ್ಯಪ್ಪ ವ್ರತಾಧಾರಿಗಳ ಸಂಖ್ಯೆ ಈ ವರ್ಷ ಕಡಿಮೆಯಾಗಿದೆ. ಇದರ ನೇರ ಪರಿಣಾಮ ಇಲ್ಲಿನ ಪ್ರವಾಸಿ ತಾಣಗಳ ಮೇಲೆ ಉಂಟಾಗಿದೆ.

ರಾಜ್ಯವೂ ಸೇರಿದಂತೆ ದೇಶದ ವಿವಿಧ ಭಾಗಗಳ ವ್ರತಾಧಾರಿಗಳು ಅಯ್ಯಪ್ಪನ ದರ್ಶನಕ್ಕೆ ಹೋಗುವಾಗ ಆ ಮಾರ್ಗದಲ್ಲಿ ಸಿಗುವ ದೇವಾಲಯಗಳು, ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಸಾಮಾನ್ಯ. ಅನೇಕರು ಅಯ್ಯಪ್ಪನ ದರ್ಶನದ ಬಳಿಕ ಊರಿಗೆ ಹಿಂದಿರುಗುವಾಗ ಪ್ರವಾಸ ಮಾಡುತ್ತಾರೆ. ಆಗ ಹಳೇಬೀಡಿಗೂ ಭೇಟಿ ನೀಡಿ ಹೊಯ್ಸಳೇಶ್ವರ ದೇವಾಲಯವನ್ನು ಸಂದರ್ಶಿಸುತ್ತಿದ್ದರು.

ಈ ನಿಟ್ಟಿನಲ್ಲಿ ಡಿಸೆಂಬರ್‌ ಆರಂಭ ದಿಂದ ಜನವರಿ ಅಂತ್ಯದವರೆಗೂ ಹೊಯ್ಸಳೇಶ್ವರ ದೇವಾಲಯ ಅಯ್ಯಪ್ಪ ಸ್ವಾಮಿ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಈ ವರ್ಷ ಅವರ ಸಂಖ್ಯೆ ತೀರಾ ಇಳಿಮುಖವಾಗಿರುವುದರಿಂದ ದೇವಾಲಯ ಭಣಗುಟ್ಟುತ್ತಿದೆ. ಅಲ್ಲದೇ, ಹೊಯ್ಸಳೇಶ್ವರ ದೇವಾಲಯದ ಸುತ್ತಮುತ್ತಲಿವ ವರ್ತಕರಿಗೆ ವ್ಯಾಪಾರದಲ್ಲಿ ಕುಸಿತ ಕಂಡಿದೆ.

‘ಡಿಸೆಂಬರ್‌, ಜನವರಿಯಲ್ಲಿ ತಂಡೋಪತಂಡವಾಗಿ ಅಯ್ಯಪ್ಪಸ್ವಾಮಿ ಭಕ್ತರು ಹಳೇಬೀಡಿಗೆ ಬರುತ್ತಿದ್ದರು. ಅಯ್ಯಪ್ಪ ಸ್ವಾಮಿ ಸ್ಮರಣೆ ಮಾಡುತ್ತಾ ಬಂದು ಹೊಯ್ಸಳೇಶ್ವರನಿಗೂ ನಮಿಸಿ ಹಿಂದಿರುಗುತ್ತಿದ್ದರು. ಹೀಗೆ ಬಂದವರು ಏನನ್ನಾದರೂ ಖರೀದಿಸುತ್ತಿದ್ದರು. ಚಹಾ, ಕಾಫಿ, ತಿಂಡಿ ಸೇವಿಸುತ್ತಿದ್ದರು. ಆದರೆ, ಈ ವರ್ಷ ಅವರ ಸಂಖ್ಯೆ ತೀರಾ ಕುಸಿದಿರುವುದರಿಂದ ಎಲ್ಲರ ವ್ಯಾಪಾರ ಕುಸಿದಿದೆ’ ಎಂದು ಪ್ರವಾಸಿ ಮಾಹಿತಿ ಪುಸ್ತಕ ಮಾರಾಟಗಾರ ಮಂಜು ಅಳಲು ತೋಡಿಕೊಂಡರು.

‘ಡಿಸೆಂಬರ್‌, ಜನವರಿಯಲ್ಲಿ ಪ್ರತಿದಿನ ಕಡಿಮೆ ಎಂದರೂ 2000 ಮಂದಿ ಅಯ್ಯಪ್ಪ ಸ್ವಾಮಿ ಭಕ್ತರು ಹಳೇಬೀಡಿಗೆ ಬರುತ್ತಿದ್ದರು. ಈ ವರ್ಷ ದಿನಕ್ಕೆ 200ರಿಂದ 300 ಮಂದಿ ಮಾತ್ರ ದರ್ಶನ ಮಾಡುತ್ತಿದ್ದಾರೆ. ಈಗ ವರ್ಷವಿಡಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ಕಲ್ಪಿಸಿರುವುದರಿಂದ ಡಿಸೆಂಬರ್‌ ಜನವರಿಯಲ್ಲಿ ಬರುವವರ ಸಂಖ್ಯೆ ಕುಸಿದಿದೆ. ಹೀಗಾಗಿ ನಮ್ಮ ವ್ಯಾಪಾರವೂ ಕಡಿಮೆಯಾಗಿದೆ’ ಎನ್ನುತ್ತಾರೆ ವ್ಯಾಪಾರಿ ಪರಮೇಶ್‌.

ಟ್ರಾವೆಲ್ಸ್‌ ವ್ಯವಹಾರಕ್ಕೆ ಪೆಟ್ಟು: ಈ ಭಾಗದ ಅನೇಕರು ಶಬರಿ ಮಲೈ ಯಾತ್ರೆ ಹೋಗುತ್ತಿದ್ದರು. ಈ ಭಾರಿಯ ವಿವಾದದಿಂದ ಅಲ್ಲಿಗೆ ಹೋಗುವವರೇ ಇಲ್ಲದಂಗಾತಿದೆ. ಇದರಿಂದ ಟ್ರಾವೆಲ್ಸ್‌ಗೆ ಪೆಟ್ಟುಬಿದ್ದಿದೆ. ಅಲ್ಲದೇ ಸರ್ಕಾರ ಪರ್ಮಿಟ್ ಅನ್ನೂ ನೀಡುತ್ತಿಲ್ಲವಾದ್ದರಿಂದ ಅಪಾರ ನಷ್ಟವಾಗಿದೆ ಎನ್ನುತ್ತಾರೆ ವಾಹನ ಚಾಲಕ ಮಹೇಶ್‌.


ಹಳೇಬೀಡಿನಲ್ಲಿ ಬೆರಳೆಣಿಕೆ ಸಂಖ್ಯೆಯ ಅಯ್ಯಪ್ಪ ಸ್ವಾಮಿ ಭಕ್ತರು 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !