ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ತಿಯಾಗದ ಮಳಿಗೆಗಳು: ಆದಾಯಕ್ಕೆ ಹೊಡೆತ

ಮೂಲಸೌಕರ್ಯ ಕೊರತೆ, ಹಲವು ಕಟ್ಟಡಗಳು ಶಿಥಿಲ, ಪರಿಷ್ಕರಣೆಯಾಗದ ದರ
Last Updated 11 ಏಪ್ರಿಲ್ 2022, 5:39 IST
ಅಕ್ಷರ ಗಾತ್ರ

ಹಾಸನ: ಸ್ಥಳೀಯ ಸಂಸ್ಥೆಗಳ ಆದಾಯ ಮೂಲಗಳಲ್ಲಿ ಒಂದಾಗಿರುವ ವಾಣಿಜ್ಯ ಮಳಿಗೆಗಳು ಶಿಥಿಲಾವಸ್ಥೆ ತಲುಪಿದ್ದು, ಮೂಲ ಸೌಲಭ್ಯ ಕೊರತೆಯಿಂದ ಹಲವು ಭರ್ತಿಯಾಗಿಲ್ಲ. ಜತೆಗೆಬಾಡಿಗೆ ದರ ಪರಿಷ್ಕರಣೆಯಾಗದೆ ಆದಾಯಕ್ಕೆ ಹೊಡೆತ ಬಿದ್ದಿದೆ.

ಐದು ದಶಕಕ್ಕೂ ಹಳೆಯದಾದ ಹಲವು ಬಾಡಿಗೆ ಮಳಿಗೆಗಳಿದ್ದು, ಕಾಯಕಲ್ಪದ ನಿರೀಕ್ಷೆಯಲ್ಲಿವೆ. ಬಾಡಿಗೆ ಪರಿಷ್ಕರಣೆ ಹಾಗೂ ವಸೂಲಾತಿಯೇ ದೊಡ್ಡ ಸವಾಲಾಗಿದೆ. ಶೌಚಾಲಯ, ಪಾರ್ಕಿಂಗ್‌, ಕುಡಿಯುವ ನೀರು, ಕಟ್ಟಡ ಶಿಥಿಲವಾಗಿರುವ ಕಾರಣ ಹಲವು ಮಳಿಗೆಗಳು ಖಾಲಿ ಇವೆ.

ಹಾಸನ ನಗರದ ಕಟ್ಟಿನಕೆರೆ ಮಾರುಕಟ್ಟೆ, ಮೀನು ಮತ್ತು ಮಟನ್ ಮಾರುಕಟ್ಟೆ, ಪಿಚ್ಚರ್‌ ಪ್ಯಾಲೇಸ್‌ ಚಿತ್ರಮಂದಿರದ ಸುತ್ತಮುತ್ತ ಹಾಗೂ ವಿವಿಧೆಡೆ ನಗರಸಭೆಗೆ ಸೇರಿದ 529 ವಾಣಿಜ್ಯ ಮಳಿಗೆಗಳಿವೆ. ಇದರಲ್ಲಿ ಹತ್ತು ಮಳಿಗೆ ಶಿಥಿಲಗೊಂಡಿರುವ ಕಾರಣ ಹರಾಜು ಮಾಡಿಲ್ಲ.

ಇವುಗಳ ಬಾಡಿಗೆ ದರ ಮಾಸಿಕ ₹500ರಿಂದ ₹15,000ರವರೆಗೆ ಇದೆ. ಈ ಮಳಿಗೆಗಳಿಂದ ವಾರ್ಷಿಕ ₹1.40 ಕೋಟಿ ಆದಾಯ ನಿರೀಕ್ಷೆ ಇದೆ. ಆದರೆ, ಎಷ್ಟೋ ಬಾಡಿಗೆದಾರರು ಸರಿಯಾಗಿ ಬಾಡಿಗೆ ಪಾವತಿಸುತ್ತಿಲ್ಲ. 6 ತಿಂಗಳಿ ಗೊಮ್ಮೆ ಪಾವತಿಸುವವರು ಇದ್ದಾರೆ.

ಬಾಡಿಗೆ ಕರಾರು ಒಪ್ಪಂದ ನವೀಕರಣ ಮಾಡದ 6 ಮಳಿಗೆಗಳನ್ನು ನಗರಸಭೆ ಮುಟ್ಟುಗೋಲು ಹಾಕಿಕೊಂಡಿದೆ. ನಗರಸಭೆ ವಾಣಿಜ್ಯ ಮಳಿಗೆಗಳ ಬಾಡಿಗೆ 2012ರಲ್ಲಿ 12 ವರ್ಷಗಳಿಗೆ ಪರಿಷ್ಕರಣೆ ಆಗಿದೆ. ಮತ್ತೆ 2024ಕ್ಕೆ ಬಾಡಿಗೆ ದರಗಳು ಪರಿಷ್ಕರಣೆ ಆಗಲಿವೆ. ಮೂರು ವರ್ಷಕ್ಕೊಮ್ಮೆ ಶೇ 10ರಷ್ಟು ಬಾಡಿಗೆ ಏರಿಕೆ ಮಾಡಲಾಗುತ್ತದೆ.

ನಗರಸಭೆ ಮಳಿಗೆಗಳಿಗೆ ಸೌಕರ್ಯ ಕಲ್ಪಿಸುವುದಿಲ್ಲ. ಬಣ್ಣ ಬಳಿಯುವುದ ರಿಂದ ಹಿಡಿದು ಪ್ರತಿಯೊಂದು ಕೆಲಸ ವನ್ನು ಬಾಡಿಗೆದಾರರೇ ಮಾಡಿಸಿ ಕೊಳ್ಳಬೇಕು.

‘ನಗರಸಭೆ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಪಡೆದವರು ಉಪ ಬಾಡಿಗೆ ನೀಡಿರುವುದು ಉಂಟು. ಆದರೆ, ದಾಖಲೆಗಳು ಇಲ್ಲದೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ನಗರಸಭೆ ಆದಾಯಕ್ಕೆ ಹೊಡೆತ ಆಗುತ್ತಿದೆ’ ಎಂದು ನಗರಸಭೆ ಸದಸ್ಯ ಸಿ.ಆರ್‌.ಶಂಕರ್‌ ತಿಳಿಸಿದರು.

ಹೊಳೆನರಸೀಪುರದ ಸುಭಾಷ್‌ ವೃತ್ತ, ಗಾಂಧಿ ವೃತ್ತ, ಅರಕಲಗೂಡು ರಸ್ತೆ ಹೌಸಿಂಗ್ ಬೋರ್ಡ್, ಗುತ್ತಮ್ಮ ತಮ್ಮೇಗೌಡ ಕಲ್ಯಾಣ ಮಂಟಪದ ರಸ್ತೆಯಲ್ಲಿರುವ ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿ ಪಾರ್ಕಿಂಗ್ ಸೌಲಭ್ಯ ಇಲ್ಲ. ಅರಕಲಗೂಡು ರಸ್ತೆಯ ವಾಣಿಜ್ಯ ಸಂಕೀರ್ಣದ ನೆಲಮಹಡಿಯಲ್ಲಿ ಗಲೀಜು ನೀರು ನಿಂತು, ಗಬ್ಬು ನಾರುತ್ತಿದೆ. ಸುಭಾಷ್‌ ವೃತ್ತ, ಗಾಂಧಿ ವೃತ್ತದ ಪೂರ್ವಭಾಗ ಹಾಗೂ ಹೌಸಿಂಗ್ ಬೋರ್ಡ್ ಬಡಾವಣೆ ಗ್ರೀನ್‍ವುಡ್ ಹಿಂಭಾಗ 20ಕ್ಕೂ ಹೆಚ್ಚು ಮಳಿಗೆಗಳು ಖಾಲಿ ಬಿದ್ದಿವೆ.

‘ಕೆಲವು ಮಳಿಗೆಗಳಿಗೆ ಗಾಳಿ, ಬೆಳಕಿನ ಸೌಲಭ್ಯ ಇಲ್ಲದ ಕಾರಣ ಯಾರೂ ಬರುತ್ತಿಲ್ಲ. ಹರಾಜಿನಲ್ಲಿ ಮಳಿಗೆ ಪಡೆದ ಕೆಲವರು ಇನ್ನೂ ಮಳಿಗೆಗೆ ಬಂದಿಲ್ಲ’ ಎಂದು ಮುಖ್ಯಾಧಿಕಾರಿ ಶಾಂತಲಾ ತಿಳಿಸಿದ್ದಾರೆ.

ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 55 ವಾಣಿಜ್ಯ ಮಳಿಗೆಗಳ ಪೈಕಿ 11 ಮಳಿಗೆಗಳು ಖಾಲಿ ಇವೆ. ₹33 ಲಕ್ಷ ವಾರ್ಷಿಕ ಆದಾಯ ಇದೆ.

‘ಮಳಿಗೆಗಳಿಗೆ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಜನಸಾಮಾನ್ಯರು ಶುಚಿತ್ವ ಕಾಪಾಡದೆ, ನಿರ್ವಹಣೆ ಕೊರತೆಯಿಂದ ಬೀಗ ಜಡಿಯಲಾಗಿದೆ. ಶೌಚಾಲಯಕ್ಕೆ ಸೂಕ್ತ ನೀರು ಸರಬರಾಜು ಮಾಡಿ ಉಪಯೋಗಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಜೆರಾಕ್ಸ್ ಅಂಗಡಿ ವ್ಯಾಪಾರಿ ವೆಂಕಟೇಶ್ತಿಳಿಸಿದರು.

‘ವಾಣಿಜ್ಯ ಮಳಿಗೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಶೌಚಾಲಯಕ್ಕೆ ಆದ್ಯತೆ ನೀಡಬೇಕಿತ್ತು. ಕೆಲವು ಅಂಗಡಿಗಳು, ಸಂತೆ ಜಾಗ ವಿವಾದ ನ್ಯಾಯಾಲಯದಲ್ಲಿದೆ. ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಸದಸ್ಯೆ ತಾಹಿರಾ ಬೇಗಂ ಹೇಳಿದರು.

ಅರಕಲಗೂಡು ಪಟ್ಟಣ ಪಂಚಾ ಯಿತಿಯಿಂದ 130 ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ಇದರಿಂದ ವಾರ್ಷಿಕ ಸುಮಾರು ₹40 ಲಕ್ಷ ಬಾಡಿಗೆ ಹಣ ಬರುತ್ತಿದೆ. ಅವಧಿ ಮುಗಿದ ಬಳಿಕ ಹರಾಜು ಪ್ರಕ್ರಿಯೆ ನಡೆಯಬೇಕು. ಆದರೆ ಒಂದಲ್ಲ, ಒಂದು ಕಾರಣದಿಂದ ನ್ಯಾಯಾಲಯದ ತಡೆಯಾಜ್ಞೆಗಳು ಇದಕ್ಕೆ ಅಡ್ಡಿಯಾಗಿವೆ.

ಕೆಲವರು ಉಪ ಬಾಡಿಗೆ ನೀಡಿರುವ ಪ್ರಕರಣಗಳು ಇವೆ. ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಮುಂತಾದ ಮೂಲ ಸೌಲಭ್ಯಗಳ ಕೊರತೆ ಇದೆ. ಮಳೆ ಬಂದಾಗ ಸಂತೆ ಮೈದಾನದ ರಸ್ತೆಯಲ್ಲಿನ ಮಳಿಗೆಗಳಿಗೆ ನೀರು ನುಗ್ಗುತ್ತದೆ. ಕೆಲವು ಸೋರುತ್ತಿದ್ದು, ದುರಸ್ತಿಗೆ ಪಟ್ಟಣ ಪಂಚಾಯಿತಿ ಆಡಳಿತ ಗಮನ ಹರಿಸಿಲ್ಲ ಎಂಬುದು ಬಾಡಿಗೆದಾರರ ದೂರು.

ಅರಸೀಕೆರೆ ನಗರದ ಸಾರಿಗೆ ಬಸ್ ನಿಲ್ದಾಣದ ಎದುರು ನಗರಸಭೆಗೆ ಸೇರಿದ ವಾಣಿಜ್ಯ ಸಂಕೀರ್ಣಕ್ಕೆ ಮೂಲ ಸೌಲಭ್ಯ ಕಲ್ಪಿಸಿಲ್ಲ. ಕೆಲವು ಖಾಲಿ ಇವೆ. ಬಿ.ಎಚ್. ರಸ್ತೆ ಹಾಗೂ ಬಸ್ ನಿಲ್ದಾಣದ ಭಾಗಕ್ಕಿರುವ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಚೆನ್ನಾಗಿದೆ. ಕಾಂಪ್ಲೆಕ್ಸ್ ಒಳಗಡೆ ಹಗಲಿನ ವೇಳೆ ಸಾರ್ವಜನಿಕರು ಮಲಗುವ ತಾಣವಾದರೆ, ರಾತ್ರಿ ವೇಳೆ ಅನೈತಿಕ ಚಟುವಟಿಕೆ ನಡೆಯುತ್ತದೆ.

‘ಶೀಘ್ರವೇ ಕಾಂಪ್ಲೆಕ್ಸ್ ಸ್ವಚ್ಛತೆ ಮಾಡಿಸಲಾಗುವುದು. ಸಾರ್ವಜನಿಕರು ಹಗಲಿನ ವೇಳೆಯಲ್ಲಿ ಬಂದು ಮಲಗುವ ವಿಚಾರ ಗೊತ್ತಿಲ್ಲ. ಗಮನ ಹರಿಸಿ ಕ್ರಮ ಕೈಗೊಳ್ಳಲಾಗುವುದು’ ನಗರಸಭೆ ಪೌರಾಯುಕ್ತ ಬಸವರಾಜ್ ಕಾಕಪ್ಪ ಶಿಗ್ಗಾವಿ ತಿಳಿಸಿದರು.

ಚನ್ನರಾಯಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ 238 ವಾಣಿಜ್ಯ ಮಳಿಗೆಗ
ಳಿದ್ದು, ಹಲವು ಮಳೆ ಬಂದರೆ ಸೋರು
ತ್ತವೆ. ಇವುಗಳಿಂದ ತಿಂಗಳಿಗೆ ₹7.50 ಲಕ್ಷ ಬಾಡಿಗೆ ವಸೂಲಿಯಾಗುತ್ತದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಶೇ 10ರಷ್ಟು ಬಾಡಿಗೆ ಹೆಚ್ಚಿಸಲಾಗುತ್ತದೆ.

ಬಿ.ಎಂ. ರಸ್ತೆ ಪಕ್ಕದಲ್ಲಿರುವ 8 ಹಳೆಯ ಮಳಿಗೆಗಳು ಶಿಥಿಲವಾಗಿವೆ. ಮುತ್ತತ್ತಿರಾಯ ದೇಗುಲದ ಮುಂಭಾಗ
ದಲ್ಲಿದ್ದ ವಾಣಿಜ್ಯ ಸಂಕೀರ್ಣದ ಕಟ್ಟಡ ಸಹ ಶಿಥಿಲಗೊಂಡಿತ್ತು. ಈ ಕಟ್ಟಡದಲ್ಲಿ ಕಸ, ಕಡ್ಡಿ ಬಿಸಾಡಲಾಗುತ್ತಿದೆ. ಮೂತ್ರ ವಿಸರ್ಜನೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT