ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರಿಗೆ 7 ಟಿಎಂಸಿ ನೀರು ಅವಶ್ಯ: ಸಚಿವ ಮಾಧುಸ್ವಾಮಿ

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ
Last Updated 21 ಆಗಸ್ಟ್ 2020, 14:10 IST
ಅಕ್ಷರ ಗಾತ್ರ

ಹಾಸನ: ಮೇ ತಿಂಗಳಲ್ಲೇ ಹೇಮಾವತಿ ಜಲಾಶಯದಿಂದ ತುಮಕೂರಿನ ಕೆರೆ,ಕಟ್ಟೆಗಳಿಗೆ ನೀರು ಹರಿಸಬೇಕಿತ್ತಾದರೂ ನಿರೀಕ್ಷಿತ ಮಳೆಯಾಗದಿದ್ದರೆ ಹಾಸನದ ರೈತರಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ನೀರು ಬಿಡಲಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಗೊರೂರು ಹೇಮಾವತಿ ಜಲಾಶಯಕ್ಕೆ ಶುಕ್ರವಾರ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿ, ತುಮಕೂರು ಜಿಲ್ಲೆಯ 90 ಸಾವಿರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೇಮಾವತಿ ಜಲಾಶಯ ಅವಲಂಬಿಸಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಹೇಮಾವತಿ ನೀರು ಬೇಕು. ಅಲ್ಲಿನ ಕಾಲುವೆಗಳ ದುರಸ್ತಿಯಾಗಿಲ್ಲ ಎಂಬುದು ಆಧಾರ ರಹಿತ ಆರೋಪ. 0 ರಿಂದ 70 ಕಿ.ಮೀ. ವರೆಗಿನ ನಾಲೆಯನ್ನು ಸ್ವಚ್ಛಗೊಳಿಸಲಾಗಿದೆ. ಉಳಿದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಕಾಲುವೆಗಿಂತ ಕೆರೆಗಳಿಗೆ ಆದ್ಯತೆ ನೀಡಲಾಗಿದೆ. ಆದರೆ, ಕಳೆದ ವರ್ಷವೂ ನಿರೀಕ್ಷೆಯಷ್ಟು ನೀರು ಬರಲಿಲ್ಲ ಎಂದು ತಿಳಿಸಿದರು.

6 ರಿಂದ 7 ಟಿಎಂಸಿ ನೀರು ತುಮಕೂರು ಜಿಲ್ಲೆಗೆ ಬೇಕಾಗುತ್ತದೆ. ನೀರಾವರಿ ಸಲಹಾ ಸಮಿತಿ ಸಭೆಯಲ್ಲೂ ಈ ವಿಷಯ
ಪ್ರಸ್ತಾಪಿಸಲಾಗಿದೆ. ಜಲಾಶಯದಲ್ಲಿ 20 ಟಿಎಂಸಿಗಿಂತ ಕಡಿಮೆ ನೀರು ಇದ್ದಾಗ ಹೊರ ಬಿಡುವಂತಿಲ್ಲ ಎಂಬ ನಿಯಮವಿದೆ. ರೈತರಿಗಾಗಿ ಕಾಲುವೆಗಳಿಗೆ ನೀರು ಹರಿಸಿದ್ದರೆ ಕಾನೂನು ತೊಡಕಾಗುತ್ತಿತ್ತು. 20 ಕ್ಕಿಂತ ಅಧಿಕ ಟಿಎಂಸಿ ನೀರು ಸಂಗ್ರಹವಾದ ಬಳಿಕವೇ ನದಿ ಮತ್ತು ನಾಲೆಗೆ ನೀರು ಬಿಡಲಾಗಿದೆ ಎಂದು ಹೇಳಿದರು.

ತುಮಕೂರಿನಲ್ಲಿ ಸಾವಿರ ಅಡಿ ಆಳ ಕೊರೆದರೂ ನೀರು ದೊರೆಯುತ್ತಿಲ್ಲ. ಕೃಷಿಯಿಂದ ಶೇಕಡಾ 1 ರಷ್ಟು ಜಿಡಿಪಿ ದರ ವೃದ್ಧಿಯಾದರೆ ನಾಲ್ಕರಷ್ಟು ಹೆಚ್ಚಾದಂತೆ. ವ್ಯವಸಾಯ ಕ್ಷೇತ್ರಕ್ಕೆ ಆದ್ಯತೆ ನೀಡುವುದು ಎಲ್ಲರ ಕರ್ತವ್ಯ ಎಂದರು.

ಅತಿವೃಷ್ಟಿಯಿಂದ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಕಲ್ಪಿಸಿಕೊಡಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಎನ್‍ಡಿಆರ್‍ಎಫ್ ನಿಯಮ ಪ್ರಕಾರ ಪರಿಹಾರ ನೀಡುವುದಾರೆ ರೈತರಿಗೆ ಅನ್ಯಾಯವಾಗುತ್ತದೆ. ಆದ್ದರಿಂದಲೇ ಕಳೆದ ವರ್ಷ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿ ರೈತರಿಗೆ ₹10 ಸಾವಿರ ಹೆಚ್ಚುವರಿ ಪರಿಹಾರ ನೀಡಿದ್ದರು. ಕಾಫಿ ಬೆಳೆ ಎನ್‍ಡಿಆರ್‍ಎಫ್ ಅಡಿ ಬರುವುದಿಲ್ಲ. ಆದರೆ, ಸದನದಲ್ಲಿ ಚರ್ಚಿಸಿ ಕಾಫಿ ಬೆಳೆಗಾರರಿಗೂ ಪರಿಹಾರ ಸಿಗುವಂತೆ ಮಾಡಲಾಗಿತ್ತು ಎಂದು ಹೇಳಿದರು.

ತಪ್ಪಿತಸ್ಥರಿಂದಲೇ ನಷ್ಟ ಭರಿಸಲಾಗುವುದು
ಬೆಂಗಳೂರಿನ ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಗಲಭೆಯಲ್ಲಿ ಆಗಿರುವ ಆಸ್ತಿಪಾಸ್ತಿ ಹಾನಿಯ ನಷ್ಟವನ್ನು ತಪ್ಪಿತಸ್ಥರಿಂದಲೇ
ಭರಿಸಿಕೊಳ್ಳಲಾಗುವುದು. ಒಂದು ವೇಳೆ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಂದ ಬೆಂಕಿ ಹಚ್ಚಿಸಿದ್ದರೆ, ನಷ್ಟ ಭರಿಸಲು ಆತ ಸಮರ್ಥ ಆಗಿಲ್ಲವೆಂದಾದರೆ ಕೃತ್ಯಕ್ಕೆ ಪ್ರಚೋದನೆ ನೀಡಿದವ ದಂಡ ಪಾವತಿಸಬೇಕಾಗುತ್ತದೆ ಎಂದು ಮಾಧುಸ್ವಾಮಿ ಹೇಳಿದರು.

ಮೂರು ಪ್ರಮುಖ ಸಂಘಟನೆಗಳ ನಿಷೇಧಿಸಬೇಕೆಂಬ ಒತ್ತಾಯ ಬಂದಿದೆ. ಆದರೆ ಅದಕ್ಕೆ ಬಲವಾದ ಸಾಕ್ಷ್ಯಗಳು ಅಗತ್ಯ. ಡಿ.ಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಯಾರು ಭಾಗವಹಿಸಿದ್ದಾರೆಂಬುದರ ಕುರಿತು ಪೊಲೀಸ್‌ ಇಲಾಖೆಯಿಂದ ಮಾಹಿತಿ
ತರಿಸಿಕೊಳ್ಳಲಾಗುವುದು. ಇದು ಸೂಕ್ಷ್ಮ ವಿಚಾರ ಆಗಿರುವುದರಿಂದ ಯಾರೂ ಭಾವನಾತ್ಮಕವಾಗಿ ಮಾತನಾಡಬಾರದು. ಸಾಕ್ಷಿ ಆಧಾರವಿಲ್ಲದೆ ಏನೇನೋ ಮಾತನಾಡಿದರೆ ನ್ಯಾಯಾಲಯದಲ್ಲಿ ತೊಂದರೆಗೆ ಸಿಲುಕುತ್ತೇವೆ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT