ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಕಲೇಶಪುರದ ಬಳಿ ಮತ್ತೆ ಗುಡ್ಡ ಕುಸಿತ: ಬೆಂಗಳೂರು–ಮಂಗಳೂರು ರೈಲು ಸಂಚಾರ ಸ್ಥಗಿತ

Published 16 ಆಗಸ್ಟ್ 2024, 13:53 IST
Last Updated 16 ಆಗಸ್ಟ್ 2024, 13:53 IST
ಅಕ್ಷರ ಗಾತ್ರ

ಹಾಸನ: ಸಕಲೇಶಪುರ–ಆಲೂರು ನಡುವಿನ ಆಚಂಗಿ ದೊಡ್ಡಸಾಗರ ಬಳಿ ಶುಕ್ರವಾರ ಮತ್ತೆ ಗುಡ್ಡ ಕುಸಿತವಾಗಿದ್ದು, ಬೆಂಗಳೂರು–ಮಂಗಳೂರು ರೈಲು ಸಂಚಾರ ಸ್ಥಗಿತವಾಗಿದೆ.

ಶುಕ್ರವಾರ ಮಧ್ಯಾಹ್ನ ಯಶವಂತಪುರ–ಕಾರವಾರ ರೈಲನ್ನು ಬಾಳ್ಳುಪೇಟೆ ನಿಲ್ದಾಣದಲ್ಲಿ ನಿಲುಗಡೆ ಮಾಡಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೆ ತೆರಳುತ್ತಿದ್ದ ಪ್ರಯಾಣಿಕರು ಪರದಾಡಿದರು. ನಂತರ ಖಾಸಗಿ ವಾಹನಗಳ ಮೂಲಕ ಊರಿಗೆ ಕಳುಹಿಸಲಾಯಿತು.

ಸ್ಥಳಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಬಂದಿದ್ದು, ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಎರಡು ದಿನ ರೈಲುಗಳ ಓಡಾಟ ಸ್ಥಗಿತವಾಗಲಿದೆ.

‘ಆಗಸ್ಟ್‌ 9ರಂದು ರಾತ್ರಿ ಇದೇ ಸ್ಥಳದಲ್ಲಿ ಗುಡ್ಡ ಕುಸಿತವಾಗಿತ್ತು. ಮಣ್ಣು ತೆರವುಗೊಳಿಸಿ, ಎರಡು ದಿನಗಳ ಹಿಂದಷ್ಟೇ ಪ್ರಯಾಣಿಕ ರೈಲುಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಿಸದೇ ಸಂಚಾರ ಆರಂಭಿಸಿದ್ದು, ಮಣ್ಣು ಕುಸಿಯಲು ಕಾರಣ’ ಎಂದು ಸ್ಥಳೀಯರು ಹೇಳಿದ್ದಾರೆ.

ಇದು ಬೆಂಗಳೂರು -ಮಂಗಳೂರು ಮಾರ್ಗದ ಏಕೈಕ ರೈಲು ಮಾರ್ಗ. ತಿಂಗಳ ಹಿಂದೆ ಯಡಕುಮೇರಿ ಬಳಿ ಬಳಿ ಗುಡ್ಡ ಕುಸಿತವಾಗಿ 10 ದಿನ ಸಂಚಾರ ಸ್ಥಗಿತಗೊಂಡಿತ್ತು. ‘ಮುಂದಿನ ದಿನಗಳಲ್ಲಾದರೂ ರೈಲ್ವೆ ಇಲಾಖೆ, ಈ ಮಾರ್ಗದ ಗುಡ್ಡ ಕುಸಿತದ ಸ್ಥಳಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಪದೇ ಪದೇ ಕುಸಿತವನ್ನು ತಡೆಯಬೇಕು’ ಎಂದು ಪ್ರಯಾಣಿಕರು ಒತ್ತಾಯಿಸಿದರು.

ರೈಲು ಸಂಚಾರ ರದ್ದು:

ಈ ಮಾರ್ಗದಲ್ಲಿ ಶುಕ್ರವಾರ ಸಂಚರಿಸಬೇಕಿದ್ದ ಎಸ್‌ಎಂವಿಟಿ ಬೆಂಗಳೂರು–ಮುರ್ಡೇಶ್ವರ, ಮುರ್ಡೇಶ್ವರ–ಎಸ್‌ಎಂವಿಟಿ ಬೆಂಗಳೂರು, ಶನಿವಾರ ಸಂಚರಿಸಬೇಕಿದ್ದ ಕಾರವಾರ–ಯಶವಂತಪುರ ರೈಲು ಸಂಚಾರ ರದ್ದುಪಡಿಸಲಾಗಿದೆ.

ಶುಕ್ರವಾರ ಪ್ರಯಾಣ ಆರಂಭಿಸಿದ ಕೆಲ ರೈಲುಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಮಂಗಳೂರು ಸೆಂಟ್ರಲ್‌–ವಿಜಯಪುರ ರೈಲು ಮಂಗಳೂರು ಜಂಕ್ಷನ್‌, ಕಾರವಾರ, ಲೋಂಡಾ ಮೂಲಕ ಹುಬ್ಬಳ್ಳಿ ತಲುಪಿದೆ.

ಕೆಎಸ್‌ಆರ್‌ ಬೆಂಗಳೂರು–ಕಾರವಾರ ರೈಲು ಅರಸೀಕೆರೆ, ಹುಬ್ಬಳ್ಳಿ, ಲೋಂಡಾ, ಮಡಗಾಂವ ಮೂಲಕ ಕಾರವಾರಕ್ಕೆ ತೆರಳಿದೆ. ಕಾರವಾರ–ಕೆಎಸ್‌ಆರ್‌ ಬೆಂಗಳೂರು ರೈಲು ಮಡಗಾಂವ, ಲೋಂಡಾ, ಹುಬ್ಬಳ್ಳಿ, ಅರಸೀಕೆರೆ ಮೂಲಕ ಬೆಂಗಳೂರಿಗೆ ತೆರಳಿದೆ. ಕೆಎಸ್‌ಆರ್‌ ಬೆಂಗಳೂರು–ಕಣ್ಣೂರು ರೈಲು ಜೋಲಾರಪೆಟ್ಟಿ, ಸೇಲಂ, ಶೋರನೂರು ಮೂಲಕ ಕಣ್ಣೂರಿಗೆ ತೆರಳಿದೆ. ಕಣ್ಣೂರು–ಕೆಎಸ್‌ಆರ್‌ ಬೆಂಗಳೂರು ರೈಲು, ಶೋರನೂರು, ಸೇಲಂ, ಜೋಲಾರಪೆಟ್ಟಿ ಮೂಲಕ ಬೆಂಗಳೂರಿಗೆ ತೆರಳಿದೆ.

ಯಶವಂತಪುರ–ಕಾರವಾರ ರೈಲನ್ನು ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ನಿಲ್ದಾಣದಲ್ಲಿ ನಿಲುಗಡೆ ಮಾಡಿದ್ದು ಪ್ರಯಾಣಿಕರು ಪರದಾಡಿದರು
ಯಶವಂತಪುರ–ಕಾರವಾರ ರೈಲನ್ನು ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ನಿಲ್ದಾಣದಲ್ಲಿ ನಿಲುಗಡೆ ಮಾಡಿದ್ದು ಪ್ರಯಾಣಿಕರು ಪರದಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT