ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರ ಮುಷ್ಕರ‌: ಪ್ರಯಾಣಿಕರ ಪರದಾಟ

ಖಾಸಗಿ ವಾಹನಗಳಿಂದ ದುಪಟ್ಟು ದರ ವಸೂಲಿ
Last Updated 7 ಏಪ್ರಿಲ್ 2021, 15:52 IST
ಅಕ್ಷರ ಗಾತ್ರ

ಹಾಸನ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸಿದ ಪರಿಣಾಮ ಜಿಲ್ಲೆಯಾದ್ಯಂತ ಸಾರಿಗೆ ಬಸ್‌ಗಳ ಸಂಚಾರ ಸಂಪೂರ್ಣ ಸ್ತಬ್ಧಗೊಂಡು, ದೂರದ ಊರುಗಳಿಗೆ ತೆರಳಲು ಪ್ರಯಾಣಿಕರು ತೀವ್ರ ಪರದಾಡಿದರು.

ನಗರದ ಹೊಸ ಬಸ್‌ ನಿಲ್ದಾಣ ಬಸ್‌ ಮತ್ತು ಪ್ರಯಾಣಿಕರಿಲ್ಲದೆ ಭಣಗುಡುತ್ತಿತ್ತು. ಬೆರಳೆಣಿಕೆ ಪ್ರಯಾಣಿಕರು ಬಸ್‌ ಸಂಚಾರ ಆರಂಭಿಸಬಹುದು ಎಂಬ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದ ದೃಶ್ಯ ಕಂಡು ಬಂದಿತು.

ನಗರದ ಎನ್‌.ಆರ್‌. ವೃತ್ತ, ಹೊಸ ಬಸ್‌ ನಿಲ್ದಾಣ ಮುಂಭಾಗ ಜನರು ಖಾಸಗಿ ವಾಹನಗಳಿಗೆ ಕಾದು ನಿಂತಿದ್ದರು. ಮ್ಯಾಕ್ಸಿಕ್ಯಾಬ್‌, ಖಾಸಗಿ ಬಸ್‌ಗಳು ಹಾಗೂ ಆಟೊಗಳ ಓಡಾಟ ಹೆಚ್ಚಾಗಿತ್ತು.

ಹಾಸನ ನಗರದಿಂದ ವಿವಿಧ ಸ್ಥಳಗಳಿಗೆ ಪ್ರಯಾಣಿಕರನ್ನು ಕರೆದೊಯ್ಯಲು ನಿಂತಿದ್ದ ಮ್ಯಾಕ್ಸಿಕ್ಯಾಬ್‌ಗಳಲ್ಲಿ
ಬಸ್‌ಗಳ ದರಕ್ಕಿಂತ ದುಪ್ಪಟ್ಟು ದರವನ್ನು ಪ್ರಯಾಣಿಕರಿಂದ ವಸೂಲಿ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.

ಬೆಂಗಳೂರಿಗೆ ₹ 500 (ಬಸ್‌ ದರ ₹193), ಮೈಸೂರಿಗೆ ₹ 400, ಚನ್ನರಾಯಪಟ್ಟಣಕ್ಕೆ ₹100, ಕುಣಿಗಲ್‌ಗೆ ₹ 300 ಹೀಗೆ ಎರಡು ಮೂರು ಪಟ್ಟು ದರವನ್ನು ಕೊಟ್ಟು ಪ್ರಯಾಣಿಕರು ಅನಿವಾರ್ಯವಾಗಿ ಪ್ರಯಾಣಿಸಿದರು. ತುರ್ತು ಕಾರ್ಯಗಳು, ಅನಾರೋಗ್ಯ ಸಂಬಂಧ ಬೇರೆ ನಗರಗಳಿಗೆ ಹೋಗುವವರು ಅನಿವಾರ್ಯವಾಗಿ ದುಪ್ಪಟ್ಟು ಹಣ ನೀಡಿ ಪ್ರಯಾಣ ಮಾಡಿದರು.

ಅನೇಕರು ಖಾಸಗಿ ಬಸ್‌ಗಳಲ್ಲಿ ದುಪ್ಪಟ್ಟು ಪ್ರಯಾಣ ದರ ಏರಿಕೆ ಮಾಡಿರುವುದನ್ನು ಪ್ರಶ್ನಿಸಿ ಬಸ್‌
ನಿರ್ವಹಕರೊಂದಿಗೆ ವಾಗ್ವಾದಕ್ಕೆ ಇಳಿದರು.

‘ಹಾಸನ ನಗರದಲ್ಲಿ ಗಾರೆ ಕೆಲಸ ಮಾಡಲು ಬಂದಿದ್ದೆವು. ಆದರೆ, ಸಾರಿಗೆ ನೌಕರರ ಮುಷ್ಕರ ಇರುವುದು
ತಿಳಿದಿಲ್ಲ. ಯುಗಾದಿ ಹಬ್ಬ ಇರುವ ಕಾರಣ ಸ್ವಂತ ಊರು ದಾವಣಗೆರೆಗೆ ಹೊರಟಿದ್ದೇವೆ. ಬೆಳಿಗ್ಗೆಯಿಂದ ಕಾದು
ಕುಳಿತರು ನಮ್ಮ ಊರಿಗೆ ಬಸ್‌ ಇಲ್ಲ. ಏನು ಮಾಡುವುದು ತಿಳಿಯುತ್ತಿಲ್ಲ’ ಎಂದು ದಾವಣಗೆರೆಯ ರವಿ ತಮ್ಮ
ಅಳಲು ತೋಡಿಕೊಂಡರು.

ಬುಧವಾರ ನಡೆಯ ಬೇಕಿದ್ದ ಪದವಿ ಹಾಗೂ ಸ್ನಾತಕೊತ್ತರ ಪದವಿ ಪರೀಕ್ಷೆಗಳನ್ನು ನಗರದ ಸರ್ಕಾರಿ ಕಲಾ ಮತ್ತು
ವಾಣಿಜ್ಯ ಕಾಲೇಜಿನಲ್ಲಿ ಮುಂದೂಡಲಾಗಿತ್ತು. ನಗರದ ಪ್ರದೇಶಿಕ ಸಾರಿಗೆ ಆಯುಕ್ತರ ಕಚೇರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT