ಶುಕ್ರವಾರ, ಮೇ 14, 2021
35 °C
ನಾಲ್ಕು ವರ್ಷದಿಂದ ನಡೆಯುತ್ತಿರುವ ಕೆಲಸ, ಸೇತುವೆ ಬಳಿ ಕಾರು ಪಲ್ಟಿ

ಮುಗಿಯದ ಕಾಮಗಾರಿ; ರಸ್ತೆ ದಾಟುವುದೇ ಸವಾಲು

ಎಂ. ಪಿ. ಹರೀಶ್ Updated:

ಅಕ್ಷರ ಗಾತ್ರ : | |

Prajavani

ಆಲೂರು: ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ-75 ಬೈರಾಪುರ ಬಳಿ ನಿರ್ಮಿಸುತ್ತಿರುವ ಕೆಳಸೇತುವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ.

ಕಾಮಗಾರಿ ಆರಂಭಗೊಂಡು ನಾಲ್ಕು ವರ್ಷ ಕಳೆದರೂ ನಿರೀಕ್ಷಿತ ವೇಗ ಪಡೆದಿಲ್ಲ. ರಸ್ತೆಯ ಎರಡೂ  ಬದಿಗೆ ಮಣ್ಣಿನ ರಾಶಿ ಬಿದ್ದಿರುವುದರಿಂದ ಪಾದಚಾರಿಗಳ ಸಂಚಾರಕ್ಕೂ ಭಾರಿ ತೊಂದರೆಯಾಗಿದೆ. ‘ಕೆಲಸ ನಡೆಯುತ್ತಿರುವ ಸ್ಥಳದ ಹತ್ತಿರ ವಾಹನ ಓಡಾಟಕ್ಕೆ ಕಿರಿದಾದ ದಾರಿ ನಿರ್ಮಿಸಿ ಕೊಡಲಾಗಿದ್ದು, ಅದು ಅಪಾಯಕ್ಕೆ ಆ‌ಹ್ವಾನ ನೀಡುತ್ತಿದೆ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನಾಲ್ಕು ರಸ್ತೆಗಳ ಸಂಪರ್ಕ ಕಲ್ಪಿಸುವ ಈ ಸ್ಥಳದಲ್ಲಿ ಕೆಳ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಹಲವು ಬಾರಿ ಸಂಚಾರಕ್ಕೆ ತೊಡಕಾಗಿ ಜನಸಾಮಾನ್ಯರು ರಸ್ತೆ ದಾಟಲು ಹರಸಾಹಸ ಪಡಬೇಕಾಗಿದೆ. ವಾಹನ ಸವಾರರು, ಹೆದ್ದಾರಿ ಬದಿ ಗ್ರಾಮಸ್ಥರು, ವ್ಯಾಪಾರಿಗಳ ಸಮಸ್ಯೆ ಹೇಳತೀರದು.

ಆಲೂರು ಪಟ್ಟಣದಿಂದ ಮಗ್ಗೆಗೆ ಹೋಗಬೇಕಾದರೆ ಈ ರಸ್ತೆ ದಾಟಿ ಹೋಗಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ವಾಹನ ದಟ್ಟಣೆ ತಪ್ಪಿಸಲು, ಹೆದ್ದಾರಿ ವಾಹನಗಳು ಅಡತಡೆ ಇಲ್ಲದೇ ಸರಾಗವಾಗಿ ಸಂಚರಿಸಲು ಅನುಕೂಲವಾಗಲೆಂದು ಬೈರಾಪುರ ಗ್ರಾಮದಲ್ಲಿ ಕೆಳ ಸೇತುವೆ ನಿರ್ಮಿಸಲಾಗುತ್ತಿದೆ. ಸೇತುವೆ ಕಾಮ ಗಾರಿ ಕುಂಟುತ್ತಾ ಸಾಗುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.

ಬೆಂಗಳೂರು, ಮಂಗಳೂರು ಕಡೆಯಿಂದ ಬರುವ ಬಸ್‌, ಲಾರಿ, ಇಂಧನ ಸಾಗಿಸುವ ಟ್ಯಾಂಕರ್‌ಗಳು ಈ ಮಾರ್ಗದಲ್ಲೇ ಹಾದು ಹೋಗುತ್ತಿವೆ. ಬೆಂಗಳೂರು, ಹಾಸನದಿಂದ ಸಕಲೇಶಪುರ, ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ ಸೇರಿ ಇತರೆ ಧಾರ್ಮಿಕ ಸ್ಥಳಗಳಿಗೆ ಈ ಹೆದ್ದಾರಿ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ದಾಟುವಾಗ ಹಲವರಿಗೆ ವಾಹನಗಳು ಡಿಕ್ಕಿ ಹೊಡೆದಿರುವ ಉದಾಹರಣೆಯೂ ಇದೆ.

ರಸ್ತೆ ಕಾಮಗಾರಿ ಕುರಿತು ವಾಹನ ಚಾಲಕರಿಗೆ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸದ ಕಾರಣ ಅಪಘಾತಗಳು ಸಂಭವಿಸಿವೆ. ಇತ್ತೀಚೆಗೆ ಸೇತುವೆ ಬಳಿ ಕಾರು ಪಲ್ಟಿಯಾಗಿ ಸಕಲೇಶಪುರದ ಚಾಲಕರೊಬ್ಬರು ಗಂಭೀರವಾಗಿ ಗಾಯಗೊಂಡರು. ರಸ್ತೆಯ ಎರಡೂ ಬದಿಗೆ ಯಾವುದೇ ಸೂಚನಾ ಫಲಕ ಅಳವಡಿಸದೆ ಇರುವುದರಿಂದ ವಾಹನ ಚಾಲಕರು ವೇಗವಾಗಿ ಬರುವುದರಿಂದ ಅಪಘಾತ ಸಂಭವಿಸುತ್ತಿವೆ.

ಮಳೆಗಾಲ ಆರಂಭಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಬೇಕು. ಮಳೆಗಾಲದಲ್ಲಿ ಕಾಮಗಾರಿಗೆ ಅಡ್ಡಿಯಾಗುತ್ತದೆ. ಕಳೆದ ಎರಡು ತಿಂಗಳ ಹಿಂದೆ ಮಳೆಯಾದ ಸಂದರ್ಭದಲ್ಲಿ ಸೇತುವೆ ಮೇಲೆ ಸಂಗ್ರಹಗೊಂಡಿದ್ದ ನೀರನ್ನು ಜೆಸಿಬಿ ಬಳಸಿ ಹೊರಗೆ ಹಾಕಲಾಯಿತು.

‘ಕಾಮಗಾರಿ ಪೂರ್ಣಗೊಳ್ಳದೆ ವಾಹನಗಳು, ಜನಸಾಮಾನ್ಯರು ಪ್ರತಿದಿನ ಒಂದಲ್ಲೊಂದು ತೊಂದರೆ ಗೀಡಾಗುತ್ತಿದ್ದಾರೆ. ಈಗಾಗಲೇ ಸಂಘ ಸಂಸ್ಥೆಗಳು ಹಾಗೂ ನಾಗರಿಕರು ಹಲವು ಬಾರಿ ಪ್ರತಿಭಟನೆ ಮಾಡಿ ದರೂ ಕಾಮಗಾರಿ ಚುರುಕು ಗೊಂಡಿಲ್ಲ. ಕೂಡಲೇ ಕಾಮಗಾರಿ ಪೂರ್ಣಗೊಳಿಸ ದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ಎಚ್ಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು