ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ಅಸ್ತವ್ಯಸ್ತ, ಪ್ರಯಾಣಿಕರ ಪರದಾಟ

ರಸ್ತೆ ಮಧ್ಯೆ ಕುಳಿತು ಮುದ್ದೆ ಊಟ, ‘ಅನ್ನದಾತರಿಗೆ ಜಯವಾಗಲಿ’ ಎಂದ ಎಸ್ಪಿ
Last Updated 6 ಫೆಬ್ರುವರಿ 2021, 12:59 IST
ಅಕ್ಷರ ಗಾತ್ರ

ಹಾಸನ: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಚಳವಳಿ ಬೆಂಬಲಿಸಿ, ಜಿಲ್ಲೆಯಲ್ಲೂ ರೈತ ಸಂಘಟನೆಗಳು ಶನಿವಾರ ವಿವಿಧೆಡೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದವು.

ರಾಜ್ಯ ರೈತ ಸಂಘ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಜಿಲ್ಲಾಧ್ಯಕ್ಷ ಬಾಬು ನೇತೃತ್ವದಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನರು ಬುಸ್ತೆನಹಳ್ಳಿ ಕ್ರಾಸ್‌ನಲ್ಲಿ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿದರು.

ಇದರಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿ, ಪ್ರಯಾಣಿಕರು ಪರದಾಡಿದರು. ರಸ್ತೆಯ ಎರಡೂ ಬದಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಆಂಬುಲೆನ್ಸ್‌ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಯಿತು.

ಹಾಸನದಿಂದ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್‌ ಹಾಗೂ ಖಾಸಗಿ ವಾಹನಗಳು ಬೂವನಹಳ್ಳಿ, ಶಾಂತಿಗ್ರಾಮ ಮಾರ್ಗವಾಗಿ ಬದಲಿ ರಸ್ತೆಯಲ್ಲಿ ಬೆಂಗಳೂರು ತಲುಪಿದವು. ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ವಾಹನಗಳು ಅನ್ಯ ಮಾರ್ಗವಿಲ್ಲದೇ ಸಾಲುಗಟ್ಟಿ ನಿಂತಿದ್ದವು. ಸುಮಾರು ಒಂದೂವರೆ ತಾಸು ಸಂಚಾರ ಅಸ್ತವ್ಯಸ್ತಗೊಂಡಿತು.

‘ಸ್ವಾಮಿನಾಥನ್ ವರದಿ ಪ್ರಕಾರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಮಳೆ, ಬಿಸಿಲು, ಚಳಿ ಎನ್ನದೆ ರೈತರು ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಕೂಡಲೇ ನೂತನ ಕೃಷಿಕಾಯ್ದೆ ಹಿಂಪಡೆಯಬೇಕು’ ಎಂದುರಾಜ್ಯ ರೈತ ಸಂಘದ ಉಪಾಧ್ಯಕ್ಷ ರವಿ ಆನೆಕೆರೆಆಗ್ರಹಿಸಿದರು.

ಸ್ಥಳದಲ್ಲಿಯೇ ಪ್ರತಿಭಟನಾಕಾರರು ಮುದ್ದೆ, ಅನ್ನ ತಯಾರಿಸಿ ರಸ್ತೆ ಮಧ್ಯೆದಲ್ಲಿ ಕುಳಿತು ಊಟ ಮಾಡಿದರು.

ಸ್ಥಳಕ್ಕೆ ಬಂದ ಪೊಲೀಸ್ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸಗೌಡ, ‘ಹೆದ್ದಾರಿ ತಡೆಯಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಪ್ರತಿಭಟನೆ ಕೈಬಿಡಬೇಕು’ ಎಂದು ಮನವಿ ಮಾಡಿದರು. ರೈತರ ಒತ್ತಾಯಕ್ಕೆ ಮಣಿದು ‘ಅನ್ನದಾತರಿಗೆ ಜಯವಾಗಲಿ’ ಎಂಬ ಘೋಷಣೆ ಕೂಗಿದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಅಂತ್ಯಗೊಳಿಸಿದರು. ಮಧ್ಯಾಹ್ನ ಬಳಿಕ ಎಂದಿನಂತೆ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭಗೊಂಡಿತು.

ಪ್ರತಿಭಟನೆಯಲ್ಲಿ ಕರ್ನಾಟಕ ರೈತ ಪ್ರಾಂತ ಸಂಘದ ಜಿಲ್ಲಾಧ್ಯಕ್ಷ ನವೀನ್, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮಶ್‌, ರೈತ ಮಹಿಳಾ ಘಟಕದ ಅಧ್ಯಕ್ಷೆ ಬೆಟ್ಟಳ್ಳಿ ಗೌರಮ್ಮ, ಹಸಿರು ಸೇನೆಯ ಕುಮಾರ್‌, ರೈತ ಮುಖಂಡ ಮೊಹಮದ್ ಸಾದಿಕ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT