ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ

ಜಿಲ್ಲಾಧಿಕಾರಿ ಕಚೇರಿ ಎದುರು ಡಿವೈಎಫ್ಐ ಪ್ರತಿಭಟನೆ
Last Updated 9 ಸೆಪ್ಟೆಂಬರ್ 2019, 14:00 IST
ಅಕ್ಷರ ಗಾತ್ರ

ಹಾಸನ: ನಿರುದ್ಯೋಗದಿಂದ ರಕ್ಷಿಸಿ, ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‍ಐ ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಸರ್ವರಿಗೂ ಉದ್ಯೋಗ ಎಂಬ ಸಂವಿಧಾನದ ಆಶಯ ಜಾರಿಗೆ ತರಲು ಆಳುವ ಸರ್ಕಾರಗಳು ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಉದ್ಯೋಗ ವಂಚಿತ ಯುವ ಜನರ ಬದುಕು ನರಕ ಸದೃಶವಾಗಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಉದಾರೀಕರಣದ ನೀತಿ ಜಾರಿಗೆ ಬಂದ ನಂತರ ಇರುವ ಉದ್ಯೋಗ ಕಸಿದುಕೊಂಡಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿ ಮತ್ತೆ ಅಧಿಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಉದ್ಯೋಗ ಒದಗಿಸಲಿಲ್ಲ. ಆರ್ಥಿಕ ಹಿಂಜರಿತದಿಂದ ಹಲವು ಕೈಗಾರಿಕೆಗಳು ಮುಚ್ಚಿ, ಕಾರ್ಮಿಕರು ಬೀದಿಗೆ ಬಂದಿದ್ದಾರೆ’ ಎಂದು ಟೀಕಿಸಿದರು.

‘ರಾಜ್ಯ ಸರ್ಕಾರದ ಅಧೀನದಲ್ಲಿರುವ ಇಲಾಖೆಗಳಲ್ಲಿ 2 ಲಕ್ಷ ಹುದ್ದೆ ಹಾಗೂ ಸಾರ್ವಜನಿಕ ಉದ್ಯಮ ರಂಗದಲ್ಲೂ ಲಕ್ಷಾಂತರ ಹುದ್ದೆ ಖಾಲಿ ಇವೆ. ರೈಲ್ವೆ, ಟೆಲಿಕಾಂ, ಬ್ಯಾಂಕಿಂಗ್‌ ಕ್ಷೇತ್ರಗಳಲ್ಲೂ ಉದ್ಯೋಗಿಗಳನ್ನು ತೆಗೆದು ಹಾಕಲಾಗುತ್ತಿದೆ. ಯುವ ಜನರು ಏನು ಮಾಡಬೇಕು’ ಎಂದು ಪ್ರಶ್ನಿಸಿದರು.

‘ಖಾಸಗಿ ಉದ್ದಿಮೆಗಳು, ಕೈಗಾರಿಕಾ ಕ್ಷೇತ್ರದಲ್ಲಿ ಕನ್ನಡಿಗರು, ಸ್ಥಳೀಯರಿಗೆ ಅವಕಾಶ ಕಲ್ಪಿಸದೆ ಕಡಿಮೆ ವೇತನಕ್ಕೆ ಹೊರ ರಾಜ್ಯದಿಂದ ಕಾರ್ಮಿಕರನ್ನು ಕರೆ ತಂದು ಉದ್ಯೋಗ ನೀಡಲಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರಗಳು ವಿಫಲವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಸ್ಥಳೀಯ ಸಂಪನ್ಮೂಲ ಬಳಸಿ ಯುವ ಜನರಿಗೆ ಅರ್ಹತೆಗೆ ಅನುಸಾರ ಉದ್ಯೋಗ ಒದಗಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್‌ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್‍ಐ ಜಿಲ್ಲಾಧ್ಯಕ್ಷ ವಾಸುದೇವ್, ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಶಶಿ, ಮಧುಸೂದನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT